ಮನೆಯವರೇ ಕನ್ನಡ ಕಲಿಸಿದ್ರು...
ನಾನು ಫಾರ್ಮಲ್ ಆಗಿ ಕನ್ನಡ ಕಲಿಯಲಿಲ್ಲ. ನನ್ನ ಕುಟುಂಬದವರು ಮತ್ತು ಸಿನಿಮಾ ಸೆಟ್‌ನಲ್ಲಿ ಕನ್ನಡವನ್ನೇ ಮಾತನಾಡುತ್ತಿದ್ದರು. ಅದನ್ನು ಕೇಳಿ ಕೇಳಿ ನಾನೂ ಕನ್ನಡ ಕಲಿತೆ ಅಷ್ಟೇ.
ಕನ್ನಡವನ್ನು ಮತ್ತಷ್ಟು ಕಲಿಯಲು ಸಹಾಯ ಮಾಡಿದ್ದು, ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ‘ಸೂಪರ್ ಸ್ಟಾರ್ ಆಫ್ ಕರ್ನಾಟಕ ಷೋ’. ಅದರಲ್ಲಿ ಹಿರಿಯ ನಟ ದೇವರಾಜ್ ಸರ್ ಜತೆ ನಾನು ಕಾರ್ಯಕ್ರಮ ನಡೆಸಿಕೊಡಬೇಕಿತ್ತು. ಕಾರ್ಯಕ್ರಮವನ್ನು ಕನ್ನಡದಲ್ಲಿಯೇ ನಡೆಸಿಕೊಡಬೇಕಾದ್ದರಿಂದ ಕನ್ನಡ ಮಾತನಾಡುವುದನ್ನು ಚೆನ್ನಾಗಿ ರೂಢಿಸಿಕೊಂಡೆ. ಇದಕ್ಕೆ ದೇವರಾಜ್ ಸರ್ ತುಂಬಾ ಸಹಾಯ ಮಾಡಿದರು.
ಕನ್ನಡ ಕಲಿಯಲು ಹೆಚ್ಚು ಆಸಕ್ತಿ ಬಂದದ್ದು ಉಪೇಂದ್ರ ಅವರನ್ನು ಮದುವೆಯಾದ ಮೇಲೆಯೇ. ಅದುವರೆಗೆ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದೆನಾದರೂ ಅಷ್ಟೊಂದು ಸುಲಲಿತವಾಗಿ ಕನ್ನಡ ಮಾತನಾಡುತ್ತಿರಲಿಲ್ಲ. ಮದುವೆಯಾಗಿ ಗಂಡನ ಮನೆಗೆ ಬಂದ ಮೇಲೆ ಅತ್ತೆ–ಮಾವ ಅವರ ಜತೆಗೆ ಮಾತನಾಡಲು ಕನ್ನಡ ಕಲಿತೆ. ಎಷ್ಟೋ ಬಾರಿ ಉಪ್ಪಿ ನನ್ನ ತಪ್ಪುಗಳನ್ನು ತಿದ್ದಿದ್ದಾರೆ. ಬಂತು, ಬಂದರು ಅನ್ನೋದಕ್ಕೆ ವ್ಯತ್ಯಾಸವೇ ನನಗೆ ಗೊತ್ತಿರಲಿಲ್ಲ. ಅದನ್ನೆಲ್ಲಾ ಉಪ್ಪಿ ಸರಿಪಡಿಸಿದರು.
ನನ್ನ ಮಾತೃಭಾಷೆ ಬಂಗಾಳಿ. ಆದರೆ, ಕನ್ನಡ ತುಂಬಾ ಸಿಹಿಯಾದ ಭಾಷೆ. ಸಾವಿರಾರು ವರ್ಷಗಳ ಇತಿಹಾಸವಿರುವ ಈ ಭಾಷೆಯನ್ನು ಮಾತನಾಡಲು ಖುಷಿ ಅನಿಸುತ್ತೆ. ಕೇಳಲು ಇಂಪಾಗಿದೆ. ಮಕ್ಕಳಾದ ಆಯುಷ್, ಐಶ್ವರ್ಯಾ ಇಬ್ಬರಿಗೂ ಕನ್ನಡ ಮತ್ತು ಬಂಗಾಳಿ ಕಲಿಸಿದ್ದೇನೆ. ಮಗ ಕನ್ನಡದಲ್ಲೇ ಜಾಸ್ತಿ ಮಾತನಾಡುತ್ತಾನೆ. ಮಗಳು ಐಶ್ವರ್ಯಾ ಅಷ್ಟಾಗಿ ಕನ್ನಡ ಮಾತನಾಡೋದಿಲ್ಲ. ನಾನು ಮಾತ್ರ ಮಕ್ಕಳ ಜತೆ ಕನ್ನಡದಲ್ಲಿ ಮಾತನಾಡುತ್ತೇನೆ.
