2023ರಲ್ಲಿ ಭಾರತೀಯ ಚಿತ್ರರಂಗದ ಕಡೆ ನೋಡಿದರೆ, ಹಿಂಸೆ, ಕ್ರೌರ್ಯ, ರಕ್ತಸಿಕ್ತ ಅಧ್ಯಾಯಗಳಿಂದ ತುಂಬಿದ ಮಾಸ್ ಸಿನಿಮಾಗಳೇ ಈ ವರ್ಷ ಬಾಕ್ಸ್ ಆಫೀಸ್ ಅನ್ನು ಆಳಿರುವುದು ಸ್ಪಷ್ಟ. ‘ಪಠಾಣ್’ನಿಂದ ‘ಅನಿಮಲ್’ವರೆಗೂ ಸರಪಟಾಕಿಯಂತಹ ಗನ್‌ಗಳ ಬಳಕೆಯೇ ಟ್ರೆಂಡ್ ಆಗಿವೆ. ಪುರುಷತ್ವ ಮೆರೆಸಿ, ಹೆಣ್ಣನ್ನು ಅವಮಾನಿಸುವುದು ಮಾಸ್ ಸಿನಿಮಾಗಳ ಭಾಗವೆಂದೆನಿಸುತ್ತಿದೆ. ಇವೆಲ್ಲವೂ ಬದಲಾದ ಪ್ರೇಕ್ಷಕರ ಅಭಿರುಚಿಯ ಸಂಕೇತವೇ ಎಂಬಂತಹ ಚರ್ಚೆಯೊಂದು ಚಿತ್ರರಂಗದಲ್ಲಿ ಶುರುವಾಗಿದೆ...
ಶಾರೂಕ್ ಖಾನ್ ನಟನೆಯ ‘ಪಠಾಣ್’, ‘ಜವಾನ್’, ರಣಬೀರ್ ಕಪೂರ್ ನಟನೆಯ ‘ಅನಿಮಲ್’, ‘ಗದರ್–2’, ತಮಿಳಿನ ವಿಜಯ್ ನಟನೆಯ ‘ಲಿಯೋ’, ರಜನಿಕಾಂತ್ ಅಭಿನಯದ ‘ಜೈಲರ್’...ಮೊದಲಾದವು 2023ರಲ್ಲಿ ದೇಶದ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಮೆರೆದ ಸಿನಿಮಾಗಳು. ಮಾಸ್, ಆ್ಯಕ್ಷನ್ ಪ್ರಭೇದದ ಈ ಸಿನಿಮಾಗಳಲ್ಲಿ ಕಥಾವಸ್ತುವಿಗಿಂತ ಹೆಚ್ಚು ಅಬ್ಬರಿಸಿದ್ದು ನಾಯಕನ ಕ್ರೌರ್ಯ, ಹಿಂಸೆ, ರಕ್ತ, ಹಸಿಬಿಸಿ ದೃಶ್ಯಗಳು. ‘ಅನಿಮಲ್’ ಸಿನಿಮಾ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಪುರುಷಾಹಂಕಾರ, ಹೆಣ್ಣಿನ ಅವಹೇಳನದ ದೃಶ್ಯಗಳಿಂದ ಪ್ರೇಕ್ಷಕನ ಚಪ್ಪಾಳೆ ಗಿಟ್ಟಿಸಿಕೊಂಡಿತು. ಕುಟುಂಬವೆಲ್ಲ, ವಿಶೇಷವಾಗಿ ಸಣ್ಣ ಮಕ್ಕಳನ್ನು ಒಟ್ಟಿಗೆ ಕೂರಿಸಿಕೊಂಡು ನೋಡಲಾಗದ ಈ ಚಿತ್ರದ ದೃಶ್ಯಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ವಿಪರ್ಯಾಸ.
