ADVERTISEMENT

ಕ್ರೇಜಿಸ್ಟಾರ್‌ ಪುತ್ರನ ‘ಸೂಪರ್‌ ಸ್ಟಾರ್‌’ ಕನಸು

‘ಮುಗಿಲ್‌ಪೇಟೆ’ ಚಿತ್ರದ ನಾಯಕ ಮನೋರಂಜನ್‌ ಮನದ ಮಾತು

ಕೆ.ಎಂ.ಸಂತೋಷ್‌ ಕುಮಾರ್‌
Published 12 ಡಿಸೆಂಬರ್ 2019, 19:30 IST
Last Updated 12 ಡಿಸೆಂಬರ್ 2019, 19:30 IST
   

ಇನ್ನಷ್ಟೇ ತೆರೆಕಾಣಬೇಕಿರುವ ‘ಪ್ರಾರಂಭ’ ಚಿತ್ರವನ್ನು ಹೊಸ ವರ್ಷದಲ್ಲಿ ಪ್ರೇಕ್ಷಕರ ಮುಂದಿಡುವ ಯೋಜನೆ ಮನುರಂಜನ್‌ಗೆ ಇದೆ. ಬರುವ ಜನವರಿ 24 ಅಥವಾ ಫೆಬ್ರುವರಿ ಮೊದಲ ವಾರ ಬಿಡುಗಡೆ ಮಾಡುವ ಸಿದ್ಧತೆಯಲ್ಲಿದ್ದಾರೆ.

ಕ್ರೇಜಿಸ್ಟಾರ್‌ ರವಿಚಂದ್ರನ್‌ ಪುತ್ರ ಮನುರಂಜನ್‌ ನಾಯಕನಾಗಿ ನಟಿಸುತ್ತಿರುವ ಬಹು ನಿರೀಕ್ಷಿತ ಚಿತ್ರ ‘ಮುಗಿಲ್‌ಪೇಟೆ’ ಚಿತ್ರದ ಚಿತ್ರೀಕರಣ ಸಕಲೇಶಪುರದ ನಿಸರ್ಗದ ಮಡಿಲಿನಲ್ಲಿ ಭರದಿಂದ ನಡೆಯುತ್ತಿದೆ. ‘ಸಾಹೇಬ’, ‘ಬೃಹಸ್ಪತಿ’, ‘ಪ್ರಾರಂಭ’ ಚಿತ್ರಗಳ ನಂತರ ‘ಮುಗಿಲ್‌ಪೇಟೆ’ ಮನುರಂಜನ್‌ಗೆ ನಾಲ್ಕನೇ ಚಿತ್ರ. ಮೊದಲ ಬಾರಿಗೆ ಅವರು ಕಮರ್ಷಿಯಲ್‌ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇವರಿಗೆ ನಾಯಕಿಯಾಗಿ ಅಸ್ಸಾಂ ಬೆಡಗಿ ಕಯಾದು ಲೋಹರ್‌ ಕಾಣಿಸಿಕೊಳ್ಳುತ್ತಿದ್ದಾರೆ.ಈ ಚಿತ್ರಕ್ಕೆಭರತ್‌ ಎಸ್‌. ನಾವುಂದ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ರಕ್ಷಾ ವಿಜಯ್‌ಕುಮಾರ್‌ ಬಂಡವಾಳ ಹೂಡಿದ್ದಾರೆ.

ಮನುರಂಚನ್‌ ಹುಟ್ಟಿದ ದಿನ ಡಿ.11. ಮೂರು ದಿನ ಮುಂಚಿತವಾಗಿಯೇ ಅವರ ಹುಟ್ಟು ಹಬ್ಬವನ್ನು ಚಿತ್ರತಂಡವು ಸಕಲೇಶಪುರದಲ್ಲಿ ‘ಮುಗಿಲ್‌ಪೇಟೆ’ ಚಿತ್ರದ ಮೊದಲ ಪತ್ರಿಕಾಗೋಷ್ಠಿಯಲ್ಲಿ ಆಚರಿಸಿತು. ಮಾಧ್ಯಮ ಪ್ರತಿನಿಧಿಗಳೊಂದಿಗೆ ರಾತ್ರಿ ‌ಲೋಕಾಭಿರಾಮವಾಗಿ ಮಾತಿಗೆ ಕುಳಿತ ಮನುರಂಜನ್‌, ತಮ್ಮ ಚಿತ್ರ ಬದುಕಿನ ಕನಸುಗಳನ್ನು ತೆರೆದಿಟ್ಟರು.

