ADVERTISEMENT

ಮುತ್ತಯ್ಯ ಮುರಳೀಧರನ್ ಮನವಿ: ‘800’ ಸಿನಿಮಾದಿಂದ ಹೊರನಡೆದ ವಿಜಯ್ ಸೇತುಪತಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 16:21 IST
Last Updated 19 ಅಕ್ಟೋಬರ್ 2020, 16:21 IST
ವಿಜಯ್ ಸೇತುಪತಿ, ಮುತ್ತಯ್ಯ ಮುರಳೀಧರನ್
ವಿಜಯ್ ಸೇತುಪತಿ, ಮುತ್ತಯ್ಯ ಮುರಳೀಧರನ್   

ತಮ್ಮ ಜೀವನಾಧಾರಿತ ‘800’ ಸಿನಿಮಾದಲ್ಲಿ ಖ್ಯಾತ ನಟ ವಿಜಯ್‌ ಸೇತುಪತಿ ನಟಿಸಲಿದ್ದಾರೆ ಎಂದು ಇತ್ತೀಚೆಗಷ್ಟೇ ಖಚಿತಪಡಿಸಿ‌ದ್ದ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್‌, ಸ್ವತಃ ಸಿನಿಮಾದಿಂದ ಹಿಂದೆ ಸರಿಯುವಂತೆ ಸೇತುಪತಿಗೆ ಮನವಿ ಮಾಡಿದ್ದಾರೆ.

ಬಯೋಪಿಕ್‌ ವಿಚಾರ ಮುನ್ನಲೆಗೆ ಬರುತ್ತಿದ್ದಂತೆ, ವಿಜಯ್‌ ಈ ಸಿನಿಮಾದಲ್ಲಿ ನಟಿಸಬಾರದು ಎಂಬ ಕೂಗು ತಮಿಳಿಗರಿಂದ ವ್ಯಕ್ತವಾಗಿದೆ. ‘2009ರಲ್ಲಿ ಶ್ರೀಲಂಕಾ ಸೇನೆ ಸಾಕಷ್ಟು ತಮಿಳಿಗರನ್ನು ಹತ್ಯೆ ಮಾಡಿತ್ತು. ಆದರೆ, ಮುತ್ತಯ್ಯ ಅವರು ಮೂಲತಃ ತಮಿಳು ಭಾಷಿಕರಾಗಿದ್ದರೂ, ಲಂಕಾ ಸರ್ಕಾರದ ಪರವಾಗಿ ಮಾತನಾಡಿದ್ದರು’ ಎಂಬ ಆರೋಪಗಳು ಕೇಳಿ ಬಂದಿವೆ. ಇದಕ್ಕೆ ಸಂಬಂಧಿಸಿದಂತೆ ಟ್ವಿಟರ್‌ನಲ್ಲಿ #ShameOnVijaySethupathi ಟ್ವಿಟರ್‌ ಅಭಿಯಾನ ಆರಂಭವಾಗಿತ್ತು.

ಹೀಗಾಗಿ ವಿಜಯ್‌ ಸೇತುಪತಿಯವರು, ‘ಒಂದುವೇಳೆ ನಾನು ಈ ಸಿನಿಮಾದಲ್ಲಿ ನಟಿಸಿದರೆ, ಮುಂದಿನ ದಿನಗಳಲ್ಲಿ ಚಿತ್ರರಂಗದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ’ ಎಂದು ಹೇಳಿಕೊಂಡಿದ್ದಾರೆ ಎಂದು ವರದಿಯಾಗಿತ್ತು.

