ADVERTISEMENT

ತಾಪ್ಸಿಗೆ ಸಹಾಯ ಕೋರಿ ಬಾಯ್‌ಫ್ರೆಂಡ್ ಟ್ವೀಟ್; ಸಚಿವರ ಪ್ರತಿಕ್ರಿಯೆ ಏನಾಗಿತ್ತು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಮಾರ್ಚ್ 2021, 8:35 IST
Last Updated 6 ಮಾರ್ಚ್ 2021, 8:35 IST
ನಟಿ ತಾಪ್ಸಿ ಪನ್ನು (ಸಂಗ್ರಹ ಚಿತ್ರ)
ನಟಿ ತಾಪ್ಸಿ ಪನ್ನು (ಸಂಗ್ರಹ ಚಿತ್ರ)   

ಮುಂಬೈ: ಬಾಲಿವುಡ್ ನಟಿ ತಾಪ್ಸಿ ಪನ್ನು ಮನೆಗೆ ಐಟಿ ದಾಳಿ ಬೆನ್ನಲ್ಲೇ ಕೇಂದ್ರ ಕ್ರೀಡಾ ಸಚಿವರ ಸಹಾಯ ಕೋರಿ ನಟಿಯ ಗೆಳೆಯ ಮಥಿಯಾಸ್ ಬೋ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ವೃತ್ತಿಪರ ಕರ್ತವ್ಯಗಳಿಗೆ ಬದ್ಧರಾಗಿರುವಂತೆ ಕ್ರೀಡಾ ಸಚಿವರು ಸಲಹೆ ಮಾಡಿದ್ದಾರೆ.

ತಾಪ್ಸಿ ಪನ್ನು ಬಾಯ್‌ಫ್ರೆಂಡ್ ಮಥಿಯಾಸ್ ಬೋ, ಕೆಲವು ಭಾರತೀಯ ಕ್ರೀಡಾಪಟುಗಳಿಗೆ ತರಬೇತುದಾರನಾಗಿದ್ದು, ಗೆಳತಿಯ ಮನೆಯ ಮೇಲೆ ಐಟಿ ದಾಳಿಯಿಂದ ಮನೆಯಲ್ಲಿ ಅನಗತ್ಯ ಒತ್ತಡ ಉಂಟಾಗುತ್ತಿದೆ ಎಂದು ಟ್ವೀಟ್ ಮಾಡಿದ್ದರು.

ಬಾಲಿವುಡ್ ನಟಿ ತಾಪ್ಸಿ ಪನ್ನು, ನಿರ್ದೇಶಕ ಅನುರಾಗ್ ಕಶ್ಯಪ್ ಮನೆಗಳಿಗೆ ನಡೆಸಿದ ಐಟಿ ದಾಳಿಯಲ್ಲಿ ಕೋಟ್ಯಂತರ ಮೌಲ್ಯದ ಅಕ್ರಮ ಅಸ್ತಿಯನ್ನು ಪತ್ತೆ ಹಚ್ಚಲಾಗಿದೆ ಎಂದು ಆದಾಯ ಇಲಾಖೆ ಗುರುವಾರ ತಿಳಿಸಿತ್ತು.

'ನಾನು ಗೊಂದಲದಲ್ಲಿದ್ದೇನೆ. ಕೆಲವು ಶ್ರೇಷ್ಠ ಕ್ರೀಡಾಪಟುಗಳಿಗೆ ತರಬೇತುದಾರನಾಗಿ ಭಾರತವನ್ನು ಮೊದಲ ಬಾರಿಗೆ ಪ್ರತಿನಿಧಿಸಿದ್ದೇನೆ. ಈ ಮಧ್ಯೆ ತಾಪ್ಸಿ ಪನ್ನು ಮನೆಗೆ ಐಟಿ ದಾಳಿ ನಡೆಯುತ್ತಿದ್ದು, ಆಕೆಯ ಕುಟುಂಬದ ಮೇಲೆ ಅನಗತ್ಯ ಒತ್ತಡ ಹೇರಲಾಗುತ್ತಿದೆ. ವಿಶೇಷವಾಗಿಯೂ ಆಕೆಯ ಪೋಷಕರ ಮೇಲೆ. ಕಿರಣ್ ರಿಜಿಜು ದಯವಿಟ್ಟು ಏನಾದರೂ ಮಾಡಿ' ಎಂದು ಮಥಿಯಾಸ್ ವಿನಂತಿಸಿದ್ದಾರೆ.

ಇದಕ್ಕೆ ಉತ್ತರಿಸಿರುವ ಕ್ರೀಡಾ ಸಚಿವರು, ಕಾನೂನುಗಳು ಸರ್ವೋಚ್ಚವಾಗಿದ್ದು, ನಾವದಕ್ಕೆ ಬದ್ಧರಾಗಿರಬೇಕು. ವಿಷಯ ನಿಮ್ಮ ಹಾಗೂ ನನ್ನ ಪರಿಧಿ ಮೀರಿದ್ದಾಗಿದೆ. ಭಾರತೀಯ ಕ್ರೀಡೆಯ ಹಿತದೃಷ್ಟಿಯಿಂದ ನಾವು ನಮ್ಮ ವೃತ್ತಿಪರ ಕರ್ತವ್ಯಗಳಿಗೆ ಬದ್ಧರಾಗಿರಬೇಕು ಎಂದು ಹೇಳಿದ್ದಾರೆ.

ತಾಪ್ಸಿ ಪನ್ನು ಹಾಗೂ ಕಶ್ಯಪ್ ಸರ್ಕಾರದ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡಿದ್ದರು. ರೈತರ ಪ್ರತಿಭಟನೆ ಹಾಗೂ ಪೌರತ್ವ ಕಾನೂನು ವಿರುದ್ಧ ಧ್ವನಿ ಎತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.