‘ತಂಗಲಾನ್‘ ಚಿತ್ರದ ರಿಹರ್ಸಲ್ ವೇಳೆ ತಮಿಳು ನಟ ವಿಕ್ರಮ್ ಅವರ ಪಕ್ಕೆಲುಬಿಗೆ ಏಟಾಗಿದ್ದು, ಚಿತ್ರೀಕರಣವನ್ನು ಸ್ಥಗಿತಗೊಳಿಸಿ ಸ್ವಲ್ಪ ಕಾಲ ವಿಶ್ರಾಂತಿ ಪಡೆಯಲಿದ್ದಾರೆ ಎಂದು ವಿಕ್ರಮ್ ಅವರ ಮ್ಯಾನೇಜರ್ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮ್ಯಾನೇಜರ್ ಸೂರ್ಯನಾರಾಯಣನ್ ಎಂ, ‘ರಿಹರ್ಸಲ್ ವೇಳೆ ವಿಕ್ರಮ್ ಅವರಿಗೆ ಗಾಯವಾಗಿದ್ದು, ಪಕ್ಕೆಲುಬಿಗೆ ನೋವಾಗಿದೆ. ಈ ಕಾರಣದಿಂದ ತಂಗಲಾನ್ ಚಿತ್ರೀಕರಣದಿಂದ ಸ್ವಲ್ಪ ದಿನಗಳ ಕಾಲ ದೂರವಿರಲಿದ್ದಾರೆ. ನಿಮ್ಮ ಪ್ರೀತಿಗೆ ವಿಕ್ರಮ್ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ‘ ಎಂದು ಬರೆದುಕೊಂಡಿದ್ದಾರೆ.
‘ಪೊನ್ನಿಯನ್ ಸೇಲ್ವಂ –2 ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಇದಕ್ಕೆ ನಿಮಗೆ ಆದಿತ್ಯ ಕರಿಕಾಳನ್ ಅಲಿಯಾಸ್ ವಿಕ್ರಮ್ ಅವರ ಕಡೆಯಿಂದ ಧನ್ಯವಾದಗಳನ್ನು ತಿಳಿಸುತ್ತೇನೆ‘ ಎಂದು ಹೇಳಿದ್ದಾರೆ.
ಮಣಿರತ್ನಂ ನಿರ್ದೇಶನದ ‘ಪೊನ್ನಿಯನ್ ಸೇಲ್ವಂ‘ ಚಿತ್ರದಲ್ಲಿ ಚಿಯಾನ್ ವಿಕ್ರಮ್ ನಟಿಸಿದ್ದರು. ಇತ್ತೀಚೆಗೆ ‘ಪೊನ್ನಿಯನ್ ಸೇಲ್ವಂ – 2‘ ಬಿಡುಗಡೆಯಾಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆಯನ್ನು ಚಿತ್ರ ಪಡೆದುಕೊಳ್ಳಲು ಯಶಸ್ವಿಯಾಗಿತ್ತು.
‘ತಂಗಲಾನ್‘ ಚಿತ್ರವನ್ನು ಪಾ ರಂಜಿತ್ ಅವರು ನಿರ್ದೇಶಿಸುತ್ತಿದ್ದು, 19ನೇ ಶತಮಾನದ ಗಣಿಗಾರಿಕೆ ವಿಷಯದ ಸುತ್ತ ಚಿತ್ರಕಥೆ ಹೆಣೆಯಲಾಗಿದೆ. ತಂಗಲಾನ್ ಚಿತ್ರದಲ್ಲಿ ವಿಕ್ರಮ್ ಅವರ ಹಳ್ಳಿ ಸೊಗಡಿನ ಲುಕ್ ನೋಡಿ ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.