‘ನಾನು ಮತ್ತೆ ಮಾಡೆಲಿಂಗ್ ಜಗತ್ತಿನತ್ತ ನೋಟ ಹರಿಸುವುದಿಲ್ಲ. ಬಣ್ಣದಲೋಕದಲ್ಲಿಯೇ ವಿಹರಿಸುವುದು ನನಗಿಷ್ಟ’ ಎಂದು ಸ್ಪಷ್ಟವಾಗಿ ಹೇಳಿದರು ನಟಿ ತಾನ್ಯಾ ಹೋಪ್. ಸಿನಿಮಾ ಮತ್ತು ಮಾಡೆಲಿಂಗ್ ನಡುವೆ ಹೊಂದಾಣಿಕೆ ಹೇಗೆ ಮಾಡಿಕೊಳ್ಳುತ್ತೀರಿ? ಎನ್ನುವ ಪ್ರಶ್ನೆಗೆ ಅವರು ಉತ್ತರಿಸಿದ್ದು ಹೀಗೆ. ಚಿತ್ರರಂಗದಲ್ಲಿಯೇ ಮುಂದುವರಿಯಬೇಕೆಂಬ ಆಸೆ ಅವರ ಮಾತುಗಳಲ್ಲಿ ದೃಢವಾಗಿತ್ತು.
‘ನಾನು ಅಭಿನಯಿಸುವ ಚಿತ್ರಗಳು ಒಂದಕ್ಕಿಂತ ಇನ್ನೊಂದು ಭಿನ್ನವಾಗಿರಬೇಕು. ನನ್ನ ಪಾತ್ರದಲ್ಲಿಯೂ ಅಷ್ಟೇ ಭಿನ್ನತೆ ಇರಬೇಕು. ಪ್ರೇಕ್ಷಕರು ಅದನ್ನು ನೋಡಿ ಮೆಚ್ಚಿಕೊಳ್ಳಬೇಕು. ನನ್ನ ಪ್ರತಿಭೆ ಹೊರಹೊಮ್ಮಲು ಅವಕಾಶವಿದ್ದರೆ ಗ್ಲಾಮರ್ ಆಗಿ ಕಾಣಿಸಿಕೊಳ್ಳಲೂ ಹಿಂದೇಟು ಹಾಕುವುದಿಲ್ಲ’ ಎಂದು ಮತ್ತಷ್ಟು ವಿಸ್ತರಿಸಿ ಹೇಳಿದರು.
ಕನ್ನಡದಲ್ಲಿ ತಾನ್ಯಾ ನಟಿಸಿರುವ ಮೊದಲ ಚಿತ್ರ ‘ಯಜಮಾನ’ ಉತ್ತಮ ಆರಂಭ ಕಂಡಿದೆ. ಈ ಸಿನಿಮಾದ ‘ಬಸಣ್ಣಿ ಬಾ...’ ಸಾಂಗ್‌ನಲ್ಲಿನ ಅವರ ಕುಣಿತ ಪಡ್ಡೆಹುಡುಗರ ನಿದ್ದೆಗೆಡಿಸಿದೆ. ಚಂದನವನದಲ್ಲಿನ ಅಂಬೆಗಾಲ ಹೆಜ್ಜೆಗೆ ಸಿಕ್ಕಿರುವ ಪ್ರೋತ್ಸಾಹ ಅವರ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆಯಂತೆ.
