ತೆಲುಗಿನ ‘ಸೈ ರಾ ನರಸಿಂಹ ರೆಡ್ಡಿ’ ಚಿತ್ರತಂಡ ಬೀದರ್‌ನ ಐತಿಹಾಸಿಕ ಕೋಟೆಯನ್ನು ಮರುನಿರ್ಮಾಣ ಮಾಡುವ ತರಾತುರಿಯಲ್ಲಿದೆ. ಹಳೆಯ ಕೋಟೆಯನ್ನು ಕೆಡವುತ್ತಾರಾ ಎಂದು ತಲೆಕೆಡಿಸಿಕೊಂಡಿರಾ? ಇಲ್ಲ ಮಾರಾಯ್ರೆ. ಸಿನಿಮಾಕ್ಕಾಗಿ ಬೀದರ್ ಕೋಟೆಯ ತದ್ರೂಪವನ್ನು ನಿರ್ಮಿಸಲಿದ್ದಾರೆ ಅಷ್ಟೇ.
ಬೀದರ್ ಕೋಟೆಗೆ ಇತ್ತೀಚೆಗಷ್ಟೇ ಚಿತ್ರತಂಡ ಬಂದಿಳಿದಿತ್ತು. ಇನ್ನೇನು ಕ್ಯಾಮೆರಾ ಲೈಟ್ಸ್ ಆನ್ ಆ್ಯಕ್ಷನ್ ಅನ್ನುವಷ್ಟರಲ್ಲಿ ಕೋಟೆಯ ನಿವಾಸಿಗಳು ತಕರಾರು ಎತ್ತಿದರು. ಹೀಗಾಗಿ ಕೋಟೆಯ ಮರುಸೃಷ್ಟಿ ಮಾಡಲೇಬೇಕಾದ ಅನಿವಾರ್ಯತೆ ಚಿತ್ರತಂಡಕ್ಕೆ ಎದುರಾಯಿತು.
ಆಗಿದ್ದಿಷ್ಟು: ಕೋಟೆಯ ಮಧ್ಯಭಾಗದಲ್ಲೊಂದು ಮಸೀದಿ ಇರುವುದು ಅಲ್ಲಿಗೆ ಹೋಗಿಬಂದವರಿಗೆ ತಿಳಿದಿದೆ. ಆದರೆ ಚಿತ್ರತಂಡ ಅಲ್ಲೊಂದು ಹಿಂದೂ ದೇವರ ಮೂರ್ತಿ ಇಟ್ಟು ಚಿತ್ರೀಕರಣ ಮಾಡಲು ಮುಂದಾಗಿತ್ತು. ಇದರಿಂದ ಅಸಮಾಧಾನಗೊಂಡ ನಿವಾಸಿಗಳು ಕೋಟೆಯಲ್ಲಿ ಚಿತ್ರೀಕರಣ ಮಾಡದಂತೆ ತಡೆದರು. ಆದರೆ ಚಿತ್ರಕತೆಯಲ್ಲಿನ ಕೆಲವು ಸನ್ನಿವೇಶಗಳನ್ನು ಬೀದರ್ ಕೋಟೆಯಲ್ಲೇ ಚಿತ್ರೀಕರಿಸಬೇಕಾಗಿತ್ತು. ಹಾಗಾಗಿ ನಕಲಿ ಕೋಟೆಯಲ್ಲಿ ಚಿತ್ರೀಕರಣ ಮುಂದುವರಿಸುವ ತೀರ್ಮಾನಕ್ಕೆ ಚಿತ್ರ ತಂಡ ಬಂತು.
ಸೆಟ್ಟೇರುವ ಹೊತ್ತಿಗೇ ಕೆಲವು ಸಿನಿಮಾಗಳು ಭಾರಿ ಸುದ್ದಿ ಮತ್ತು ನಿರೀಕ್ಷೆಗೆ ಕಾರಣವಾಗುತ್ತವೆ. ತೆಲುಗಿನ ‘ಸೈ ರಾ ನರಸಿಂಹ ರೆಡ್ಡಿ’ ಅಂತಹ ಚಿತ್ರಗಳಲ್ಲೊಂದು. ರಾಮ್‌ಚರಣ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ‘ನರಸಿಂಹ ರೆಡ್ಡಿ’ಯಲ್ಲಿ ಮೆಗಾಸ್ಟಾರ್ ಚಿರಂಜೀವಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಸುರೇಂದ್ರ ರೆಡ್ಡಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಬಂಡವಾಳ ಹೂಡಿರುವುದು ರಾಮ್‌ಚರಣ್ ಮತ್ತು ಸುರೇಖಾ ಕೋನಿಡೆಲ. ಕೋಟೆಯ ಮರುಸೃಷ್ಟಿ ದುಬಾರಿಯಾದರೂ ಚಿತ್ರಕತೆ ಮತ್ತು ಸನ್ನಿವೇಶಗಳಲ್ಲಿ ಬದಲಾವಣೆ ಮಾಡಿಕೊಳ್ಳಬಾರದು ಎಂಬ ತೀರ್ಮಾನ ಕೈಗೊಂಡಿರುವುದು ರಾಮ್‌ಚರಣ್.
ಸ್ವಾತಂತ್ರ್ಯ ಹೋರಾಟಗಾರ ಉಯ್ಯಾಲವಾಡ ನರಸಿಂಹ ರೆಡ್ಡಿ ಜೀವನಕತೆಯನ್ನು ಆಧರಿಸಿ ಚಿತ್ರ ಇದಾಗಿದೆ. ಇದೇ ಆಗಸ್ಟ್‌ನಲ್ಲಿ ಬಿಡುಗಡೆಯಾಗಬೇಕಿರುವ ಈ ಚಿತ್ರದಲ್ಲಿ ಸುದೀಪ್ ಸೇರಿದಂತೆ ಕನ್ನಡದ ಕೆಲವು ನಟರೂ ನಟಿಸಿದ್ದಾರೆ. ಆವುಕು ರಾಜ ಎಂಬ ಪಾತ್ರ ಮಾಡುತ್ತಿರುವ ಕಿಚ್ಚ ಸುದೀಪ್ ತಮ್ಮ ಪಾಲಿನ ಚಿತ್ರೀಕರಣವನ್ನು ಮುಗಿಸಿದ್ದಾರೆ.
ದಕ್ಷಿಣ ಮತ್ತು ಉತ್ತರ ಭಾರತದ ಚಿತ್ರರಂಗಗಳಿಂದ ದಿಗ್ಗಜ ಕಲಾವಿದರನ್ನು ಹೆಕ್ಕಿ ತೆಗೆದಿದ್ದಾರೆ ರಾಮ್‌ಚರಣ್. ಅಮಿತಾಭ್ ಬಚ್ಚನ್ ಕೂಡಾ ಈ ಚಿತ್ರದಲ್ಲಿ ನಟಿಸುತ್ತಿರುವುದು ಗಮನಾರ್ಹ ಅಂಶ.ನಯನತಾರಾ, ವಿಜಯ್ ಸೇತುಪತಿ, ತಮನ್ನಾ ಭಾಟಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.