‘ಇದು ಒಳ್ಳೆಯ ಸಿನಿಮಾಗಳ ವಿರುದ್ಧ ಒಳ್ಳೆಯ ಸಿನಿಮಾಗಳು ಸೆಣಸುವ ಕಾಲಘಟ್ಟವಲ್ಲ. ಉತ್ತಮ ಮಾರ್ಕೆಟಿಂಗ್ ತಂತ್ರದ ವಿರುದ್ಧ ಮತ್ತೊಂದು ಉತ್ತಮ ಮಾರ್ಕೆಟಿಂಗ್‌ನ ಕಾಲ. ಚೆನ್ನಾಗಿ ಮಾರ್ಕೆಟಿಂಗ್ ಮಾಡಿದವರು ದೊಡ್ಡ ಮಟ್ಟದ ಗೆಲುವು ಕಾಣುತ್ತಿದ್ದಾರೆ. ಆದರೆ ಇದು ಶಾಶ್ವತವಲ್ಲ. ಮೊನ್ನೆ ಮಮ್ಮುಟಿ ಅವರ ‘ಕಾತಲ್’ ಸಿನಿಮಾ ನೋಡಿದೆ. ಈ ವಯಸ್ಸಲ್ಲಿ ಬಹಳ ಒಳ್ಳೆಯ ಸಿನಿಮಾ ಮಾಡಿದ್ದಾರೆ. ಚಿತ್ರಮಂದಿರದಲ್ಲಿಯೂ ದೊಡ್ಡ ಹಿಟ್. ಆದರೆ ನಾವು ಅಂತಹ ಸಿನಿಮಾಗಳ ಬಗ್ಗೆ ಮಾತಾಡುವುದಿಲ್ಲ. ಯಾಕೆಂದರೆ ಈ ಚಿತ್ರತಂಡ ದುಡ್ಡು ಸುರಿದು ಸಿನಿಮಾವನ್ನು ಹೈಪ್ ಮಾಡಿಲ್ಲ. ಜನ ಚಿತ್ರಮಂದಿರಕ್ಕೆ ಬದುಕಿಗಿಂತ ದೊಡ್ಡದಾಗಿರುವುದನ್ನು ನೋಡಲು ಬರುತ್ತಾರೆ. ಬಹುಶಃ ಈಗಿನ ವಿಕೃತಿಗಳು ಪ್ರೇಕ್ಷಕರಿಗೆ ಒಂದು ರೀತಿ ಥ್ರಿಲ್ ನೀಡುತ್ತಿರಬೇಕು.
ಹಾಗಾಗಿ ಅದನ್ನು ಒಂದಷ್ಟು ಮಂದಿ ಎಂಜಾಯ್ ಮಾಡುತ್ತಿದ್ದಾರೆ. ಆದರೆ ಎಲ್ಲ ವರ್ಗದ ಜನ ಈ ರೀತಿಯ ಸಿನಿಮಾ ನೋಡುತ್ತಾರೆ ಎನ್ನಲು ಸಾಧ್ಯವಿಲ್ಲ. ವೈಯಕ್ತಿಕವಾಗಿ ನಾನು ಈ ಸಲ ಗೆದ್ದ ಸಿನಿಮಾಗಳಲ್ಲಿ ನೋಡಿದ್ದು ‘ಜವಾನ್’ ಮಾತ್ರ. ಶಾರೂಕ್ ಖಾನ್ ಇಷ್ಟ ಎಂಬ ಕಾರಣಕ್ಕೆ ಹೋಗಿದ್ದೆ. ಇಂತಹ ನಾಯಕರು ಯಾಕೆ ಇಷ್ಟು ಕ್ರೌರ್ಯದ ಸಿನಿಮಾ ಮಾಡುತ್ತಾರೆ ಎನ್ನಿಸಿತು. ಫೇರ್ ಆಂಡ್ ಲವ್ಲಿ ಹಚ್ಚಿದರೆ ಬೆಳ್ಳಗಾಗುತ್ತೇವೆ ಎಂಬುದನ್ನು ನಂಬುವ ಜನರೂ ನಮ್ಮಲ್ಲಿದ್ದಾರೆ. ಹೀಗಾಗಿ ಕೆಲವು ಸಿನಿಮಾಗಳು ಗಟ್ಟಿಯಾದ ಮಾರ್ಕೆಟಿಂಗ್‌ನಿಂದ ಗೆಲ್ಲುತ್ತಿವೆ. ವಿಕೃತಿ, ಹೆಣ್ಣಿನ ಅವಹೇಳನಗಳು ಪ್ರೇಕ್ಷಕರಿಗೆ ಥ್ರಿಲ್ ನೀಡುವ ಮಾರಾಟದ ಸರಕುಗಳಾಗುತ್ತಿವೆ’ ಎನ್ನುತ್ತಾ ವಿಷಾದದ ಧ್ವನಿ ಹೊರಡಿಸಿದರು ನಿರ್ದೇಶಕಿ ರೂಪಾ ರಾವ್.
