ಕಸ್ತೂರ್ ಬಾ ಗಾಂಧಿಯವರ ಜೀವನವನ್ನು ಆಧರಿಸಿ ಬರಗೂರು ರಾಮಚಂದ್ರಪ್ಪ ಅವರು ನಿರ್ದೇಶಿಸಿರುವ ‘ತಾಯಿ ಕಸ್ತೂರ್ ಗಾಂಧಿ’ ಸಿನಿಮಾವು ಪ್ಯಾರಿಸ್‌ನ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಎರಡು ಪ್ರಶಸ್ತಿಗಳನ್ನು ಬಾಚಿಕೊಂಡಿದೆ.
ಚಿತ್ರಕ್ಕೆ ‘ಶ್ರೇಷ್ಠ ಚಿತ್ರ’ ಹಾಗೂ ಚಿತ್ರದ ಗಾಂಧಿ ಪಾತ್ರಧಾರಿ ಕಿಶೋರ್ ಅವರಿಗೆ ‘ಶ್ರೇಷ್ಠ ನಟ’ ಪ್ರಶಸ್ತಿ ಲಭಿಸಿದೆ. ಕಿಶೋರ್ ಅವರು ನೋಯ್ಡಾದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ‘ಶ್ರೇಷ್ಠ ನಟ’ ಪ್ರಶಸ್ತಿಗೆ ಭಾಜನರಾಗಿದ್ದರು.
ಈ ಚಿತ್ರವು ಲಾಸ್ ಏಂಜಲಿಸ್ ಸನ್ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಈ ಸಿನಿಮಾ ಪ್ರದರ್ಶನ ಕಂಡಿತ್ತು. 12ನೇ ದಾದಾ ಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧಾ ವಿಭಾಗಕ್ಕೂ ಈ ಚಿತ್ರ ಆಯ್ಕೆಯಾಗಿತ್ತು. ಅಮೆರಿಕದ ಡಲ್ಲಾಸ್ ಚಿತ್ರೋತ್ಸವದಲ್ಲಿ ಈ ಚಿತ್ರಕ್ಕೆ ಅತ್ಯುತ್ತಮ ಸಂಕಲನಕ್ಕಾಗಿ ಪ್ರಶಸ್ತಿ ಲಭಿಸಿತ್ತು. ಸುರೇಶ್ ಅರಸು ಈ ಚಿತ್ರದ ಸಂಕಲನಕಾರರು. ಬರಗೂರು ಅವರು ಬರೆದ ‘ಕಸ್ತೂರ್ ಬಾ Vs ಗಾಂಧಿ’ ಕಾದಂಬರಿಯನ್ನು ಈ ಚಿತ್ರವು ಆಧರಿಸಿದೆ. ಈ ಕಾದಂಬರಿ ‘ಸುಧಾ’ ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತು.
‘ಕಸ್ತೂರ್‌ಬಾ ಅವರು ತಾಯಿಯಾಗಿ ಮತ್ತು ಪತ್ನಿಯಾಗಿ ಎದುರಿಸಿದ ಬಿಕ್ಕಟ್ಟುಗಳು, ಅಪರೂಪದ ದಾಂಪತ್ಯ ಮತ್ತು ಸಾಮಾಜಿಕ ಕಾಳಜಿಗಳು ಸಿನಿಮಾದ ಮುಖ್ಯ ಕಥಾವಸ್ತು’ ಎಂದಿದ್ದಾರೆ ಬರಗೂರು.
ಕಸ್ತೂರ್ ಬಾ ಪಾತ್ರದಲ್ಲಿ ನಟಿ ಹರಿಪ್ರಿಯಾ ಅಭಿನಯಿಸಿದ್ದಾರೆ. ಜನಮಿತ್ರ ಮೂವೀಸ್ ಬ್ಯಾನರ್ ಅಡಿ ಗೀತಾ ಅವರು ಈ ಚಿತ್ರ ನಿರ್ಮಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.