ಮುಂಬೈ: ದುರ್ಗಾ ಪೂಜೆ ಆಚರಣೆ ವೇಳೆ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಶನಿವಾರ ತನ್ನ ಹೆಣ್ಣುಮಕ್ಕಳೊಂದಿಗೆ ಹೆಜ್ಜೆ ಹಾಕಿದ್ದಾರೆ. ಗುಲಾಬಿ ಬಣ್ಣದ ಬಂಧನಿ ಸೀರೆಯಲ್ಲಿ ಸುಂದರವಾಗಿ ಕಾಣುತ್ತಿದ್ದ ನಟಿ ತನ್ನ ಮಗಳು ರೆನೀ ಸೇನ್‌ಳೊಂದಿಗೆ ಸಾಂಪ್ರದಾಯಿಕ ಧುನುಚಿ ನೃತ್ಯವನ್ನು ಮಾಡಿದರು. ಇತ್ತ, ಕಿರಿಯ ಮಗಳು ಅಲಿಸಾ ಸೇನ್ ಪಿಂಕ್ ಲೆಹೆಂಗಾದಲ್ಲಿ ಮಿಂಚಿದರು. ಸುಶ್ಮಿತಾ ಅವರ ತಾಯಿ ಶುಭ್ರ ಸೇನ್ ಕಪ್ಪು ಸೀರೆಯುಟ್ಟು ಮಗಳು, ಮೊಮ್ಮಕ್ಕಳ ಜೊತೆ ಸಂಭ್ರಮಕ್ಕೆ ಸಾಕ್ಷಿಯಾದರು.
ವಿಡಿಯೊಗ್ರಾಫರ್ ಒಬ್ಬರು ಸುಶ್ಮಿತಾ ಅವರು ರೆನೀ ಸೇನ್ ಅವರೊಂದಿಗೆ ಧುನುಚಿ ನೃತ್ಯ ಮಾಡುತ್ತಿರುವ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ರೆನೀ ಕೆಂಪು ಸೀರೆಯಲ್ಲಿ ಸಿಲ್ವರ್ ಹಾಲ್ಟರ್ ಬ್ಲೌಸ್ ಮತ್ತು ಕನ್ನಡಕದೊಂದಿಗೆ ಕಾಣಿಸಿಕೊಂಡಿದ್ದಾರೆ. ದುರ್ಗಾ ಪೂಜಾ ಪಂಡಲ್‌ನಲ್ಲಿ ಆರತಿಯ ನಂತರ ಕೈಯಲ್ಲಿ ಮಣ್ಣಿನ ಮಡಕೆ ಹಿಡಿದು ಇಬ್ಬರೂ ನೃತ್ಯ ಮಾಡಿದ್ದಾರೆ.
ಈ ವರ್ಷದ ಆರಂಭದಲ್ಲಿ ಸುಶ್ಮಿತಾ ಸೇನ್ ಅವರಿಗೆ ಹೃದಯಾಘಾತವಾಗಿತ್ತು. ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದರು.
ಮಾರ್ಚ್ 4ರಂದು ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಮಾತನಾಡಿದ್ದ 47 ವರ್ಷದ ನಟಿ, ದೊಡ್ಡ ಹೃದಯಾಘಾತದ ಬಳಿಕವೂ ನಾನು ಬದುಕುಳಿದೆ. ನನ್ನ ಅನಾರೋಗ್ಯಕ್ಕೆ ಜೀವನಶೈಲಿಯೇ ಕಾರಣ ಎಂದು ಹೇಳಿದ್ದರು.
ಸುಶ್ಮಿತಾಗೆ ಆಡಿಸನ್ ಕಾಯಿಲೆ ಇರುವುದು 2014ರಲ್ಲಿ ಪತ್ತೆಯಾಗಿತ್ತು. ಚಿಕ್ಕ ವಯಸ್ಸಿನಿಂದಲೇ ಹೃದಯದ ಆರೋಗ್ಯದ ಬಗ್ಗೆ ಕಾಳಜಿವಹಿಸುವಂತೆ ಅಭಿಮಾನಿಗಳಿಗೆ ಅವರು ಮನವಿ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.