ತಾನ್ಯಾ ಹುಟ್ಟಿದ್ದು ಬೆಂಗಳೂರಿನಲ್ಲಿಯೇ. ಅಪ್ಪ ದೊಡ್ಡ ಉದ್ಯಮಿ. ಸೇಕ್ರೆಡ್ ಹಾರ್ಟ್ ಬಾಲಕಿಯರ ಸ್ಕೂಲ್‌ನಲ್ಲಿ ಶಿಕ್ಷಣ ಪಡೆದರು. ಬಳಿಕ ಪದವಿ ಶಿಕ್ಷಣ ಪಡೆಯಲು ಇಂಗ್ಲೆಂಡ್‌ಗೆ ವಿಮಾನ ಹತ್ತಿದರು. ಅಲ್ಲಿನ ವೆಸ್ಟ್ ಮಿನಿಸ್ಟರ್ ವಿಶ್ವವಿದ್ಯಾಲಯದಲ್ಲಿ ಪದವಿ ಪೂರೈಸಿದ್ದಾರೆ. ಈ ನಡುವೆಯೇ ಅವರ ಚಿತ್ರ ಮಾಡೆಲಿಂಗ್ ಕ್ಷೇತ್ರದತ್ತ ಹೊರಳಿತು.
ಪುಣೆಯಲ್ಲಿ ಮಾಡೆಲಿಂಗ್ ತರಬೇತಿ ಪಡೆದರು. ಇದು 2015ರಲ್ಲಿ ಮಿಸ್ ಇಂಡಿಯಾ ಕೋಲ್ಕತ್ತ ಸ್ಪರ್ಧೆಯಲ್ಲಿ ಫಲಕೊಟ್ಟಿತು. ಆ ವರ್ಷ ಪ್ರಶಸ್ತಿಯು ಅವರ ಮುಡಿಗೇರಿತು. ಅದೇ ವರ್ಷದ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯ ಅಂತಿಮಘಟ್ಟ ತಲುಪಿದ ಸ್ಪರ್ಧಿಗಳಲ್ಲಿ ತಾನ್ಯಾ ಕೂಡ ಒಬ್ಬರು. ಈ ಸ್ಪರ್ಧೆಯೇ ಅವರು ಬಣ್ಣದಲೋಕ ಪ್ರವೇಶಿಸಲು ಮುಖ್ಯ ವೇದಿಕೆಯಾಯಿತು.
ತೆಲುಗಿನ ‘ನೇನು ಶೈಲಜಾ’ ಚಿತ್ರದಲ್ಲಿ ಅತಿಥಿ ಪಾತ್ರದ ಮೂಲಕ ಕ್ಯಾಮೆರಾ ಎದುರಿನ ನಟನಾಪಯಣ ಆರಂಭಿಸಿದರು. ಬಳಿಕ ‘ಅಪ್ಲಾಟೊ ಒಕುದುಂಡೇವಾಡು’ ಸಿನಿಮಾದ ನಿತ್ಯಾ ಪಾತ್ರ ಕಾಲಿವುಡ್‌ನಲ್ಲಿ ಅವರ ಸ್ಥಾನವನ್ನು ಭದ್ರಪಡಿಸಿತು. ಆ ನಂತರ ಹಿರಿತೆರೆಯಲ್ಲಿ ಅವರಿಗೆ ಅವಕಾಶಗಳ ಹೆಬ್ಬಾಗಿಲು ತೆರೆಯಿತು. ಬಳಿಕ ಜಗಪತಿಬಾಬು ಮುಖ್ಯಭೂಮಿಕೆಯ ‘ಪಟೇಲ್ ಎಸ್.ಐ.ಆರ್’ ಚಿತ್ರದಲ್ಲೂ ಕಾಣಿಸಿಕೊಂಡರು. ಆ್ಯಕ್ಷನ್, ಥ್ರಿಲ್ಲರ್ ಚಿತ್ರ ಇದು. ಇದರಲ್ಲಿ ತಾನ್ಯಾ ಅವರದು ಪೊಲೀಸ್ ಅಧಿಕಾರಿಯ ಪಾತ್ರ.
‘ಥಾಡಂ’ ಚಿತ್ರದ ಮೂಲಕ ತಮಿಳಿಗೂ ಕಾಲಿಟ್ಟರು. ಪರಭಾಷೆಯ ಯಶಸ್ವಿ ಸಿನಿಮಾದ ಮೂಲಕ ಪರಿಚಿತರಾದ ನಟಿಯರಿಗೆ ಸಾಲು ಸಾಲು ಅವಕಾಶ ಬರುವುದು ಗಾಂಧಿನಗರದಲ್ಲಿ ಮಾಮೂಲು ಸಂಗತಿ. ನಟ ದರ್ಶನ್ ನಟನೆಯ ‘ಯಜಮಾನ’ ಸಿನಿಮಾ ಮೂಲಕ ತಾನ್ಯಾಗೆ ಆ ಅದೃಷ್ಟವೂ ಒಲಿದು ಬಂದಿತು.
