ನಾನು ಹಾಗೂ ನಟ ವಿಜಯ್ ವರ್ಮ ಪರಸ್ಪರ ಪ್ರೀತಿ ಮಾಡುತ್ತಿರುವುದಾಗಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಕೊನೆಗೂ ಒಪ್ಪಿಕೊಂಡಿದ್ದಾರೆ. 'ವಿಜಯ್ ನನ್ನ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದ್ದು, ಆತ ನನ್ನ ಹ್ಯಾಪಿ ಪ್ಲೇಸ್' ಎಂದು ಹೇಳಿಕೊಂಡಿದ್ದಾರೆ.
ಅಮೆಜಾನ್‌ನಲ್ಲಿ ಬಿಡುಗಡೆಗೆ ಸಜ್ಜಾಗಿರುವ ‘ಜೀ ಕರ್ದಾ' ವೆಬ್ ಸಿರೀಸ್ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿರುವ ತಮನ್ನಾ, ವೆಬ್ ಸೀರಿಸ್ ಪ್ರಚಾರದ ಸಂದರ್ಭ ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ.
ವಿಜಯ್ ಅವರೊಂದಿಗಿನ ಸಂಬಂಧದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ತಮನ್ನಾ, ‘ವಿಜಯ್ ವರ್ಮ ನನ್ನ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದ್ದು, ವರ್ಮ ನನ್ನ ಜೀವನಕ್ಕೆ ಸಂತೋಷವನ್ನು ತಂದಿದ್ದಾರೆ‘ ಎಂದು ಹೇಳಿಕೊಂಡಿದ್ದಾರೆ.
ವಿಜಯ್ ವರ್ಮ ಮತ್ತು ತಮನ್ನಾ 'ಲಸ್ಟ್ ಸ್ಟೋರೀಸ್–2' ಚಿತ್ರದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದು, ಈ ಚಿತ್ರದ ಶೂಟಿಂಗ್ ವೇಳೆ ಪ್ರೀತಿ ಪ್ರಾರಂಭವಾಗಿದೆ ಎನ್ನಲಾಗಿದೆ. ಈ ಬಗ್ಗೆ ಉತ್ತರಿಸಿದ ತಮನ್ನಾ 'ನಮ್ಮ ಜೊತೆ ನಟಿಸಿದ ಕಾರಣಕ್ಕೆ ಆ ಸಹನಟನ ಮೇಲೆ ಪ್ರೀತಿ ಬರುತ್ತದೆ ಎಂದು ನಾನು ಭಾವಿಸುವುದಿಲ್ಲ. ನಾನು ಹಲವು ನಟರೊಂದಿಗೆ ಸಿನಿಮಾದಲ್ಲಿ ನಟಿಸಿದ್ದೇನೆ. ಒಬ್ಬರ ಮೇಲೆ ಪ್ರೇಮಾಂಕುರವಾಗುತ್ತದೆ ಎಂದರೆ ಅವರ ಬಗ್ಗೆ ವಿಶೆಷ ಭಾವನೆ ಇದೆ ಎಂದರ್ಥ. ಅದು ತೀರಾ ವೈಯಕ್ತಿಕ ವಿಷಯವಾಗಿದೆ. ಶೂಟಿಂಗ್ ವೇಳೆ ಪ್ರೀತಿ ಪ್ರಾರಂಭವಾಗಿರುವುದು ನಿಜ' ಎಂದು ಹೇಳಿದರು.
'ನಾವು ಯಾರನ್ನಾದರೂ ಇಷ್ಟಪಟ್ಟರೆ ಅವರಿಗಾಗಿ ನಾವು ಏನೆಲ್ಲ ಮಾಡಬೇಕು. ಆದರೆ ನನ್ನ ವಿಷಯದಲ್ಲಿ ಹಾಗಾಗಿಲ್ಲ. ನನ್ನನ್ನು ಸಂಪೂರ್ಣ ಅರ್ಥ ಮಾಡಿಕೊಳ್ಳುವ ವ್ಯಕ್ತಿ ನನಗೆ ಸಿಕ್ಕಿದ್ದಾರೆ. ಆತ ನನ್ನನ್ನು ತುಂಬಾ ಗಾಢವಾಗಿ ಪ್ರೀತಿ ಮಾಡುತ್ತಾನೆ. ಆತ ನನ್ನ ‘ಹ್ಯಾಪಿ ಪ್ಲೇಸ್'. ಆತನಿಗೆ ನನ್ನ ಬಗ್ಗೆ ತುಂಬಾ ಕಾಳಜಿಯಿದೆ' ಎಂದು ಹೇಳಿದರು.
ಗೋವಾದಲ್ಲಿ ನಡೆದ ಹೊಸ ವರ್ಷದ ಪಾರ್ಟಿ ವೇಳೆ ತಮನ್ನಾ ಮತ್ತು ವಿಜಯ್ ವರ್ಮ ಪರಸ್ಪರ ಕಿಸ್ ಮಾಡಿದ್ದು, ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದಾದ ಬಳಿಕ ವಿಜಯ್ ಮತ್ತು ತಮನ್ನಾ ಪ್ರೀತಿ ಮಾಡುತ್ತಿದ್ದಾರೆ ಎಂಬ ಸುದ್ದಿ ಎಲ್ಲರ ಗಮನ ಸೆಳೆದಿತ್ತು. ಆದರೆ, ಈ ವಿಷಯವನ್ನು ಇಬ್ಬರೂ ಅಲ್ಲಗೆಳೆದಿದ್ದರು.
'ಲಸ್ಟ್ ಸ್ಟೋರೀಸ್–2' ಚಿತ್ರದಲ್ಲಿ ತಮನ್ನಾ ಮತ್ತು ವಿಜಯ್ ವರ್ಮ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಇದೇ 29ಕ್ಕೆ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.