‘ಕ್ರೌರ್ಯ, ನಗ್ನತೆ ಕಥೆಯ ಭಾಗವಾಗಿದ್ದರೆ ನನಗೆ ಯಾವುದೇ ಸಮಸ್ಯೆ, ಮಡಿವಂತಿಕೆ ಇಲ್ಲ. ಹಾಲಿವುಡ್‌ನಲ್ಲಿ ಸಾಕಷ್ಟು ಕ್ರೌರ್ಯ, ಹಿಂಸೆಯ ಕಥೆಗಳು ಸಿಗುತ್ತವೆ. ಆದರೆ ಕಥೆಗೆ ಅಗತ್ಯವಿಲ್ಲದ ಕ್ರೌರ್ಯದ ತುರುಕುವಿಕೆ ವಿಕೃತಿ ಎನ್ನಿಸುತ್ತದೆ. ಪೋರ್ನೊಗ್ರಫಿ ಸಿನಿಮಾಗಳದ್ದು ಒಂದು ವಿಭಾಗವಾದರೆ, ಪೋರ್ನೊಗ್ರಫಿ ಅಲ್ಲದ ಸಿನಿಮಾಗಳದ್ದು ಮತ್ತೊಂದು ವಿಭಾಗ. ನಾವೆಲ್ಲ ಮಾಡುವ ಚಿತ್ರಗಳು ಈ ಎರಡು ವಿಭಾಗಗಳ ನಡುವೆ ಬರುತ್ತವೆ. ಜಗತ್ತಿನಲ್ಲಿ ಎಲ್ಲ ಸಿನಿಮಾಗಳಿಗಿಂತ ಹೆಚ್ಚು ಗಳಿಕೆ ಕಾಣುವುದು ಪೋರ್ನೊಗ್ರಫಿ ಸಿನಿಮಾಗಳು. ಅವು ಮಾರಾಟವಾಗುವ ಸರಕು. ಹಿಂಸೆಯ ವಿಕೃತಿಯು ಒಂದು ರೀತಿ ಪೋರ್ನೊಗ್ರಫಿ ಕಡೆಗಿನ ಪಯಣ. ಬಹುಶಃ ಇದು ಈಗಿನ ಟ್ರೆಂಡ್ ಇರಬೇಕು’ ಎನ್ನುತ್ತಾರೆ ನಿರ್ದೇಶಕ ಪೃಥ್ವಿ ಕೊಣನೂರು.
‘ಕ್ರೈಂ, ಆ್ಯಕ್ಷನ್ ಸಿನಿಮಾಗಳನ್ನು ನಾವು ಸಸ್ಪೆನ್ಸ್ ಥ್ರಿಲ್ಲರ್ ಜಾನರ್‌ಗೆ ಸೇರಿಸುತ್ತೇವೆ. ಈ ವರ್ಷ ಒಟಿಟಿಯಲ್ಲಿ ಯಶಸ್ಸು ಕಂಡ ಬಹುತೇಕ ಚಿತ್ರಗಳು ಇದೇ ಜಾನರ್‌ಗೆ ಸೇರಿದ್ದು. ಚಿತ್ರಮಂದಿರಗಳಲ್ಲಿ ಹೈಪ್ ಆದ ಸಿನಿಮಾಗಳು ಸಾಮಾನ್ಯವಾಗಿ ಒಟಿಟಿಯಲ್ಲಿಯೂ ಜನಪ್ರಿಯತೆ ಗಳಿಸುತ್ತವೆ. ದಕ್ಷಿಣ ಭಾರತದಲ್ಲಿ ಗಮನಿಸಿದರೆ ತೆಲುಗಿನ ‘ವಿಮಾನಂ’, ‘ವ್ಯವಸ್ಥಾ’, ತಮಿಳಿನ ‘ವೀರಪ್ಪನ್’ ಡಾಕ್ಯು ಸಿರೀಸ್, ‘ವಿಡುತಲೈ’, ಕನ್ನಡದಲ್ಲಿ ‘ವೇದ’, ‘ಘೋಸ್ಟ್’, ‘ಹಾಸ್ಟೆಲ್ ಹುಡುಗರು’ ಸಿನಿಮಾಗಳು ಹೆಚ್ಚು ವೀಕ್ಷಣೆ ಪಡೆದಿವೆ’ ಎನ್ನುತ್ತಾರೆ ಜೀ5 ಒಟಿಟಿಯ ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು.