ADVERTISEMENT

‘ಸಾಹೇಬ’ದಲ್ಲಿ ನಟಿಸಿದ್ದ ಮನೋರಂಜನ್‌ ಇವರೇನಾ? ಎಂದು ಚಕಿತಗೊಳ್ಳುವಷ್ಟು ಅವರ ಮೈಕಟ್ಟು, ಮಾತುಗಾರಿಕೆ, ದೇಹಭಾಷೆ ಅಷ್ಟೇ ಅಲ್ಲ ಹೆಸರನ್ನೂ ಮನುರಂಜನ್‌ ಆಗಿ ಬದಲಿಸಿಕೊಂಡು, ಹೊಸ ಗೆಟಪ್‌ನಲ್ಲಿ ಕಾಣಿಸುತ್ತಿದ್ದಾರೆ. ಕ್ರೇಜಿಸ್ಟಾರ್‌ ಮಗ ಎನ್ನುವ ಹಮ್ಮು–ಬಿಮ್ಮು ಇಲ್ಲ. ಮೊದಲೆರಡು ಸಿನಿಮಾಗಳು ನಿರೀಕ್ಷಿತ ಫಲ ನೀಡದ ಕಾರಣಕ್ಕೆ ಈಗ ಪಾತ್ರಗಳ ಆಯ್ಕೆಯಲ್ಲೂ ಜಾಣ್ಮೆ ವಹಿಸುತ್ತಿರುವುದು ಅವರ ಮಾತಿನಲ್ಲೇ ವ್ಯಕ್ತವಾಯಿತು.

‘ಮೊದಲ ಸಿನಿಮಾದ ಪಾತ್ರತುಂಬಾ ಮೃದು ಸ್ವಭಾವದ್ದು. ರವಿಚಂದ್ರನ್‌ ಮಗ ಎಂದಾಕ್ಷಣ ಸಿನಿಮಾ ಅದ್ಧೂರಿಆಗಿರುತ್ತದೆ. ಲವ್‌, ಆ್ಯಕ್ಷನ್‌ ದೃಶ್ಯಗಳು ‌ಹೇರಳವಾಗಿರುತ್ತವೆ ಎಂದು ಪ್ರೇಕ್ಷಕರು ನಿರೀಕ್ಷಿಸಿದ್ದರು. ಆದರೆ, ನಾನು ಪಾತ್ರವಾಗಿ ಅಭಿನಯಿಸಿ ಕಥೆಯನ್ನು ಹೀರೊ ಮಾಡಿದೆ. ನನ್ನ ಪಾತ್ರದ ಬಗ್ಗೆ ಕೆಟ್ಟ ವಿಮರ್ಶೆಯೇನು ಬರಲಿಲ್ಲ.ನಿಜವಾಗಿ ಹೇಳಬೇಕೆಂದರೆ ಒಳ್ಳೆಯ ಪ್ರಾರಂಭವೇ ಸಿಕ್ಕಿತು. ಆದರೆ, ‘ಬೃಹಸ್ಪತಿ’ ಯಶಸ್ಸು ಕೊಡಲಿಲ್ಲ. ಇದು ತಮಿಳಿನ ‘ವಿಐಪಿ’ ಚಿತ್ರದ ರೀಮೇಕ್‌ ಆಗಿದ್ದರಿಂದ ಪ್ರೇಕ್ಷಕರಿಗೆ ಧನುಷ್‌ ಕಾಣಿಸಿದರೇ ಹೊರತು ನಾನು ಕಾಣಿಸಲಿಲ್ಲ. ಆನಂತರ ಕೆಲ ಸಮಯ ನಟನೆಯಿಂದ ಬಿಡುವು ಪಡೆದೆ. ಮತ್ತೆ ಚಿತ್ರರಂಗಕ್ಕೆ ವಾಪಸಾದ ಮೇಲೆ ‘ಚಿಲ್ಲಂ’ ಒಪ್ಪಿಕೊಂಡೆ. ಅದರಲ್ಲಿ ನನ್ನದುನೆಗೆಟಿವ್‌ ಪಾತ್ರ. ಆದರೆ, ನಿರ್ಮಾಪಕರ ಸಮಸ್ಯೆಯಿಂದಾಗಿ ಅದು ಅರ್ಧಕ್ಕೆ ನಿಂತಿದೆ.ಆ ಚಿತ್ರವನ್ನು ಕೈಬಿಡುವುದಿಲ್ಲ.ಮುಂದಿನ ವರ್ಷ ಆ ಚಿತ್ರವನ್ನು ಮತ್ತೆ ಶುರು ಮಾಡುತ್ತೇವೆ’ ಎಂದು ಮಾತು ವಿಸ್ತರಿಸಿದರು.