ADVERTISEMENT

ಈ ವಿವಾದದ ಬಿಸಿ ಏರುತ್ತಲೇ ಇರುವುದರಿಂದ, ಅಂತಿಮವಾಗಿ ಮುತ್ತಯ್ಯ ಮುರುಳಿಧರನ್‌ ಅವರು ಸಿನಿಮಾದಿಂದ ಹೊರಗುಳಿಯುವಂತೆ ವಿಜಯ್‌ ಸೇತುಪತಿಯವರಲ್ಲಿ ಮನವಿ ಮಾಡಿದ್ದಾರೆ. ಭವಿಷ್ಯದಲ್ಲಿ ನಟನಿಗೆ ಯಾವುದೇ ತೊಂದರೆಯಾಗಬಾರದು ಎಂಬ ಕಾರಣಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ ಬಹುನಿರೀಕ್ಷಿತ ‘800’ ಸಿನಿಮಾದಿಂದ ಹೊರನಡೆಯಲು ವಿಜಯ್‌ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಸ್ವತಃ ತಮಿಳಿನಲ್ಲಿ ಅಧಿಕೃತ ಪ್ರಕಟಣೆ ಹೊರಡಿಸಿರುವ ಮುರುಳೀಧರನ್‌, ‘ನನ್ನ ಜೀವನಾಧಾರಿತ ‘800’ ಸಿನಿಮಾಗೆ ಸಂಬಂಧಿಸಿದಂತೆ ಎದ್ದಿರುವ ವಿವಾದಗಳ ಬಗ್ಗೆ ಹೇಳಿಕೆ ನೀಡುತ್ತಿದ್ದೇನೆ. ತಪ್ಪು ಗ್ರಹಿಕೆಯಿಂದಾಗಿ ಹಲವರು ವಿಜಯ್‌ ಸೇತುಪತಿಯವರು ‘800’ ಸಿನಿಮಾದಿಂದ ಹೊರಗುಳಿಯಬೇಕು ಎಂದು ಒತ್ತಾಯಿಸುತ್ತಿದ್ದಾರೆ. ತಮಿಳುನಾಡಿನ ಅತ್ಯುತ್ತಮ ನಟರೊಬ್ಬರು ಯಾವುದೇ ರೀತಿಯ ತೊಂದರೆ ಎದುರಿಸುವುದನ್ನು ನಾನು ಬಯಸುವುದಿಲ್ಲ. ಹಾಗಾಗಿ ನಾನು ಅವರು ಈ ಸಿನಿಮಾ ಯೋಜನೆಯಿಂದ ಹೊರಗುಳಿಯುವಂತೆ ವಿನಂತಿಸುತ್ತಿದ್ದೇನೆ. ಈ ಚಿತ್ರದಿಂದಾಗಿ ಭವಿಷ್ಯದಲ್ಲಿ ಸೇತುಪತಿಗೆ ಯಾವುದೇ ಅಡೆತಡೆಗಳು ಆಗಬಾರದು’ ಎಂದು ಪ್ರಕಟಿಸಿದ್ದಾರೆ.

‘ನಾನು ಅಡತಡೆಗಳಿಂದ ಹಿಂಜರಿಯುವುದಿಲ್ಲ. ಅಡೆತಡೆಗಳನ್ನು ಮೀರಿಯೇ ಈ ಸ್ಥಾನವನ್ನು ತಲುಪಿದ್ದೇನೆ. ಈ ಸಿನಿಮಾ ಸಾಕಷ್ಟು ಮಹಾತ್ವಾಕಾಂಕ್ಷಿ ಯುವಕರಿಗೆ ಸ್ಫೂರ್ತಿ ನೀಡಲಿದೆ ಎಂಬ ಕಾರಣಕ್ಕಾಗಿ ಈ ಬಯೋಪಿಕ್‌ ನಿರ್ಮಾಣಕ್ಕೆ ಒಪ್ಪಿಕೊಂಡಿದ್ದೆ. ಚಿತ್ರ ನಿರ್ಮಾಪಕರು ಈ ತಡೆಯನ್ನು ನಿವಾರಿಸಿಕೊಳ್ಳಲಿದ್ದಾರೆ ಎಂಬ ಭರವಸೆ ಇದೆ. ಅವರು ಈ ಬಗ್ಗೆ ಶೀಘ್ರವೇ ಪ್ರಕಟಣೆ ನೀಡುವುದಾಗಿ ನನಗೆ ಭರವಸೆ ನೀಡಿದ್ದಾರೆ. ಅವರ ನಿಲುವನ್ನು ನಾನು ಬೆಂಬಲಿಸುತ್ತೇನೆ’ ಎಂದು ತಿಳಿಸಿದ್ದಾರೆ.

‘ನಾನು ಪತ್ರಕರ್ತರು, ರಾಜಕಾರಣಿಗಳು, ವಿಜಯ್‌ ಸೇತುಪತಿ ಅವರು ಅಭಿಮಾನಿಗಳು ಮತ್ತು ತುಂಬ ಮುಖ್ಯವಾಗಿ ಈ ಸಂದರ್ಭದಲ್ಲಿ ನನ್ನನ್ನು ಬೆಂಬಲಿಸಿದ ತಮಿಳುನಾಡಿನ ಜನರಿಗೆ ತುಂಬು ಹೃದಯದಿಂದ ಧನ್ಯವಾದ ಹೇಳುತ್ತೇನೆ’ ಎಂದೂ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.