ಬಾಲಿವುಡ್‌ನಲ್ಲಿ ಆಳವಾಗಿ ಬೇರೂರಿವ ಸ್ವಜನಪಕ್ಷಪಾತದ ನಡುವೆಯೂ ಹೇಗೆ ಬದುಕು ಕಟ್ಟಿಕೊಂಡಿರಿ?ಯಾವುದೇ ಗಾಡ್ ಫಾದರ್ ಇಲ್ಲದೆ ಹೇಗೆ ವೃತ್ತಿ ಬದುಕಿನಲ್ಲಿ ಯಶಸ್ವಿಯಾದಿರಿ?
– ಇದು ಮಾಜಿ ವಿಶ್ವ ಸುಂದರಿ ಸುಷ್ಮಿತಾ ಸೇನ್ ಟ್ವಿಟರ್‌ನಲ್ಲಿ ನಡೆಸಿದ ‘ಆಸ್ಕ್ ಮಿ ಎನಿಥಿಂಗ್’ ಅಭಿಯಾನದಲ್ಲಿ ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆ.
‘ನಾನು ಬಾಲಿವುಡ್‌ನಲ್ಲಿ ನಟಿಯಾಗಿ ಉಳಿದಿದ್ದು ನನ್ನ ಪ್ರೇಕ್ಷಕರು ಮತ್ತು ಅಭಿಮಾನಿಗಳ ಆಶೀರ್ವಾದಿಂದ ಮಾತ್ರ. ಬಾಲಿವುಡ್‌ನಲ್ಲಿ ನಾನು ವೃತ್ತಿಬದುಕಿನ ಬಗ್ಗೆ ಮಾತ್ರ ಗಮನ ಹರಿಸಿದೆ. ಪ್ರೇಕ್ಷಕರು ನನ್ನಿಂದ ಏನು ಬಯಸುತ್ತಾರೆ ಮತ್ತು ಮರಳಿ ನಾನು ಅವರಿಗೆ ಏನು ನೀಡಬೇಕು ಎಂಬ ಬಗ್ಗೆ ಮಾತ್ರ ನನ್ನ ಲಕ್ಷ್ಯವಿತ್ತು. ನೀವು ಬಯಸುವವರೆಗೂ ನಾನು ನಟಿಯಾಗಿ ಇಲ್ಲಿ ಇರುತ್ತೇನೆ’ ಎಂದು ಸುಷ್ಮಿತಾ ಹೇಳಿದ್ದಾರೆ.
ಸಿನಿಮಾ ಕುಟುಂಬದ ಹಿನ್ನೆಲೆ ಇರುವ ಕುಡಿಗಳ ‘ಬಾಲಿವುಡ್ ಪ್ರಿವಿಲೇಜ್ ಕ್ಲಬ್’ ಸದಸ್ಯರಾಗಿದ್ದರೆ ಮಾತ್ರಬಾಲಿವುಡ್‌ನಲ್ಲಿ ಉಳಿಯಲು ಸಾಧ್ಯ. ಇಲ್ಲವೇ ಯಾರಾದರೊಬ್ಬರು ಗಾಡ್‌ಫಾದರ್ ಬೇಕು. ಇವೆರೆಡೂ ಇಲ್ಲದಿದ್ದರೂ ನೀವು ಬಾಲಿವುಡ್‌ನಲ್ಲಿ ಹೇಗೆ ನೆಲೆ ನಿಂತಿದ್ದೀರಿ ಎನ್ನುವುದೇ ಆಶ್ಚರ್ಯ ಎಂದು ಬಹಳಷ್ಟು ಅಭಿಮಾನಿಗಳು ಪ್ರಶ್ನಿಸಿದ್ದಾರೆ.
1996ರಲ್ಲಿ ಬಿಡುಗಡೆಯಾದ ‘ದಸ್ತಕ್’ ಚಿತ್ರದಿಂದ ಸುಷ್ಮಿತಾ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದರು. 2010ರಲ್ಲಿ ‘ನೋ ಪ್ರಾಬ್ಲಮ್’ ಚಿತ್ರದ ನಂತರ ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ. ಅದಾದ ನಂತರ ‘ಆರ್ಯ’ ವೆಬ್ ಸಿರೀಸ್ ಮೂಲಕ ಮತ್ತೆ ಮರಳಿದ್ದಾರೆ.
‘ಬಾಲಿವುಡ್‌ನಲ್ಲಿ ನಾನು ಯಾರೊಂದಿಗೆ ಅಷ್ಟು ಸಲುಗೆಯಿಂದ ಇಲ್ಲ. ವೈಯಕ್ತಿಕ ಬದುಕಿನಲ್ಲಿ ನಂಬಿದವರು ದ್ರೋಹ ಬಗೆದರು’ ಎಂದುವೃತ್ತಿ ಬದುಕು, ವೈಯಕ್ತಿಕ ಜೀವನದ ಕುರಿತು ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಸುಷ್ಮಿತಾ ಮುಕ್ತವಾಗಿ ಉತ್ತರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.