ತಮ್ಮ ತಂದೆ ರವಿಚಂದ್ರನ್‌ ಮತ್ತೊಮ್ಮೆ ನಿರ್ದೇಶಿಸಲಿರುವ‘ರಣಧೀರ’ ಚಿತ್ರದ ಬಗ್ಗೆ ಮಾತು ಹೊರಳಿಸಿದ ಅವರು, ‘ನಾನು ಮೊದಲೇ ‘ರಣಧೀರ’ ಸಿನಿಮಾ ಮಾಡಿದ್ದರೆ ನನಗೆ ಒಂದು ವಿಭಿನ್ನ ಆರಂಭ ಸಿಗುತ್ತಿತ್ತು. ನಾನು ಇವತ್ತು ಒಬ್ಬ ಸ್ಟಾರ್‌ ನಟನಾಗಿರುತ್ತಿದ್ದೆ. ಆದರೆ, ನನ್ನ ತಂದೆ ‘ಚಿತ್ರೋದ್ಯಮದೊಳಗೆ ಕಾಲಿಟ್ಟು ಅಲ್ಲಿ ಏನಿದೆ, ಎಷ್ಟು ಕಷ್ಟ ಇದೆ ಎನ್ನುವುದನ್ನು ಮೊದಲು ತಿಳಿದುಕೊಳ್ಳಿ. ನಾನು ಯಾವಾಗಲೂ ನಿನ್ನ ಹಿಂದೆ ಇದ್ದೇ ಇರುತ್ತೇನೆ. ನೀನು ಸೋತರೆ ನಿನ್ನನ್ನು ನಾನು ಮೇಲೆತ್ತುತ್ತೇನೆ’ ಎಂದರು. ಹಾಗಾಗಿ ನಾನು ನನ್ನ ಸಿನಿ ಪಯಣವನ್ನು ‘ಸಾಹೇಬ’ನಾಗಿ ಆರಂಭಿಸಿದೆ. ನನ್ನ ತಮ್ಮ ಕೂಡ ನನ್ನ ರೀತಿಯೇ ಸಿನಿ ಬದುಕು ಆರಂಭಿಸಿದ್ದಾನೆ. ‌ಹೆಸರಿದ್ದರೆ ಇಲ್ಲಿ ವರ್ಕೌಟ್‌ ಆಗಲ್ಲ ಎನ್ನುವುದು ಗೊತ್ತಾಗಿದೆ. ರವಿಚಂದ್ರನ್‌ ಮಗ ಎಂದಾಕ್ಷಣ ಚೆನ್ನಾಗಿ ಟ್ರೀಟ್‌ ಮಾಡುತ್ತಾರೆ ಎನ್ನುವುದಿಲ್ಲ. ಎಲ್ಲರಿಗೂ ಸಕ್ಸಸ್‌ ಬೇಕು. ಅದನ್ನು ನಾನು ಈ ಮೂರು ವರ್ಷದಲ್ಲಿ ಅರಿತಿದ್ದೇನೆ. ಸಕ್ಸಸ್‌ ಇದ್ದರೆ ಜತೆಗೆ ಇರುತ್ತಾರೆ. ರವಿಚಂದ್ರನ್‌ ಮಗ ಎನ್ನುವ ಸ್ಟ್ರಾಂಗ್‌ ಪಾಯಿಂಟ್‌ ನನ್ನ ಭುಜದ ಮೇಲೆ ಯಾವಾಗಲೂ ಇರುತ್ತದೆ. ಆದರೆ, ನಾನೊಬ್ಬ ನಟ ಎನ್ನುವುದನ್ನು ಅಭಿನಯದ ಮೂಲಕವೇ ಸಾಬೀತುಪಡಿಸಬೇಕು. ಜನರು ಮೆಚ್ಚಿದರೆ ಮಾತ್ರ ನಾನು ಸೂಪರ್‌ ಸ್ಟಾರ್‌ ಆಗಲು ಸಾಧ್ಯ ಎನ್ನುವ ಅರಿವೂ ಇದೆ’ ಎಂದರು.

