ಎಲ್ಲೆಡೆ ನವರಾತ್ರಿ ಹಬ್ಬದ ಸಂಭ್ರಮ ಕಾಣುತ್ತಿದೆ. ಇದು ಒಂಬತ್ತು ದಿನಗಳ ಹಬ್ಬವಾದರೂ ಕೊನೆಯ ಎರಡು ದಿನವಾದ ಆಯುಧಪೂಜೆ ಹಾಗೂ ವಿಜಯದಶಮಿಯನ್ನು ಸಂಭ್ರಮದಿಂದ ಆಚರಿಸುತ್ತಾರೆ. ನವರಾತ್ರಿ ಆಚರಣೆ ಈ ವರ್ಷ ತಮಗೆ ಹೇಗೆ ವಿಶೇಷ ಎಂದು ಮಾತಾಡಿದ್ದಾರೆ ಕನ್ನಡದ ಕೆಲ ನಟ/ನಟಿಯರು.
ಮಾರ್ನೇಮಿಯಲ್ಲಿ ಹುಲಿವೇಷದ ಗಮ್ಮತ್
ನನ್ನೂರು ಮಂಗಳೂರು ಸಮೀಪದ ಕೋಡಿಕೆರೆ.ನಮ್ಮೂರಿನಲ್ಲಿ ನವರಾತ್ರಿ ಮಾರ್ನೇಮಿ ಎಂದು ಕರೆಯುತ್ತಾರೆ. ಹುಲಿವೇಷ, ಡೋಲು, ಕುಣಿತ ಈ ಹಬ್ಬದ ವಿಶೇಷ. ನನಗೆ ಮಾರ್ನೇಮಿ ಅಂದ್ರೆ ಮೊದಲು ನೆನಪಾಗುವುದೇ ಹುಲಿವೇಷ. ಊರಿನಲ್ಲಿ 5–6 ತಂಡಗಳು ಹುಲಿವೇಷ ಹಾಕಿರುತ್ತಾರೆ. ಹುಲಿವೇಷದ ತಂಡ ಮನೆ ಮನೆಗೆ ಹೋಗುತ್ತಿದ್ದರೆ ನಾವು ಹುಡುಗರು ಅದರ ಹಿಂದೆ ಹಿಂದೆ ಹೋಗುತ್ತಿದೆವು.ನಾನು ಸಣ್ಣವನಿದ್ದಾಗಿನಿಂದಲೂ ಇದು ಅಭ್ಯಾಸದಂತೆ ನಡೆದಿದೆ.ಈಗ ಶೂಟಿಂಗ್, ಸಿನಿಮಾ ಕೆಲಸ ಎಂದು ಬೆಂಗಳೂರಿನಲ್ಲಿದ್ದೇನೆ. ಹಬ್ಬದದಿನ ನನ್ನೂರಲ್ಲಿರುತ್ತೇನೆ. ಆಯುಧಪೂಜೆ, ವಿಜಯದಶಮಿ ಎರಡೂ ದಿನ ನಾನು ಯುವಕರ ಜೊತೆ ಹುಲಿಕುಣಿತ ಮಾಡುತ್ತೇನೆ.ಮನೆಯಲ್ಲಿ ಅಮ್ಮ ದುರ್ಗೆ, ಲಕ್ಷ್ಮಿ ಪೂಜೆ ಮಾಡುತ್ತಾರೆ. ಅನಂತರ ಹಬ್ಬದೂಟ ಇದ್ದೇ ಇರುತ್ತದೆ.
ರಾಜ್ ಶೆಟ್ಟಿ, ನಟ, ನಿರ್ದೇಶಕ
**
ಅಪ್ಪನ ಗ್ರಾನೈಟ್ ಫ್ಯಾಕ್ಟರಿಯಲ್ಲಿ ಹಬ್ಬ
ನಮ್ಮ ಮನೆಯಲ್ಲಿ ಆಯುಧಪೂಜೆ ಹಾಗೂ ವಿಜಯದಶಮಿಯನ್ನು ಮಾತ್ರ ಆಚರಿಸುತ್ತೇವೆ. ಅಪ್ಪನ ಗ್ರಾನೈಟ್ ಫ್ಯಾಕ್ಟರಿಯಲ್ಲಿ ಆಯುಧಪೂಜೆ ನಡೆಯುತ್ತದೆ. ಪ್ರತಿವರ್ಷ ಆಯುಧಪೂಜೆಗೆ ಅಲ್ಲೇ ಹೋಗುತ್ತೇನೆ. ಆ ದಿನ ಪೂಜೆ ಮಾಡಿ, ಅಪ್ಪ ಎಲ್ಲರಿಗೂ ಬೋನಸ್ ಕೊಡುತ್ತಾರೆ. ಕಾರ್ಮಿಕರ ಮನೆ ಸದಸ್ಯರೂ ಬಂದಿರುತ್ತಾರೆ. ಎಲ್ಲರೂ ಸೇರಿಕೊಂಡು ಒಂದೇ ಮನೆಯವರಂತೆ ಹಬ್ಬ ಮಾಡುತ್ತೇವೆ. ವಿಜಯದಶಮಿಗೆ ಮನೆಯಲ್ಲೇ ಇರುತ್ತೇವೆ. ಅಮ್ಮ ಅಡುಗೆ ಎಕ್ಸ್‌ಫರ್ಟ್. ಅಪ್ಪನಿಗೆ ಬಾಯಿರುಚಿ ಜಾಸ್ತಿ. ಹಾಗಾಗಿ ಹಬ್ಬದಡುಗೆ ವಿಶೇಷವಾಗಿರುತ್ತದೆ. ದೇವರಿಗೆ ಪೂಜೆ, ನೈವೇದ್ಯಕ್ಕೆ ಎರಡು ಮೂರು ಬಗೆಯ ಸಿಹಿತಿಂಡಿ ಜೊತೆ ಪಾಯಸ ಇದ್ದೇ ಇರುತ್ತದೆ. ಹೋಳಿಕಡುಬು ಈ ಹಬ್ಬದ ವಿಶೇಷ. ಅವತ್ತು ಮನೆ ಮಂದಿ ಬಾಳೆಎಲೆಯಲ್ಲಿ ಊಟ ಮಾಡುತ್ತೇವೆ.
