ಇನ್ನು ಮೂರು ವರ್ಷ ಕಳೆದರೆ ನಟಿ ತಬು 50ನೇ ವರ್ಷಕ್ಕೆ ಕಾಲಿಡುತ್ತಾರೆ. ಆದರೆ ಅವರ ಸೌಂದರ್ಯ ಈಗಲೂ ಬಾಲಿವುಡ್‌ಗೆ ಕಾಲಿಟ್ಟ ನಟಿಯರನ್ನು ನಾಚಿಸುವಂತಿದೆ.
ಕಳೆದ ಮೇ ತಿಂಗಳಲ್ಲಿ ‘ದೇ ದೇ ಪ್ಯಾರ್ ದೇ’ ಸಿನಿಮಾದ ಪ್ರಚಾರ ಸಂದರ್ಭದಲ್ಲಿ ಆ ಸಿನಿಮಾದ ನಾಯಕಿ ರಾಕುಲ್ ಪ್ರೀತ್ ಸಿಂಗ್‌ಗಿಂತ ತಬು ಯಂಗ್ ಆಗಿ ಕಾಣುತ್ತಾರೆ ಎಂದು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ಚಿರಯೌವ್ವನದ ಗುಟ್ಟನ್ನು ಅವರು ಹಂಚಿಕೊಂಡಿದ್ದಾರೆ.
‘ನಾನು ಹೆಚ್ಚು ವರ್ಕೌಟ್ ಮಾಡುವುದಿಲ್ಲ. ಆದರೆ ಎಣ್ಣೆಪದಾರ್ಥ ಹಾಗೂ ಸಿಹಿ ತಿಂಡಿಗಳನ್ನು ತಿನ್ನುವುದಿಲ್ಲ.ವರ್ಕೌಟ್, ಯೋಗ, ನಡಿಗೆಯಿಂದಷ್ಟೇ ಫಿಟ್‌ನೆಸ್ ಕಾಯ್ದುಕೊಳ್ಳಲು ಆಗಲ್ಲ, ಇದಕ್ಕೆ ಸರಿಯಾದ ಆಹಾರಕ್ರಮವೂ ಮುಖ್ಯ’ ಎಂದಿದ್ದಾರೆ.
ದಿನಕ್ಕೆ 9 ಗಂಟೆಗಳ ಕಾಲ ಗಟ್ಟಿನಿದ್ರೆ ಅವರ ಅಂದದ ಮತ್ತೊಂದು ಗುಟ್ಟಂತೆ. ಸರಿಯಾಗಿ ನಿದ್ರೆ ಆಗಿದ್ದರೆ ಮುಖವೂ ಪ್ರಶಾಂತವಾಗಿರುತ್ತದೆ. ದಿನವಿಡೀ ಚೈತನ್ಯದಿಂದಿರಲು, ಮನಸ್ಸು ಹಾಗೂ ದೇಹವನ್ನು ಒತ್ತಡದಿಂದ ಮುಕ್ತಗೊಳಿಸಿ ಶಾಂತವಾಗಿಟ್ಟುಕೊಳ್ಳಲು ನಿದ್ರೆ ಸಹಾಯಕ. ಸಕಾರಾತ್ಮಕವಾಗಿ ದಿನ ಆರಂಭಿಸಲು ಸಹಕಾರಿ ಎನ್ನುತ್ತಾರೆ ತಬು.
ದಿನಕ್ಕೆ 8–10 ಗ್ಲಾಸ್ ನೀರು ಕುಡಿಯುತ್ತಾರೆ. ಇದು ಶರೀರದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ ಎನ್ನುವುದು ಅವರ ನಂಬಿಕೆ. ‘ಹಣ್ಣುಗಳನ್ನು ತಿನ್ನುವುದೆಂದರೆ ತುಂಬ ಇಷ್ಟ. ಎಳನೀರು ಕೂಡ. ತಾಜಾ ಹಣ್ಣು ಹಾಗೂ ತರಕಾರಿಗಳು ಆರೋಗ್ಯವನ್ನು ಕಾಪಾಡುತ್ತವೆ’ ಎನ್ನುತ್ತಾರೆ ತಬು.
ಸದ್ಯ ತಬು ಬಾಲಿವುಡ್ ಹಾಗೂ ತಮಿಳು, ತೆಲುಗಿನ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇವರು ಇಶಾನ್ ಖಟ್ಟರ್ ನಾಯಕನಾಗಿ ನಟಿಸುತ್ತಿರುವ,ಮೀರಾ ನಾಯರ್ ನಿರ್ದೇಶನದ ‘ಎ ಸೂಟೆಬಲ್ ಬಾಯ್’ ಚಿತ್ರೀಕರಣದಲ್ಲಿ ಸದ್ಯದಲ್ಲೇ ತೊಡಗಿಸಿಕೊಳ್ಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.