‘ಮುಗಿಲ್‌ಪೇಟೆ’ಯತ್ತ ಮಾತು ಹೊರಳಿದಾಗ, ‘ಈ ಚಿತ್ರದ ಕಥೆ ಎರಡು ವರ್ಷಗಳ ಹಿಂದೆಯೇ ಬಂದಿತ್ತು. ನನಗೂ ಕಮರ್ಷಿಯಲ್‌ ಸಿನಿಮಾದಲ್ಲಿ ನಟಿಸುವ ಆಸೆ ಇತ್ತು. ನಿರ್ದೇಶಕ ಭರತ್‌ ನನ್ನನ್ನು ತುಂಬಾ ಬೇರೆಯದೇ ರೀತಿಯಲ್ಲಿ ಕಲ್ಪಿಸಿ, ‘ನಿಮ್ಮೊಳಗೊಬ್ಬ ಮಾಸ್‌ ಹೀರೊ ಇದ್ದಾನೆ. ಆ ಹೀರೊನನ್ನು ನಾನು ಹೊರಗೆ ತರುತ್ತೇನೆ’ ಎಂದು ತುಂಬಾ ಪ್ಲಾನ್‌ ಮಾಡಿ ಈ ಚಿತ್ರ ಮಾಡುತ್ತಿದ್ದಾನೆ.ನಾನುಕಮರ್ಷಿಯಲ್‌ ಸಿನಿಮಾ ಮಾಡುವುದಿಲ್ಲ ಎನ್ನುವ ದೂರುಗಳೂ ನನ್ನ ಮೇಲಿದ್ದವು. ಹಾಗಾಗಿ ತುಂಬಾ ಯೋಚಿಸಿಯೇ ಈ ಚಿತ್ರ ಒಪ್ಪಿಕೊಂಡಿದ್ದೇನೆ’ ಎಂದರು.

‘ಹೊಸ ನಿರ್ದೇಶಕರ ಜತೆಗೆ ಕೆಲಸ ಮಾಡಲು ನನಗೆ ಯಾವುದೇ ಹಿಂಜರಿಕೆ ಇಲ್ಲ. ಈಗ ಮಾಡಿರುವ ಎಲ್ಲ ಸಿನಿಮಾಗಳು ಹೊಸ ನಿರ್ದೇಶಕರ ಜತೆಯೇ.ಒಮ್ಮೆ ಹಿಟ್‌ ಕೊಟ್ಟ ನಿರ್ದೇಶಕರೇ ಮತ್ತೆ ಹಿಟ್‌ ಕೊಡುತ್ತಾರೆ ಎನ್ನುವ ತರ್ಕದಲ್ಲಿ ನನಗೆ ಎಳ್ಳಷ್ಟು ನಂಬಿಕೆ ಇಲ್ಲ.ನನಗೆ ಭರತ್‌ ಹೊಸಬರೇ. ಅವರ ಮೊದಲ ಚಿತ್ರ ‘ಅಡಚಣೆಗಾಗಿ ಕ್ಷಮಿಸಿ’ ಬಹಳಷ್ಟು ಜನರಿಗೆ ಗೊತ್ತಿಲ್ಲ. ಅವರು ಕಥೆ ಹೇಳಿದ ರೀತಿಯಿಂದಲೇ ಅವರಲ್ಲಿರುವ ನಿರ್ದೇಶನದ ಪ್ರತಿಭೆ, ಚಿತ್ರದ ಮೇಲಿನ ಪ್ಯಾಷನ್‌ ಕಾಣಿಸಿತು.ನಾನು ಈಗ ನಟಿಸುತ್ತಿರುವ ಸಿನಿಮಾಗಳಿಂದ ಸ್ಟಾರ್‌ ನಟನಾಗುತ್ತೇನೆ, ಹಾಗೆಯೇ ಅಪ್ಪ ನನಗಾಗಿ ಮಾಡಲಿರುವ ‘ರಣಧೀರ’ ಚಿತ್ರದಿಂದ ಸೂಪರ್‌ ಸ್ಟಾರ್‌ ಆಗಿ ಹೊರಹೊಮ್ಮುತ್ತೇನೆ’ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು ಮನೋರಂಜನ್‌.

ಈ ಉದಯೋನ್ಮುಖ ನಟನಿಗೆ ವಿಭಿನ್ನ ಪಾತ್ರಗಳಲ್ಲಿ ನಟಿಸುವ ತುಡಿತ ಇರುವುದು ಅವರ ಮಾತಿನಲ್ಲಿ ಆಗಾಗ ಇಣುಕುತ್ತಲೂ ಇತ್ತು. ‘ನಾನು ಒಂದೇಶೈಲಿಯ ಸಿನಿಮಾಕ್ಕೆ ಅಂಟಿಕೊಳ್ಳುವುದಿಲ್ಲ. ‘ಮುಗಿಲ್‌ಪೇಟೆ’ ನಂತರ ಮತ್ತೆ ಬೇರೆಯದ ಜಾನರ್‌ನ ಸಿನಿಮಾ ಮಾಡುತ್ತೇನೆ. ವರ್ಷಕ್ಕೆ ಅಥವಾ ಎರಡು ವರ್ಷಕ್ಕೆ ಒಂದು ಪ್ರಯೋಗಾತ್ಮಕ ಸಿನಿಮಾ ಮಾಡುವ ಗುರಿಯೂ ಇದೆ’ ಎಂದರು.