ಅಮೃತಾ, ನಟಿ
**
ರಾಂಧವ ಸೆಟ್‌ನಲ್ಲಿ ಹಬ್ಬದ ಆಚರಣೆ
ಈ ಬಾರಿ ದಸರಾ ಹಬ್ಬ ನನಗೇ ವಿಶೇಷ. ‘ರಾಂಧವ’ ಸಿನಿ ತಂಡದ ಜೊತೆ ಈ ಬಾರಿ ಆಯುಧಪೂಜೆ, ವಿಜಯದಶಮಿ ಆಚರಿಸುತ್ತಿದ್ದೇವೆ. ಈ ಸಿನಿಮಾದಲ್ಲಿ ನಾನು ನಾಯಕನಾಗಿ ನಟಿಸುತ್ತಿದ್ದೇನೆ. ರಾಂಧವ ಎಂದರೆ ಯುದ್ಧದಲ್ಲಿ ಗೆಲುವು ಸಾಧಿಸಿದವ ಎಂಬ ಅರ್ಥ. ಹಾಗಾಗಿ ಆಯುಧ ಪೂಜೆ ದಿನ ಸೆಟ್‌ನಲ್ಲಿ ರಾಜನ ಕತ್ತಿ, ಆಯುಧಗಳಿಗೆ ಪೂಜೆ ಮಾಡುತ್ತೇವೆ. ಕ್ಯಾಮೆರಾ ಹಾಗೂ ಚಿತ್ರೀಕರಣಕ್ಕೆ ಬಳಸುವ ಉಪಕರಣಗಳಿಗೂ ಪೂಜೆ ಮಾಡುತ್ತೇವೆ. ವಿಜಯದಶಮಿ ದಿನ ಮೈಸೂರಿಗೆ ಹೋಗುತ್ತೇವೆ. ಅಲ್ಲಿ ‘ರಾಂಧವ’ ಸಿನಿಮಾಕ್ಕಾಗಿ ಹಾಕಿರುವ ಅರಮನೆ ಸೆಟ್‌ನಲ್ಲಿವಿಜಯದಶಮಿ ಆಚರಿಸುತ್ತೇವೆ. ಅಲ್ಲಿ ಸಿನಿಮಾ ತಂಡದ ಸದಸ್ಯರು, ಸ್ನೇಹಿತರು ಎಲ್ಲಾ ಸೇರಿಕೊಂಡು ಅದ್ದೂರಿಯಾಗಿ ಹಬ್ಬ ಆಚರಿಸಲಿದ್ದೇವೆ
ಭುವನ್ ಪೊನ್ನಪ್ಪ, ನಟ
**
ನೃತ್ಯದ ಮೂಲಕ ದೇವಿಗೆ ಸೇವೆ
ದಸರಾ ಹಬ್ಬ ಪ್ರತಿವರ್ಷ ನನಗೆ ವಿಶೇಷ. ನಾನು ಭರತನಾಟ್ಯ ಕಲಾವಿದೆ. ಕಳೆದ ನಾಲ್ಕು ವರ್ಷಗಳಿಂದನವರಾತ್ರಿಯ ಒಂಬತ್ತು ದಿನಗಳಲ್ಲಿ ಒಂದು ದಿನ ನಾನು ನೃತ್ಯದ ಮೂಲಕ ದೇವಿಗೆ ನೃತ್ಯಸೇವೆ ಸಲ್ಲಿಸುತ್ತಿದ್ದೇನೆ.ಈ ವರ್ಷದ ವಿಶೇಷ ಅಂದ್ರೆ ವಿಜಯದಶಮಿಯಂದು ನಮ್ಮ ನೃತ್ಯ ತಂಡವು ಮೈಸೂರು ದಸರಾದಲ್ಲಿ ನೃತ್ಯ ಕಾರ್ಯಕ್ರಮ ನೀಡುತ್ತಿದ್ದೇವೆ. ಮನೆಯಲ್ಲಿಗೊಂಬೆಗಳನ್ನು ಕೂರಿಸುವ ಪದ್ಧತಿಯನ್ನು ಕೆಲ ವರ್ಷಗಳ ಹಿಂದೆ ನಿಲ್ಲಿಸಿದ್ದೇವೆ. ಅದನ್ನು ವಾಪಸ್ ಆರಂಭಿಸಲು ಇನ್ನೂ ಕಾಲ ಕೂಡಿ ಬಂದಿಲ್ಲ. ಹೀಗಾಗಿ ಆಯುಧಪೂಜೆ ದಿನ ಗಾಡಿಗಳಿಗೆ ಪೂಜೆ, ದೇವರ ಪೂಜೆ ಇರುತ್ತದೆ.
