ಬೆಂಗಳೂರು: ತೆಲುಗಿನ ಜನಪ್ರಿಯ ನಿರೂಪಕಿ ಹಾಗೂ ನಟಿ ಸುಮಾ ಅವರು ಪತ್ರಕರ್ತರ ಬಗ್ಗೆ ಆಡಿದ ಮಾತಿಗೆ ಖಂಡನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಕ್ಷಮೆ ಕೇಳಿದ್ದಾರೆ.
ಈ ಬಗ್ಗೆ ವಿಡಿಯೊ ಮೂಲಕ ಪತ್ರಕರ್ತರಲ್ಲಿ ಸುಮಾ ಕ್ಷಮೆ ಕೋರಿದ್ದಾರೆ.
ಯುವ ನಟ ವೈಷ್ಣವ್ ತೇಜ್ ಹಾಗೂ ನಟಿ ಶ್ರೀಲೀಲಾ ನಟಿಸಿರುವ ‘ಆದಿಕೇಶವ’ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದೆ. ಸುಮಾ ಅವರು, ಕಾರ್ಯಕ್ರಮ ತಡವಾಗುತ್ತಿರುವ ಬಗ್ಗೆ ಮಾತನಾಡುತ್ತಾ ಅವರು (ಪತ್ರಕರ್ತರು) ಸ್ನ್ಯಾಕ್ಸ್ ಅನ್ನು ಊಟದ ರೀತಿ ತಿನ್ನುತ್ತಿದ್ದಾರೆ, ಅವರು ತಿನ್ನುವುದು ಮುಗಿದ ಬಳಿಕ ಕಾರ್ಯಕ್ರಮ ಪ್ರಾರಂಭ ಮಾಡೋಣ ಎಂದು ಹೇಳಿದ್ದರು.
ಸುಮಾ ಮಾತಿಗೆ ಪತ್ರಕರ್ತರು ಆಕ್ಷೇಪ ವ್ಯಕ್ತಪಡಿಸಿದರು. ನಂತರ ಸುಮಾ ಅವರು ತಮಾಷೆಯಾಗಿ ಹೇಳಿದ್ದು ಎಂದರು. ನಂತರ ವಿಡಿಯೊ ಮೂಲಕ ಅವರು ಪತ್ರಕರ್ತರಲ್ಲಿ ಕ್ಷಮೆ ಕೋರಿದ್ದಾರೆ.
ಮಾಧ್ಯಮ ಮಿತ್ರರಿಗೆ ನಮಸ್ಕಾರ, ಕಾರ್ಯಕ್ರಮವೊಂದರಲ್ಲಿ ನಾನು ಆಡಿದ ಮಾತುಗಳು ನಿಮಗೆ ಬೇಸರ ತಂದಿದೆ ಎಂಬುದು ನನಗೆ ಅರ್ಥವಾಗಿದೆ. ಹಾಗಾಗಿ ಮತ್ತೊಮ್ಮೆ ಕ್ಷಮೆ ಕೇಳುತ್ತಿದ್ದೇನೆ. ಹಲವು ವರ್ಷಗಳಿಂದ ನಾನು ಹಾಗೂ ನೀವು ಒಟ್ಟಿಗೆ ಈ ಪಯಣದಲ್ಲಿ ಸಾಗುತ್ತಾ ಬಂದಿದ್ದೇವೆ, ನೀವೆಷ್ಟು ಕಷ್ಟಪಟ್ಟು ಕೆಲಸ ಮಾಡುತ್ತೀರೆಂದು ನನಗೆ ಗೊತ್ತು. ನನ್ನ, ನಿಮ್ಮ ಕುಟುಂಬದ ಸದಸ್ಯೆ ಎಂದುಕೊಂಡು ಕ್ಷಮಿಸುತ್ತೀರೆಂದು ನಂಬಿದ್ದೀನಿ ಎಂದು ವಿಡಿಯೊದಲ್ಲಿ ಹೇಳಿದ್ದಾರೆ.
ಸುಮಾ ಅವರು ಮೂಲತ ಮಲಯಾಳಂ ಮೂಲದವರು. ಇವರು 1996ರಿಂದ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ನಿರೂಪಕಿಯಾಗಿ ಜನಪ್ರಿಯತೆ ಪಡೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.