ತಾನ್ಯಾ ಬಣ್ಣದಲೋಕ ಪ್ರವೇಶಿಸಿದ್ದು ಆಕಸ್ಮಿಕ. ತಾನು ನಟಿಯಾಗಬೇಕು ಎಂದು ಅವರು ಎಂದಿಗೂ ಕನಸು ಕಂಡಿರಲಿಲ್ಲವಂತೆ. ಆದರೆ, ಸಿನಿಮಾದಲ್ಲಿ ಅವಕಾಶ ಸಿಕ್ಕಿದಾಗ ಮುಂಬೈನಲ್ಲಿ ರಂಗಭೂಮಿ ಹಿನ್ನೆಲೆಯ ಅಭಿಷೇಕ್‌ಪಾಂಡೆ ಬಳಿ ಮೂರು ತಿಂಗಳ ಕಾಲ ಸತತವಾಗಿ ನಟನೆಯ ಪಟ್ಟುಗಳನ್ನು ಕಲಿತರಂತೆ.
‘ಮಾಡೆಲಿಂಗ್‌ನ ಯಶಸ್ಸು ನನ್ನನ್ನು ಸಿನಿರಂಗದ ಹೊಸ್ತಿಗೆ ತಂದುಬಿಟ್ಟಿದೆ. ನಾನೀಗ ನಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದೇನೆ. ಇಲ್ಲಿಯೇ ಬದುಕು ಕಟ್ಟಿಕೊಳ್ಳುವ ಹಾದಿಯಲ್ಲಿದ್ದೇನೆ’ ಎನ್ನುತ್ತಾರೆ ಅವರು.
ದರ್ಶನ್ ಅವರಂತಹ ಸ್ಟಾರ್ ನಟನ ಜೊತೆಗೆ ತೆರೆ ಹಂಚಿಕೊಂಡಿದ್ದಕ್ಕೆ ಅವರಿಗೆ ಹೆಮ್ಮೆಯಿದೆ. ‘ದರ್ಶನ್ ಸರ್ ಜೊತೆಗೆ ಕೆಲಸ ಮಾಡಿದ್ದು ನನ್ನ ವೃತ್ತಿಬದುಕಿನ ಅಪೂರ್ವ ಕ್ಷಣ. ಅದು ನನ್ನ ಅದೃಷ್ಟ. ಬಸಣ್ಣಿ ಸಾಂಗ್‌ಗಾಗಿ ಮೊದಲು ಒಂದು ವಾರ ಕಾಲ ಬೆವರಿಳಿಸಿದ್ದೆ. ದರ್ಶನ್ ಸರ್ ನೇರವಾಗಿ ಸೆಟ್ ಬಂದು ಸೆಫ್ಟ್ ಹಾಕಿದ್ರು. ಅವರಿಂದ ಸಾಕಷ್ಟು ಕಲಿತೆ. ಅವರೊಟ್ಟಿಗೆ ನಟಿಸಿದ್ದು ನನ್ನ ಅದೃಷ್ಟ’ ಎಂದು ಮೆಲುಕು ಹಾಕುತ್ತಾರೆ.
