ಬೆಂಗಳೂರು: ರಾಜ್ ಬಿ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ‘ ಚಿತ್ರ ನವೆಂಬರ್ 24ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ.
ಆಪಲ್ ಬಾಕ್ಸ್ ಸಂಸ್ಥೆ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ರಾಜ್ ಬಿ ಶೆಟ್ಟಿ ಹಾಗೂ ಸಿರಿ ರವಿಕುಮಾರ್ ಇರುವ ಪೋಸ್ಟರ್ ಹಂಚಿಕೊಂಡು, ವಿಜಯದಶಮಿಯ ಶುಭಾಶಯ ಕೋರುವ ಮೂಲಕ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಮಾಡಿದೆ.
ರಮ್ಯಾ ಅವರ ನಿರ್ಮಾಣ ಸಂಸ್ಥೆ ಆ್ಯಪಲ್ ಬಾಕ್ಸ್ ಸ್ಟುಡಿಯೋಸ್‌ನ ಮೊದಲ ಚಿತ್ರ ಇದಾಗಿದ್ದು, ಲೈಟರ್ ಬುದ್ಧ ಫಿಲ್ಮ್ಸ್ ಸಹಯೋಗದಲ್ಲಿ ಈ ಚಿತ್ರ ನಿರ್ಮಾಣವಾಗಿದೆ.
ಹಾಡಿನ ಸಾಲುಗಳಿಂದ ವಿವಾದ
ಈ ಹಿಂದೆ ಸಿನಿಮಾದ ‘ಬಣ್ಣದ ಗೆಜ್ಜೆ’ ಸಿನಿಮಾದ ಹಾಡಿನ ಸಾಲುಗಳನ್ನು ನನ್ನ ಅನುಮತಿ ಇಲ್ಲದೆ ಬಳಸಿ ನಟಿ ರಮ್ಯಾ ಅವರು ಸಿನಿಮಾ ಮಾಡಲು ಮುಂದಾಗಿದ್ದಾರೆ’ ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಆಕ್ಷೇಪಣೆ ಮಾಡಿದ್ದರು. ಈ ಆರೋಪವನ್ನು ಸಿಟಿ ಸಿವಿಲ್ ಕೋರ್ಟ್ ತಳ್ಳಿ ಹಾಕಿತ್ತು.
‘ಹಾಡಿನ ಸಾಲುಗಳನ್ನು ಸಿನಿಮಾ ಟೈಟಲ್ ಆಗಿ ಬಳಸಿದರೆ ಅದು ಕಾಪಿರೈಟ್ ಆಗುವುದಿಲ್ಲ. ಈ ಟೈಟಲ್ ಅನ್ನು ರಮ್ಯಾ ಬೇರೆಯವರಿಂದ ಪಡೆದು ಕೊಂಡಿದ್ದಾರೆ. ಆದ್ದರಿಂದ, ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ಚಿತ್ರೀಕರಣ ನಡೆಸಬಹುದು ಹಾಗೂ ಬಿಡುಗಡೆಯನ್ನೂ ಮಾಡಬಹುದು’ ಎಂದು ಆದೇಶನ ನೀಡಿತ್ತು.
‘ನನ್ನ ಅನುಮತಿ ಇಲ್ಲದೆ ಬಣ್ಣದ ಗೆಜ್ಜೆ ಸಿನಿಮಾದ ಹಾಡುಗಳನ್ನು ಬಳಸಿ ಸಿನಿಮಾ ನಿರ್ಮಾಣ ಮಾಡುವುದು ಕಾಪಿರೈಟ್ ಉಲ್ಲಂಘನೆ’ ಎಂದು ರಾಜೇಂದ್ರ ಸಿಂಗ್ ಬಾಬು ಫಿಲ್ಮ್ ಚೇಂಬರ್‌ಗೂ ದೂರು ನೀಡಿದ್ದರು. ನಂತರ ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.