ಸಮಾಜದ ಹೊರಗೆ ಚೆನ್ನಾಗಿಲ್ಲ ಕುಟುಂಬ ಕುಳಿತು ನೋಡಲು ಸಾಧ್ಯವಿಲ್ಲ ಎಂಬ ವರದಿ ಬಂದ ದೊಡ್ಡ ಚಿತ್ರಗಳು ಈ ವರ್ಷ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗೆಲುವು ಕಂಡಿವೆ. ಪಾಲಕರು ಕುಟುಂಬ ಕುಳಿತು ನೋಡಲು ಸಾಧ್ಯವಿಲ್ಲ ಎಂದು ದೂರುತ್ತಾರೆ. ಮಜವೆಂದರೆ ಈ ಎಲ್ಲ ಕ್ರೌರ್ಯಭರಿತ ಸಿನಿಮಾಗಳನ್ನು ಅತಿ ದೊಡ್ಡ ಪ್ರಮಾಣದಲ್ಲಿ ವೀಕ್ಷಿಸಿ ಗೆಲ್ಲಿಸಿದ್ದು 18–25 ವರ್ಷದೊಳಗಿನ ಮಕ್ಕಳು. 25 ವರ್ಷದಿಂದ ಚಿತ್ರರಂಗದಲ್ಲಿದ್ದರೂ ಪ್ರೇಕ್ಷಕರ ಪಲ್ಸ್ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ. ಇದೇ ಗೆಲುವಿಗೆ ನಿಖರ ಕಾರಣವೆಂದು ಹೇಳಲು ಸಾಧ್ಯವಿಲ್ಲ.–ಜಯಣ್ಣ, ಸಿನಿಮಾ ನಿರ್ಮಾಪಕ ವಿತರಕ
ಹಿಂದಿನಿಂದಲೂ ಇದೇ ಥರ ಇದ್ದಿದ್ದು ಅನ್ನಿಸುತ್ತದೆ. ಒಬ್ಬ ನಾಯಕ ಇರುತ್ತಾನೆ, ಅವನ ಎದುರಾಳಿ ಖಳನಾಯಕ. ಖಳನಾಯಕ ಹೆಣ್ಣನ್ನು ಅವಮಾನಿಸುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಅತ್ಯಾಚಾರ ಮಾಡುವ ದೃಶ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದ. ಈಗ ಅದರ ವಿಸ್ತೃತ ರೂಪವಿದೆ. ದುರಂತವೆಂಬಂತೆ ಈಗಿನ ಚಿತ್ರದ ನಾಯಕನಲ್ಲಿಯೇ ಖಳನಾಯಕನ ಗುಣಗಳು, ಬೈಗುಳಗಳು ಕಾಣಿಸುತ್ತಿವೆ. ಈಗಿನ ವಿಡಿಯೋ ಗೇಮ್ ಜನರೇಷನ್‌ಗೆ ಇಂತಹ ಥ್ರಿಲ್‌ಗಳೇ ಮನರಂಜನೆ ನೀಡಲೂಬಹುದು.–ರೂಪಾ ರಾವ್, ನಿರ್ದೇಶಕಿ
ಕ್ರೈಂ, ಹಿಂಸೆ, ಸೆಕ್ಸ್ ಸಂಬಂಧಿತ ಸಿನಿಮಾಗಳು ಹೆಚ್ಚು ಆಸಕ್ತಿ ಹುಟ್ಟಿಸುತ್ತವೆ. ಜೀವನದಲ್ಲಿ ನೋಡದೇ ಇರುವುದನ್ನು ತೆರೆಯ ಮೇಲೆ ನೋಡಲು ಪ್ರೇಕ್ಷಕರು ಇಷ್ಟಪಡುತ್ತಾರೆ. ಯಾವುದನ್ನು ಮುಚ್ಚಿಟ್ಟಿರುತ್ತೇವೋ ಅದರ ಕುರಿತು ಆಸಕ್ತಿ ಹೆಚ್ಚು. ಹೀಗಾಗಿ ಹಿಂದಿನಿಂದಲೂ ಈ ರೀತಿ ಸಿನಿಮಾಗಳು ಬಂದಿವೆ. ಆದರೆ ತೋರಿಸುವ ರೀತಿ ಈಗ ಬದಲಾಗಿದೆ. ನಾಲ್ಕೈದು ವರ್ಷಗಳಿಂದ ಪ್ರೇಕ್ಷಕರು ಒಟಿಟಿಯಿಂದಾಗಿ ಪ್ರಪಂಚದ ಸಿನಿಮಾಗಳಿಗೆ ತೆರೆದುಕೊಂಡಿದ್ದಾರೆ. ಫಾರಿನ್ ಸಿನಿಮಾಗಳಲ್ಲಿ ಕ್ರೈಂ, ಸೆಕ್ಸ್ ಅನ್ನು ಅತಿ ವೈಭವೀಕರಿಸುತ್ತಾರೆ. ಒಟಿಟಿ ಯುಗದ ಪ್ರಭಾವವಿದು. ಸಿನಿಮಾ ನೋಡಲು ಯಾರನ್ನೂ ಬಲವಂತವಾಗಿ ತಂದು ಕೂರಿಸಲು ಆಗದು. ಪ್ರೇಕ್ಷಕ ಸ್ವಇಚ್ಛೆಯಿಂದ ನೋಡುತ್ತಿದ್ದಾನೆ.–ಶಶಾಂಕ್ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.