ನವದೆಹಲಿ: ಭಾರತದ ಹೆಸರಾಂತ ಸಂಗೀತ ನಿರ್ದೇಶಕ ಇಳಯರಾಜ ಅವರ ಜೀವನ ಆಧಾರಿತ ಸಿನಿಮಾದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ.
ಇಳಯರಾಜ ಪಾತ್ರದಲ್ಲಿ ತಮಿಳು ನಟ ಧನುಷ್ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಧನುಷ್, ಗೌರವಾನ್ವಿತ ಇಳಯರಾಜ ಸರ್ ಎಂದು ಬರೆದುಕೊಂಡಿದ್ದಾರೆ.
ಧನುಷ್ ಅಭಿಯನದ ಕ್ಯಾಪ್ಟನ್ ಮಿಲ್ಲರ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಅರುಣ್ ಮಾಥೇಶ್ವರನ್ ಅವರೇ ಈ ಚಿತ್ರವನ್ನೂ ನಿರ್ದೇಶಿಸಿದ್ದಾರೆ.
ಇಳಯರಾಜ ಅವರ ಜೀವನ ಹಾಗೂ ಅವರು ಸಾಗಿ ಬಂದ ಹಾದಿ, ಸಂಗೀತ ಕ್ಷೇತ್ರದಲ್ಲಿನ ಅವರ ಸಾಧನೆ ಸೇರಿದಂತೆ ಇನ್ನಿತರೆ ವಿಷಯಗಳ ಸುತ್ತ ಈ ಚಿತ್ರ ಮೂಡಿಬರಲಿದೆ.
ಐದು ದಶಕಗಳ ಕಾಲ ಸುಮಾರು 7,000ಕ್ಕೂ ಅಧಿಕ ಹಾಡುಗಳನ್ನು ರಚಿಸಿರುವ ಇಳಯರಾಜ ಅವರು ತಮ್ಮ ವೃತ್ತಿ ಜೀವನದಲ್ಲಿ 20,000ಕ್ಕೂ ಅಧಿಕ ವೇದಿಕೆ ಕಾರ್ಯಕ್ರಮಗಳಲ್ಲಿ ಹಾಡುಗಳನ್ನು ಪ್ರಸ್ತುತಪಡಿಸಿದ್ದಾರೆ. ಅವರಿಗೆ ಪದ್ಮ ಭೂಷಣ ಹಾಗೂ ಪದ್ಮವಿಭೂಷಣ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ.
ಈ ಚಿತ್ರ ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಈ ಸಿನಿಮಾಗೆ ಶ್ರೀರಾಮ್ ಭಕ್ತಿಸರನ್, ಸಿ.ಕೆ ಪದ್ಮ ಕುಮಾರ್, ವರುಣ್ ಮಾಥುರ್, ಇಳಂಪರಿತಿ ಗಜೇಂದ್ರನ್ ಮತ್ತು ಸೌರಭ್ ಮಿಶ್ರಾ ಅವರು ಬಂಡವಾಳ ಹೂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.