ಜ.11ರಂದು ದಳಪತಿ ವಿಜಯ್-ರಶ್ಮಿಕಾ ಮಂದಣ್ಣ ಜೋಡಿಯ ‘ವಾರಿಸು’ ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿದೆ. ಅಜಿತ್ ನಟನೆಯ ‘ತುನಿವು’ ಚಿತ್ರ ಕೂಡ ತೆರೆಗೆ ಬರುತ್ತಿದೆ. ಇವೆರಡು ಚಿತ್ರಗಳು ಈ ಶುಕ್ರವಾರ ಬಿಡುಗಡೆಗೊಂಡ ಬಹುತೇಕ ಹೊಸ ಕನ್ನಡ ಸಿನಿಮಾಗಳನ್ನು ನುಂಗಿ ನೀರು ಕುಡಿದಿವೆ. ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ ಇವೆರಡು ಸಿನಿಮಾಕ್ಕೆ ಗರಿಷ್ಠ ಶೋ ನೀಡಲಾಗಿದೆ.
ತಮಿಳಿನ ಜೊತೆಗೆ ತೆಲುಗು ಸಿನಿಮಾಗಳು ಕೂಡ ಪೈಪೋಟಿ ನೀಡುತ್ತಿವೆ. ನಂದಮೂರಿ ಬಾಲಕೃಷ್ಣ ಅಭಿನಯದ‘ವೀರ ಸಿಂಹ ರೆಡ್ಡಿ’ ಟ್ರೇಲರ್‌ನಿಂದಲೇ ನಿರೀಕ್ಷೆ ಹೆಚ್ಚಿಸಿದೆ. ಈ ಚಿತ್ರ ಜನವರಿ 12ರಂದು ಬಿಡುಗಡೆ ಆಗುತ್ತಿದೆ. ‘ಮೆಗಾ ಸ್ಟಾರ್’ ಚಿರಂಜೀವಿ ಅಭಿನಯದ ‘ವಾಲ್ತೇರು ವೀರಯ್ಯ’ ಕೂಡ ಈ ಶುಕ್ರವಾರ ರಿಲೀಸ್. ಇವೆಲ್ಲದರ ನಡುವೆ ‘ಆರ್ಕೆಸ್ಟ್ರಾ ಮೈಸೂರು’ ಎಂಬ ಡಾಲಿ ಧನಂಜಯ್ ಗೆಳೆಯರ ಬಳಗದ ಸಿನಿಮಾವೊಂದು ಕೂಡ ತೆರೆಗೆ ಬರುತ್ತಿದೆ.
ರಶ್ಮಿಕಾ ಮಂದಣ್ಣ ಹಾಗೂ ನಟ ದಳಪತಿ ವಿಜಯ್ ‘ವಾರಿಸು’ಗೆ ಬೆಂಗಳೂರಿನ ಕೆಲ ಚಿತ್ರಮಂದಿರಗಳಂತೂ ಹಬ್ಬದ ರೀತಿಯಲ್ಲಿ ಸಜ್ಜುಗೊಂಡಿವೆ. ಸಂಪಿಗೆ ಚಿತ್ರಮಂದಿರ ಸೇರಿದಂತೆ ತಮಿಳು ಪ್ರಾಬಲ್ಯ ಹೊಂದಿರುವ ಪ್ರದೇಶಗಳ ಚಿತ್ರಮಂದಿರಗಳಲ್ಲಿ ವಿಜಯ್ ಬೃಹತ್ ಕಟೌಟ್ ರಾರಾಜಿಸುತ್ತಿದೆ. ಟ್ರೇಲರ್ ಧೂಳೆಬ್ಬಿಸಿದ ಸಿನಿಮಾ ಮೇಲೆ ಬೃಹತ್ ನಿರೀಕ್ಷೆ ಇದೆ. ಚಿತ್ರದ ‘ರಂಜಿದಮೆ’ ಸೂಪರ್ ಹಿಟ್ ಆಗಿತ್ತು. ಬುಧವಾರದ ಬಹುತೇಕ ಶೋಗಳ ಟಿಕೆಟ್ ಮಾರಾಟವಾಗಿದ್ದು ಈ ವಾರ ಪೂರ್ತಿ ಹೌಸ್‌ಫುಲ್ ಪ್ರದರ್ಶನ ಎಂಬ ಲೆಕ್ಕಾಚಾರವಿದೆ.
ಇನ್ನೂ ದಳಪತಿ ವಿಜಯ್ ವರ್ಸಸ್ ಅಜಿತ್ ಕುಮಾರ್ ಎಂಬ ತಮಿಳು ಉದ್ಯಮ ಲೆಕ್ಕಾಚಾರ ರಾಜ್ಯದಲ್ಲಿಯೂ ಪರಿಣಾಮ ಬೀರುತ್ತಿದೆ. ಸದಾ ತಮಿಳು ಭಾಷಿಗರನ್ನು ಆಕರ್ಷಿಸುವ ಚಿತ್ರಮಂದಿರಗಳು ಎರಡೂ ಸಿನಿಮಾಗೂ ಸಮಾನವಾದ ಶೋ ನೀಡಿವೆ.
ವರ್ಷದ ಮೊದಲ ವಾರ ಬಿಡುಗಡೆಯಾಗಿದ್ದ 9 ಕನ್ನಡ ಚಿತ್ರಗಳು ಕೂಡ ಈ ಅನ್ಯಭಾಷೆಯ ದೊಡ್ಡ ಚಿತ್ರಗಳಿಗೆ ಬಲಿಯಾಗಿವೆ. ಈ ವಾರ ತೆರೆಗೆ ಬಂದ ಯಾವ ಚಿತ್ರಕ್ಕೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯದಿರುವುದು ಕೂಡ ಇದಕ್ಕೆ ಮುಖ್ಯ ಕಾರಣ. ಈವಾರದ ಬಹುತೇಕ ಹೊಸ ಚಿತ್ರಗಳಿಗೆ 6–8 ಪ್ರೇಕ್ಷಕರಿದ್ದ ಕಾರಣ ಮುಲಾಜಿಲ್ಲದೆ ಬುಧವಾರದಿಂದಲೇ ಶೋ ಕಿತ್ತುಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.