ತನಗೆ ಇಂತಹದ್ದೇ ಪಾತ್ರಗಳು ಬೇಕೆಂಬ ಬೇಡಿಕೆ ಮಂಡಿಸುವುದಿಲ್ಲ. ಆದರೆ, ತಾನು ನಟಿಸುವ ಪಾತ್ರಗಳು ಜನರಿಗೆ ಮುಟ್ಟಬೇಕು ಎನ್ನುವುದು ಅವರ ಹಂಬಲ. ‘ನಿರ್ದಿಷ್ಟ ಪಾತ್ರಗಳಿಗೆ ನಾನು ಅಂಟಿಕೊಳ್ಳುವುದಿಲ್ಲ. ಸವಾಲಿನ ಪಾತ್ರಗಳೆಂದರೆ ಇಷ್ಟ. ಕಾಮಿಡಿ ಪಾತ್ರಗಳಲ್ಲಿ ನಟಿಸಲು ಸ್ವಲ್ಪ ಕಷ್ಟ. ಆದರೆ, ಅದನ್ನು ಸವಾಲಾಗಿ ಸ್ವೀಕರಿಸಿ ಅಭಿನಯಿಸಲು ಸಿದ್ಧ’ ಎಂದು ಕಣ್ಣರಳಿಸುತ್ತಾರೆ.
ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ ಸಸ್ಪೆನ್ಸ್, ಥ್ರಿಲ್ಲರ್ ‘ಉದ್ಘರ್ಷ’ ಚಿತ್ರದಲ್ಲೂ ತಾನ್ಯಾ ನಟಿಸಿದ್ದಾರೆ. ದೇಸಾಯಿ ಅವರೊಟ್ಟಿಗೆ ಕೆಲಸ ಮಾಡಿದ ಅನುಭವವನ್ನು ಅವರು ವಿವರಿಸುವುದು ಹೀಗೆ: ‘ಒಳ್ಳೆಯ ನಿರ್ದೇಶಕರೊಟ್ಟಿಗೆ ಕೆಲಸ ಮಾಡಬೇಕೆಂಬುದು ಎಲ್ಲರ ಆಸೆ. ದೇಸಾಯಿ ಸರ್ ಕನ್ನಡ ಚಿತ್ರರಂಗದ ಶ್ರೇಷ್ಠ ನಿರ್ದೇಶಕರು. ಅವರು ನನ್ನನ್ನು ಭೇಟಿ ಮಾಡಿ ಕಥೆಯ ಬಗ್ಗೆ ನಿರೂಪಿಸಿದರು. ತಕ್ಷಣವೇ ಒಪ್ಪಿಕೊಂಡೆ’ ಎಂದು ವಿವರಿಸುತ್ತಾರೆ ತಾನ್ಯಾ.
‘ದೇಸಾಯಿ ಸರ್ ಜೊತೆಗೆ ಕೆಲಸ ಮಾಡಿದ್ದು ನಟನೆಯ ಕಲಿಕೆಗೆ ಮತ್ತಷ್ಟು ಹೊಳಪು ನೀಡಿದೆ. ಸೆಟ್‌ನಲ್ಲಿ ಅವರುನಮ್ಮನ್ನು ಸಾಕಷ್ಟು ತಿದ್ದಿದ್ದಾರೆ’ ಎನ್ನುವ ಅವರು ತಮ್ಮ ಪಾತ್ರದ ಬಗ್ಗೆ ಗುಟ್ಟು ಬಿಟ್ಟುಕೊಡುವುದಿಲ್ಲ.
ನಟ ಅಭಿಷೇಕ್ ಅಂಬರೀಷ್ ನಟನೆಯ ಮೊದಲ ಚಿತ್ರ ‘ಅಮರ್’ ಚಿತ್ರಕ್ಕೂ ತಾನ್ಯಾ ಅವರೇ ನಾಯಕಿ. ನಟ ಉಪೇಂದ್ರ ನಾಯಕರಾಗಿರುವ ‘ಹೋಮ್ ಮಿನಿಸ್ಟರ್’ ಚಿತ್ರದಲ್ಲೂ ನಟಿಸಿದ್ದಾರೆ. ಈ ಚಿತ್ರಗಳ ಶೂಟಿಂಗ್ ಮುಗಿದಿದೆ. ಇವುಗಳ ಮೇಲೆ ತಾನ್ಯಾ ನಿರೀಕ್ಷೆಯೂ ದುಪ್ಪಟ್ಟುಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.