ಕಾರ್ಯಕ್ರಮಗಳಿಗೆ ಹೋದಾಗ ಹಿರಿಯರಿಗೆ ಶುಭ ಹಾರೈಸುವ ಸಂದರ್ಭದಲ್ಲಿ ಎಲ್ಲಿ ತಪ್ಪಾಗಿ ಕನ್ನಡ ಮಾತನಾಡಿಬಿಡುವೆನೋ ಅನ್ನುವ ಆಂತಕವಿತ್ತು. ಅದೀಗ ಕಡಿಮೆಯಾಗಿದೆ. ಗೊತ್ತಿರುವ ಕನ್ನಡದಲ್ಲೇ ಹಾರೈಸುವೆ. ಆದರೂ ಮಧ್ಯೆ ಮಧ್ಯೆ ಇಂಗ್ಲಿಷ್ ಪದಗಳು ನುಸುಳುತ್ತವೆ. ಸಂಪೂರ್ಣ ಕನ್ನಡ ಕಲಿತು ಕನ್ನಡದಲ್ಲಿಯೇ ನನ್ನ ಪಾತ್ರಕ್ಕೆ ನಾನೇ ಡಬ್ ಮಾಡುವ ಆಸೆ ಇದೆ.
-ಪ್ರಿಯಾಂಕ ಉಪೇಂದ್ರ, ನಟಿ
**
ಅಭಿಮಾನಿಗಳಿಗಾಗಿ ಕನ್ನಡ ಕಲಿತೆ...
ಸಿನಿಮಾ ನಟಿ–ನಟರು ಮತ್ತು ಅಭಿಮಾನಿಗಳ ಬಾಂಧವ್ಯ ಮುಖ್ಯವಾದದ್ದು. ನನ್ನ ಅಭಿಮಾನಿಗಳಿಗಾಗಿಯೇ ನಾನು ಕನ್ನಡವನ್ನು ಕಲಿತೆ. ಕನ್ನಡ ಕಲಿಯಲು ಯಾವುದೇ ಟೀಚರ್ ಸಹಾಯ ಪಡೆಯಲಿಲ್ಲ. ಶೂಟಿಂಗ್ ಸ್ಥಳದಲ್ಲಿ ಸೆಟ್‌ನಲ್ಲಿ ಇರುತ್ತಿದ್ದ ಹುಡುಗರೇ ಕನ್ನಡ ಕಲಿಸಿದರು. ಹಾಗಾಗಿ ನನ್ನ ಕನ್ನಡ ಅಷ್ಟು ಶುದ್ಧವಾಗಿಲ್ಲ. ಮಾಸ್ ರೀತಿಯಲ್ಲಿದೆ. ನಾವು ಯಾವ ಪರಿಸರದಲ್ಲಿರುತ್ತೇವೆಯೋ ಅಲ್ಲಿನ ಜನರ ನಡುವೆಯೇ ಇದ್ದು ಕನ್ನಡ ಭಾಷೆಯನ್ನು ಕಲಿಯಲು ಸಾಧ್ಯ ಅಂತ ನನಗನಿಸುತ್ತೆ. ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡ ಕಲಿಯಲು ಆಸಕ್ತಿ ಬೇಕು.
