ಕೋಯಿಕ್ಕೋಡ್(ಕೇರಳ): ಹಲವು ವರ್ಷಗಳ ಹಿಂದೆ ತಮಿಳು ಚಿತ್ರದ ಚಿತ್ರೀಕರಣವೊಂದರ ಸಂದರ್ಭ ತಮಗಾದ ಅಹಿತಕರ ಅನುಭವದ ಬಗ್ಗೆ ದಕ್ಷಿಣ ಭಾರತದ ಖ್ಯಾತ ನಟಿ ಪದ್ಮಪ್ರಿಯ ಹೇಳಿಕೊಂಡಿದ್ದಾರೆ.
ಚಿತ್ರದ ನಿರ್ದೇಶಕರು ಎಲ್ಲರ ಎದುರೇ ಸಾರ್ವಜನಿಕವಾಗಿ ತಮಗೆ ಕಪಾಳಕ್ಕೆ ಹೊಡೆದಿದ್ದರು ಎಂದು ಆರೋಪಿಸಿದ್ದಾರೆ.
ಆದರೆ, ಮಾಧ್ಯಮಗಳು ನಾನೇ ನಿರ್ದೇಶಕರ ಕಪಾಳಕ್ಕೆ ಹೊಡೆದಿದ್ದೇನೆ ಎಂದು ಸುದ್ದಿ ಮಾಡಿದವು. ನಾನೇ ಅವರ ಕಪಾಳಕ್ಕೆ ಹೊಡೆದಿದ್ದರೆ ಚಲನಚಿತ್ರ ಮಂಡಳಿಗೆ ಏಕೆ ದೂರು ನೀಡುತ್ತಿದ್ದೆ ಎಂದು ಯಾರೊಬ್ಬರೂ ಯೋಚಿಸಲಿಲ್ಲ ಎಂದು ಅವರು ಹೇಳಿದ್ದಾರೆ.
ಮಹಿಳೆಯರ ಆರೋಪಗಳನ್ನು ತಳ್ಳಿ ಹಾಕುವ ಪ್ರವೃತ್ತಿಯನ್ನು ಈ ಘಟನೆ ಎತ್ತಿ ತೋರಿಸಿದೆ ಎಂದು ಅವರು ಹೇಳಿದ್ದಾರೆ.
ಆ ಬಳಿಕ, ನಿರ್ದೇಶಕರನ್ನು 6 ತಿಂಗಳ ಕಾಲ ಚಿತ್ರರಂಗದಿಂದ ನಿಷೇಧ ಹೇರಲಾಗಿತ್ತು. ತಮಿಳು ಚಿತ್ರಗಳಲ್ಲಿ ನಟಿಸುವುದನ್ನೇ ನಿಲ್ಲಿಸಿದೆ ಎಂದು ಪದ್ಮಪ್ರಿಯ ಹೇಳಿದ್ದಾರೆ.
ನಂತರ, ಚಿತ್ರರಂಗದಲ್ಲಿ ಯಾವುದೇ ಅಹಿತಕರ ಅನುಭವ ಆಗಿಲ್ಲ ಎಂದಿದ್ದಾರೆ.
ಚಿತ್ರೀಕರಣ ಮುಗಿದ ಬಳಿಕ ಎಲ್ಲರ ಎದುರೇ ನಿರ್ದೇಶಕ ನನ್ನ ಕಪಾಳಕ್ಕೆ ಹೊಡೆದಿದ್ದರು ಎಂದು ನಿರ್ದೇಶಕನ ಹೆಸರು ಉಲ್ಲೇಖಿಸದೇ ಪದ್ಮಪ್ರಿಯ ಆರೋಪಿಸಿದ್ದಾರೆ.
ಮಲಯಾಳಂನ ಹಲವು ಚಿತ್ರಗಳಲ್ಲಿ ನಟಿಸಿರುವ ಪದ್ಮಪ್ರಿಯ, ಚಿತ್ರೋದ್ಯಮದಲ್ಲಿ ಮಹಿಳೆಯರ ಜೊತೆಗಿನ ಅಸಮಾನತೆಯನ್ನು ಹೊರಹಾಕಿದ್ದಾರೆ.
ಮಲಯಾಳಂ ಚಿತ್ರರಂಗದಲ್ಲಿ ನಟಿಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯಗಳ ಕುರಿತಂತೆ ನ್ಯಾಯಮೂರ್ತಿ ಹೇಮಾ ಸಮಿತಿ ನೀಡಿದ್ದ ವರದಿ ಬಹಿರಂಗವಾಗಿರುವ ಈ ಸಂದರ್ಭದಲ್ಲಿ ನಟಿ ಪದ್ಮಪ್ರಿಯ ಹೇಳಿಕೆ ಮಹತ್ವ ಪಡೆದುಕೊಂಡಿದೆ ಎಂದು ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.