ಚೆನ್ನೈ (ತಮಿಳುನಾಡು): ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ನಟ ರಜನಿಕಾಂತ್, ಆರೋಗ್ಯ ಸ್ಥಿತಿ ಗಮನದಲ್ಲಿಟ್ಟುಕೊಂಡು ನೂತನ ರಾಜಕೀಯ ಪಕ್ಷಕ್ಕೆ ಚಾಲನೆ ನೀಡದಿರಲು ನಿರ್ಧರಿಸಿದ್ದಾರೆ.
2021ರ ಜನವರಿಯಲ್ಲಿ ರಜನಿಕಾಂತ್ ನೇತೃತ್ವದ ಹೊಸ ರಾಜಕೀಯ ಪಕ್ಷಕ್ಕೆ ಚಾಲನೆ ನೀಡಲು ನಿರ್ಧರಿಸಲಾಗಿತ್ತು. ಆದರೆ ಈಗ ಅಭಿಮಾನಿಗಳಿಗೆ ಬರೆದ ಪತ್ರದಲ್ಲಿ ತಾವು ನೀಡಿರುವ ಭರವಸೆಯನ್ನು ಮುರಿದಿದ್ದಕ್ಕಾಗಿ ಕ್ಷಮೆ ಕೋರಿದ್ದಾರೆ.
ರಜನಿ ಅವರು 'ಅಣ್ಣಾತೆ' ಎಂಬ ತಮಿಳು ಚಿತ್ರದ ಚಿತ್ರೀಕರಣಕ್ಕಾಗಿ ಡಿಸೆಂಬರ್ 13ರಿಂದ ಹೈದರಾಬಾದ್‌ನಲ್ಲಿದ್ದರು. ಈ ಮಧ್ಯೆತೀವ್ರ ರಕ್ತದೊತ್ತಡದ ಸಮಸ್ಯೆಯಿಂದಾಗಿ ರಜನಿಕಾಂತ್ ಅವರು ಡಿಸೆಂಬರ್ 25ರಂದು ಹೈದರಾಬಾದ್‌ನ ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನಗಳ ಹಿಂದೆಯಷ್ಟೇ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡುಬಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರು.
ಇದನ್ನೂ ಓದಿ:ರಜನಿಕಾಂತ್ ಜೊತೆ ಕೈಜೋಡಿಸುವುದು 'ಒಂದು ಫೋನ್ ಕರೆ ಅಂತರದಲ್ಲಿದೆ'–ಕಮಲ್ ಹಾಸನ್
70ರ ಹರೆಯದ ರಜನಿ ಅವರಿಗೆ ವೈದ್ಯರು ಒಂದು ವಾರದ ಸಂಪೂರ್ಣ ವಿಶ್ರಾಂತಿಯನ್ನು ಸಲಹೆ ನೀಡಿದ್ದರು. ಈ ಮಧ್ಯೆ ರಾಜಕೀಯ ಪ್ರವೇಶದ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದಾರೆ.
ನಾನು ಪಕ್ಷವನ್ನು ಪ್ರಾರಂಭಿಸಿದ ಬಳಿಕ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಮಾತ್ರ ಪ್ರಚಾರ ಮಾಡಿದರೆ, ರಾಜಕೀಯ ಕ್ರಾಂತಿಯನ್ನು ಸೃಷ್ಟಿ ಮಾಡಿಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದೊಡ್ಡ ಗೆಲುವು ದಾಖಲಿಸಲು ಸಾಧ್ಯವಾಗುವುದಿಲ್ಲ. ರಾಜಕೀಯ ಅನುಭವ ಹೊಂದಿರುವ ಯಾರೂ ಕೂಡಾ ಈ ವಾಸ್ತವವನ್ನು ನಿರಾಕರಿಸುವುದಿಲ್ಲ ಎಂದು ರಜನಿಕಾಂತ್ ಉಲ್ಲೇಖಿಸಿದರು.
ಜನಾದೇಶಕ್ಕೆ ಇಳಿಯದೆಯೇ ಜನರಿಗೆ ನನ್ನಿಂದಾಗುವ ಸೇವೆಯನ್ನು ಮಾಡಲಿದ್ದೇನೆ. ಸತ್ಯವನ್ನು ನುಡಿಯಲು ನಾನೆಂದೂ ಹಿಂಜರಿಯಲಿಲ್ಲ. ನನ್ನ ಈ ನಿರ್ಧಾರವನ್ನು ಸ್ವೀಕರಿಸಲು ಸತ್ಯ ಹಾಗೂ ಪಾರದರ್ಶಕತೆಯನ್ನು ಪ್ರೀತಿಸುವ ನನ್ನ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸುವ, ನನ್ನನ್ನು ಪ್ರೀತಿಸುವ ಮತ್ತು ನನಗಾಗಿ ಬದುಕುವ ತಮಿಳುನಾಡಿನ ಪ್ರತಿಯೊಬ್ಬ ಅಭಿಮಾನಿ ಹಾಗೂ ಜನರಲ್ಲಿ ನಾನು ಪ್ರಮಾಣಿಕವಾಗಿ ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಬೆಂಗಳೂರಿಗೆ ರಜನಿಕಾಂತ್: ಪಕ್ಷ ಆರಂಭಕ್ಕೂ ಮುನ್ನ ಅಣ್ಣನ ಆಶೀರ್ವಾದ ಪಡೆದ ತಲೈವಾ
ರಾಜಕೀಯ ಪಕ್ಷವನ್ನು ಪ್ರಾರಂಭಿಸುವ ಮೂಲಕ ರಾಜಕೀಯಕ್ಕೆ ಧುಮುಕಲು ನನ್ನಿಂದ ಸಾಧ್ಯವಾಗುತ್ತಿಲ್ಲ ಎಂದು ಘೋಷಿಸಲು ವಿಷಾದಿಸುತ್ತೇನೆ. ಇದನ್ನು ಘೋಷಿಸುವಾಗ ನನ್ನ ನೋವಿನ ಆಳ ನನಗೆ ಮಾತ್ರ ತಿಳಿದಿದೆ. ಈ ನಿರ್ಧಾರದಿಂದ ನನ್ನ ಅಭಿಮಾನಿಗಳು ಹಾಗೂ ಜನರಿಗೆ ನಿರಾಸೆಯಾಗಿದೆ. ನಾನು ಎಲ್ಲರಲ್ಲೂ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದರು.
ತಮಿಳುನಾಡಿನಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಓರ್ವರೆನಿಸಿರುವ ರಜನಿಕಾಂತ್, ರಾಜಕೀಯ ಪ್ರವೇಶದೊಂದಿಗೆ ಅಲ್ಲಿನ ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನವನ್ನೇ ಉಂಟು ಮಾಡುವ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಈ ಬಗ್ಗೆ ಅಭಿಮಾನಿಗಳು ಸಹ ಭಾರಿ ನಿರೀಕ್ಷೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.