ಡಬ್ಬಿಂಗ್‌ ಮಾಡುವಾಗ ಉಚ್ಛಾರಣೆಯಲ್ಲಿ ತೊಡರುತ್ತಿದ್ದುದನ್ನುಸರಿಪಡಿಸಿಕೊಂಡಿರುವುದಾಗಿ ಅವರು ಖುಷಿಯಿಂದ ಹೇಳಿಕೊಂಡರು ಮನೋರಂಜನ್‌. ‘ಕನ್ನಡ ಸರಿಯಾಗಿ ನುಡಿದು ಮಾತನಾಡುವುದಿಲ್ಲವೆಂದು ಎಲ್ಲರೂ ಬೈಯುತ್ತಿದ್ದರು. ‘ನ’ ಮತ್ತು ‘ಣ’ ಉಚ್ಛಾರಣೆಯಲ್ಲಿ ಎಡವುತ್ತಿದ್ದೆ. ಈಗ ಅದುಸುಧಾರಿಸಿದೆ. ಪ್ರತಿ ದಿನ ಬೆಳಿಗ್ಗೆ ಅರ್ಧಗಂಟೆ ಗಟ್ಟಿ ಧ್ವನಿಯಲ್ಲಿ ಕನ್ನಡ ಪತ್ರಿಕೆಗಳನ್ನು ಓದುತ್ತೇನೆ’ ಎಂದರು.

‘ನನಗೆ ನಿರ್ದೇಶನ ಮಾಡುವಷ್ಟು ತಲೆಯೂ ಇಲ್ಲ, ತಾಳ್ಮೆಯೂ ಇಲ್ಲ. ಸ್ಕ್ರಿಪ್ಟ್‌ ಓದುತ್ತೇನೆ. ಆ್ಯಕ್ಟ್‌ ಮಾಡುತ್ತೇನೆ. ಸಮಯ ಸಿಕ್ಕಾಗ ಜಿಮ್‌ಗೆ ಹೋಗುತ್ತೇನೆ. ಸ್ನೇಹಿತರೊಟ್ಟಿಗೆ ಬ್ಯಾಡ್ಮಿಂಟನ್‌ ಆಡುತ್ತೇನೆ. ಸಿನಿಮಾ ನೋಡುತ್ತೇನೆ. ಸುತ್ತಾಡುತ್ತೇನೆ.ನಾನು ನೋಡಲು ಮಾತ್ರ ತಂದೆಯಂತೆ ಇದ್ದೇನೆ. ಆದರೆ, ನನ್ನ ತಮ್ಮ ತಂದೆಯಂತೆ ನಟನೆ, ನಿರ್ದೇಶನ, ಕಥೆ, ಚಿತ್ರಕಥೆ, ಸಂಭಾಷಣೆ ಎಲ್ಲವನ್ನೂ ನಿಭಾಯಿಸುತ್ತಾನೆ. ಇನ್ನು ಎರಡು ವರ್ಷಗಳಲ್ಲಿ ಅವನು, ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ನಿಭಾಯಿಸುವುದನ್ನು ನೋಡುತ್ತೀರಿ. ನಾನು ನಮ್ಮ ತಾತ ವೀರಸ್ವಾಮಿ ಅವರಂತೆನಿರ್ಮಾಪಕನಾಗಲು ಇಷ್ಟಪಡುತ್ತೇನೆ’ ಎಂದರು.

ಖಾಸಗಿ ಬದುಕಿನ ಬಗ್ಗೆಯೂ ಚುಟುಕಾಗಿ ಮಾತನಾಡಿದ ಅವರು, ‘ಮುಂದಿನ ವರ್ಷ ಮದುವೆಯಾಗಬೇಕೆಂದುಕೊಂಡಿದ್ದೇನೆ.ಅದು ಅರೆಂಜ್ಡ್‌ ಮ್ಯಾರೇಜ್‌. ನನಗೆ ಯಾರೊಂದಿಗಾದರೂ ಲವ್‌ ಇದ್ದರೆ ಇಷ್ಟೊತ್ತಿಗೆ ನಿಮಗೆಲ್ಲ ಗೊತ್ತಾಗಿರುತ್ತಿತ್ತು’ ಎಂದು ನಗುತ್ತಲೇ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.