ಮುಂಬೈ:ನಕಲಿ ಪಿಎಚ್‌ಡಿ ಪದವಿ ತೋರಿಸಿ ಆಸ್ಪತ್ರೆಯಲ್ಲಿ ಕೆಲಸ ಪಡೆದಿದ್ದ ಆರೋಪಕ್ಕೆ ಸಂಬಂಧಿಸಿ ಸಿನಿಮಾ ನಿರ್ಮಾಪಕಿ ಸ್ವಪ್ನಾ ಪಾಟಕರ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
39 ವರ್ಷದ ಪಾಟಕರ್ ಕ್ಲಿನಿಕಲ್ ಫಿಸಿಯೋಲಜಿಯಲ್ಲಿ ಪಿಎಚ್‌ಡಿ ಮಾಡಿರುವುದಾಗಿ ದಾಖಲೆಗಳನ್ನು ತೋರಿಸಿ ಆಸ್ಪತ್ರೆಯಲ್ಲಿ ಕೆಲಸ ಗಿಟ್ಟಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಶಿವಸೇನೆ ಸ್ಥಾಪಕ ಬಾಳ್ ಠಾಕ್ರೆ ಅವರ ಜೀವನಾಧರಿತ ಚಿತ್ರ ಮರಾಠಿಯ 'ಬಾಳ್ ಕಡು' ಚಿತ್ರವನ್ನು ಸ್ವಪ್ನಾ ನಿರ್ಮಿಸಿದ್ದರು. 2015ರಲ್ಲಿ ಸಿನಿಮಾ ಬಿಡುಗಡೆಯಾಗಿತ್ತು.
ಮುಂಬೈನ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಮೇ 26ರಂದು ನಕಲಿ ಪಿಎಚ್‌ಡಿ ಹೊಂದಿರುವ ದೂರು ದಾಖಲಾಗಿತ್ತು. ವಂಚನೆ, ನಕಲು ಮತ್ತು ಮೋಸ ಮಾಡುವುದಕ್ಕಾಗಿ ನಕಲು ಮಾಡಿದ ಆರೋಪಗಳು ಸ್ವಪ್ನಾ ಅವರ ಮೇಲಿವೆ. ಐಪಿಸಿ ಕಾಯ್ದೆ 419, 420, 467 ಮತ್ತು 468 ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
2016ರಿಂದ, ಬಾಂದ್ರಾದಲ್ಲಿರುವ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಕ್ಲಿನಿಕಲ್ ಸೈಕಾಲಜಿಸ್ಟ್ ಆಗಿ ಪ್ರಾಕ್ಟೀಸ್ ಮಾಡುತ್ತಿದ್ದರು. ಮಾನಸಿಕ ಆರೋಗ್ಯ ಸಂಬಂಧಿಸಿ ರೋಗಿಗಳಿಗೆ ಉಪಚರಿಸುತ್ತಿದ್ದರು.
51 ವರ್ಷದ ಸಾಮಾಜಿಕ ಕಾರ್ಯಕರ್ತ ಗುರ್‌ದೀಪ್ ಕೌರ್ ಸಿಂಗ್ ಅವರು ಪಾಟಕರ್ ವಿರುದ್ಧ ದೂರು ದಾಖಲಿಸಿದ್ದರು. ಗುರ್‌ದೀಪ್ ಅವರಿಗೆ ನಕಲಿ ಪಿಎಚ್‌ಡಿ ಪಡೆದಿರುವ ದಾಖಲೆಪತ್ರಗಳು ಏಪ್ರಿಲ್‌ನಲ್ಲಿ ಪೋಸ್ಟ್ ಮೂಲಕ ಅವರಿಗೆ ತಲುಪಿದ್ದವು.
ಕಾನ್ಪುರದ ಛತ್ರಪತಿ ಶಾಹೂಜಿ ಮಹಾರಾಜ್ ಯೂನಿವರ್ಸಿಟಿಯಲ್ಲಿ 2009ರಲ್ಲಿ ಪಡೆದಿರುವ ಪಿಎಚ್‌ಡಿ ಪದವಿ ನಕಲಿ ಎಂಬುದು ದಾಖಲೆಗಳಿಂದ ತಿಳಿದು ಬಂದಿದೆ ಎಂದು ಗುರ್‌ದೀಪ್ ಕೌರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.