ರಶ್ಮಿ, ನಟಿ
**
ಆಯುಧ ಪೂಜೆ ತಪ್ಪಿಸಲ್ಲ!
ನನ್ನೂರು ಪಾಂಡವಪುರ ಮೈಸೂರು ಹತ್ತಿರವೇ ಇರೋದು. ಇಷ್ಟು ಹತ್ತಿರವಿದ್ದರೂ ನಾನು ಇದುವರೆಗೂ ಮೈಸೂರು ದಸರಾವನ್ನೇ ನೋಡಿಯೇ ಇಲ್ಲ. ಬಾಲ್ಯದಲ್ಲಿ ದಸರಾ ಅಂದರೆ ಬರೀ ರಜೆ ಅನ್ನೋ ಭಾವನೆಯಿತ್ತು. ಆಗೆಲ್ಲಾ ಊರೂರು ಸುತ್ತೋದು ಆಟ ಆಡೋದೇ ಕೆಲಸವಾಗಿತ್ತು. ಈ ಬಾರಿಯೂ ಬಿಡುವಿಲ್ಲದ ಕೆಲಸಗಳ ನಡುವೆ ದಸರಾ ನೋಡಲಾಗುತ್ತಿಲ್ಲ.
ನಮ್ಮಲ್ಲಿ ಆಯುಧ ಪೂಜೆ ಚೆನ್ನಾಗಿ ಆಚರಿಸುತ್ತೇವೆ. ನಮ್ಮ ತೋಟದಲ್ಲಿನ ಮೇಷಿನ್ ಮನೆಗೆ ಹೋಗ ಕೋಳಿ ಕೊಯ್ದು ಬಲಿ ಕೊಡ್ತೀವಿ. ನಮ್ಮ ದೊಡ್ಡಪ್ಪ, ಚಿಕ್ಕಪ್ಪ ಅವರ ಕುಟುಂಬಗಳು ಬೇರ್ಪಟ್ಟಿದ್ದರೂ ಆಯುಧ ಪೂಜೆ ದಿನ ಎಲ್ಲರೂ ಒಟ್ಟಾಗುತ್ತೇವೆ. ಅವರ ಮಕ್ಕಳ ಜತೆಗೆ ಸೇರಿ ನಾನು ಮೇಷಿನ್ ಮನೆಯನ್ನು ಸ್ವಚ್ಛ ಮಾಡ್ತೀನಿ. ಸಾಮಾನ್ಯವಾಗಿ ಹಬ್ಬಕ್ಕೆ ನಾನು ಊರಿಗೆ ಹೋಗ್ತೀನಿ. ಬೆಂಗಳೂರಿನಲ್ಲಿದ್ದರೂ ಆಯುಧ ಪೂಜೆ ಮಾತ್ರ ತಪ್ಪಿಸಲ್ಲ. ಇಲ್ಲಿಯೇ ಕುಡುಗೋಲು ಸೇರಿದಂತೆ ಮತ್ತಿತರ ಆಯುಧ ಇಟ್ಟು ಪೂಜೆ ಮಾಡ್ತೀನಿ. ಊರಿಂದಲೇ ಅಮ್ಮ ಸಿಹಿ, ಹೂವು–ಹಣ್ಣು ಕಳಿಸ್ತಾರೆ. ಇನ್ನು ಹಬ್ಬದಲ್ಲಿ ನನಗಂತೂ ರೇಷ್ಮೆ ಸೀರೆ ಉಡಲಾಗದು. ಉಟ್ಟರೆ ಕಾಟನ್ ಸೀರೆ ಉಡ್ತೀನಿ. ಅಡುಗೆಗೆ ಶ್ಯಾವಿಗೆ ಪಾಯಸ ಚಿತ್ರಾನ್ನ, ಫಲಾವ್ ಮಾಡ್ತೀನಿ. ಈ ಸಲ ಹಬ್ಬ ಪಾಂಡವಪುರದಲ್ಲೇ ಆಚರಿಸ್ತಾ ಇದ್ದೀನಿ.
–ಅಕ್ಷತಾ ಪಾಂಡವಪುರ, ರಂಗಭೂಮಿ–ಸಿನಿಮಾ ನಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.