ನಟಿ ರಮ್ಯಾ ಅವರ ನಿರ್ಮಾಣದ ಚೊಚ್ಚಲ ಚಿತ್ರ, ರಾಜ್ ಬಿ.ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರಕ್ಕೆ ಇದೀಗ ಸಂಕಷ್ಟ ಎದುರಾಗಿದೆ. ಈ ಶೀರ್ಷಿಕೆಯನ್ನು ಬಳಸಕೂಡದು ಎಂದು ಆಗ್ರಹಿಸಿ ಖ್ಯಾತ ನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್ ಬಾಬು ಅವರು ತಮ್ಮ ವಕೀಲರ ಮೂಲಕ ಇದೀಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೋಟಿಸ್ ಕಳುಹಿಸಿದ್ದಾರೆ.
ಕಳೆದ ಅ.5ರಂದು, ತಮ್ಮಆ್ಯಪಲ್ ಬಾಕ್ಸ್ ಸ್ಟುಡಿಯೋಸ್ ಸಂಸ್ಥೆಯಡಿ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡಿರುವುದರ ಬಗ್ಗೆ ರಮ್ಯಾ ಘೋಷಿಸಿದ್ದರು. ಈ ಸಿನಿಮಾದ ಚಿತ್ರೀಕರಣ ಇತ್ತೀಚೆಗಷ್ಟೇ ಪೂರ್ಣಗೊಂಡಿತ್ತು.
ಇದರ ಬೆನ್ನಲ್ಲೇ ಈ ನೋಟಿಸ್ ಕಳುಹಿಸಲಾಗಿದೆ. ‘ರಾಜೇಂದ್ರಸಿಂಗ್ ಬಾಬು ಅವರು ಮಂಡಳಿಯಲ್ಲಿ ಈಗಾಗಲೇ ತಾವು ನಿರ್ಮಾಣ ಮಾಡುವ ಕನ್ನಡ ಚಲನಚಿತ್ರ ‘ಸ್ವಾತಿ ಮುತ್ತಿನ ಮಳೆ ಹನಿಯೆ’ ಎಂಬ ಶೀರ್ಷಿಕೆ ನೋಂದಣಿ ಮಾಡಿರುತ್ತಾರೆ. ಈ ಚಲನಚಿತ್ರದ ತಾರಾಗಣದಲ್ಲಿ ಅಂಬರೀಶ್, ಸುಹಾಸಿನಿ ಮತ್ತು ಇತರೆ ಕಲಾವಿದರು ನಟಿಸಿದ್ದು ಶೇ. 80ರಷ್ಟು ಭಾಗದ ಚಿತ್ರೀಕರಣ ಮುಕ್ತಾಯವಾಗಿರುತ್ತದೆ. ಅಂಬರೀಶ್ ಅವರ ನಿಧನದಿಂದ ಚಿತ್ರದ ಚಿತ್ರೀಕರಣವು ಕಾರಣಾಂತರಗಳಿಂದ ಸ್ಥಗಿತವಾಗಿರುತ್ತದೆ. ಈ ಶೀರ್ಷಿಕೆಯು ರಾಜೇಂದ್ರಸಿಂಗ್ ಬಾಬು ಅವರೇ ನಿರ್ದೇಶಿಸಿರುವ ಬಣ್ಣದ ಗೆಜ್ಜೆ ಚಿತ್ರದ ಹಾಡಿನ ಶೀರ್ಷಿಕೆಯಾಗಿರುತ್ತದೆ. ಈ ಶೀರ್ಷಿಕೆಯನ್ನು ಬಳಸಲು ಬೇರೆ ಯಾರಿಗೂ ಯಾವುದೇ ವಿಧವಾದ ಹಕ್ಕು ಇರುವುದಿಲ್ಲ. ಹೀಗೆ ಮಾಡಿದಲ್ಲಿ ಶೀರ್ಷಿಕೆಯ ಕೃತಿಚೌರ್ಯವಾಗುತ್ತದೆ. ಹೀಗಾಗಿ ಈ ಶೀರ್ಷಿಕೆಯ ಹೆಸರನ್ನು ಕೊಡಬಾರದು. ಇದನ್ನು ಕಡೆಗಣಿಸಿ ಶೀರ್ಷಿಕೆಯನ್ನು ಇತರೆ ನಿರ್ಮಾಪಕರಿಗೆ ನೀಡಿದರೆ ಕಾನೂನು ಕ್ರಮ ನಡೆಸಲಾಗುತ್ತದೆ’ ಎಂದು ಇದರಲ್ಲಿ ಉಲ್ಲೇಖಿಸಲಾಗಿದೆ.
ಲೈಟರ್ ಬುದ್ಧ ಫಿಲ್ಮ್ಸ್ ಸಹಯೋಗದಲ್ಲಿ ಈ ಚಿತ್ರವನ್ನು ರಮ್ಯಾ ಅವರು ನಿರ್ಮಾಣ ಮಾಡಿದ್ದರು. ಈ ಚಿತ್ರದಲ್ಲಿ ರಾಜ್ ಅವರೇ ನಾಯಕನ ಪಾತ್ರದಲ್ಲಿ ನಟಿಸಿದ್ದು, ಅವರಿಗೆ ಜೋಡಿಯಾಗಿ ನಟಿ ಸಿರಿ ರವಿಕುಮಾರ್ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.