ಚಂದನವನಕ್ಕೆ ಬಂದು 9 ವರ್ಷಗಳಾಯಿತು. ಇಷ್ಟು ವರ್ಷಗಳಲ್ಲಿ ಅಲ್ಪಸ್ವಲ್ಪ ಕನ್ನಡ ಕಲಿತಿರುವೆ. ಒಂದೆರಡು ಸಿನಿಮಾಗಳಲ್ಲಿ ಕನ್ನಡದಲ್ಲಿಯೇ ಡಬ್ ಮಾಡಿದೆ. ಅದರೆ, ಅದು ಅಷ್ಟು ಸರಿ ಹೋಗಲಿಲ್ಲ. ಚೆನ್ನಾಗಿ ಕಲಿತು ಡಬ್ ಮಾಡುವ ಭರವಸೆ ಇದೆ. ಕನ್ನಡ ತುಂಬಾ ಸಿಹಿಯಾದ ಭಾಷೆ. ಕಲಿಯಲು ಸರಳ ಮತ್ತು ಸುಲಭ. ನಾನು ಇತರ ಭಾಷೆಗಳಲ್ಲಿ ನಟಿಸಿದ್ದರೂ ಕನ್ನಡಿಗರ ತೋರಿದ ಔದಾರ್ಯ ದೊಡ್ಡದು. ಹಾಗಾಗಿ, ಕನ್ನಡವನ್ನು ಸಂಪೂರ್ಣವಾಗಿ ಕಲಿತು ಕನ್ನಡ ಸಿನಿರಂಗದಲ್ಲೇ ನೆಲೆಸಬೇಕು ಅಂತಾಸೆ. ಕನ್ನಡ ಇತರ ಭಾಷೆಗಳಿಗಿಂತ ಕಮ್ಮಿ ಇಲ್ಲ. ‘ನಿಮ್ಮ ಪ್ರೀತಿಯ ರಾಗಿಣಿ’ ಅಂತ ಆಟೋಗ್ರಾಫ್ ಕೊಡುವಷ್ಟು ಕನ್ನಡ ಬರೆಯಲು ಬರುತ್ತೆ.
-ರಾಗಿಣಿ ದ್ವಿವೇದಿ, ನಟಿ
**
ಪೂರ್ತಿ ಕನ್ನಡ ಕಲಿಯುವೆ...
ನನ್ನ ಮಾತೃಭಾಷೆ ಗುಜರಾತಿ. ಆದರೆ, ನನ್ನ ಸಿನಿಮಾ ಜೀವನಕ್ಕೆ ತಿರುವು ನೀಡಿದ್ದು ಕನ್ನಡ ಚಿತ್ರರಂಗ. ಇದುವರೆಗೂ 11 ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದೇನೆ. ನನ್ನ ಅಭಿಮಾನಿಗಳಿಗಾಗಿ ಕನ್ನಡ ಕಲಿತಿದ್ದೇನೆ. ಆದರೆ, ಸ್ಪಷ್ಟವಾಗಿ ಮಾತನಾಡಲು ಬರೋದಿಲ್ಲ. ಕರ್ನಾಟಕದಲ್ಲಿ ಜಾಸ್ತಿ ದಿನ ನೆಲೆಸಲು ಆಗಿಲ್ಲ. 6 ತಿಂಗಳ ಹಿಂದಷ್ಟೇ ಬೆಂಗಳೂರಿನಲ್ಲಿ ನೆಲೆಸಿದ್ದೇನೆ.
‘ಬಟರ್ ಫ್ಲೈ’ ಸಿನಿಮಾಕ್ಕಾಗಿ ಕನ್ನಡ ಕಲಿಯಲು ಕನ್ನಡ ಟೀಚರ್ ಒಬ್ಬರನ್ನು ನೇಮಿಸಿಕೊಂಡೆ. 10 ದಿನಗಳಲ್ಲಿ ಸಿನಿಮಾದ ಸಂಭಾಷಣೆ ಕಲಿತೆ. ಇದಕ್ಕೆ ರಮೇಶ್ ಅರವಿಂದ್ ಸರ್ ತುಂಬಾ ಸಹಾಯ ಮಾಡಿದರು. ಚಿತ್ರೀಕರಣದ ಸಂದರ್ಭದಲ್ಲಿ ನನ್ನ ಕನ್ನಡವನ್ನು ತಿದ್ದಿದ್ದಾರೆ. ಅಭಿಮಾನಿಗಳಿಗಾಗಿ ಪೂರ್ತಿಯಾಗಿ ಕನ್ನಡ ಭಾಷೆ ಕಲಿಯಬೇಕು ಎಂದುಕೊಂಡಿದ್ದೇನೆ.
-ಪಾರೂಲ್ ಯಾದವ್, ನಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.