ADVERTISEMENT

ರಾಷ್ಟ್ರಕವಿ ಗೋವಿಂದ ಪೈ ಬಯೋಪಿಕ್ ನಿರ್ಮಾಣಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2020, 11:39 IST
Last Updated 8 ಆಗಸ್ಟ್ 2020, 11:39 IST
ಎಂ. ಗೋವಿಂದ ಪೈ
ಎಂ. ಗೋವಿಂದ ಪೈ   

ಬೆಳ್ಳಿತೆರೆಯ ಮೇಲೆ ಕ್ರೀಡಾಪಟುಗಳು, ಸಿನಿಮಾ ನಟ, ನಟಿಯರ ಬಯೋಪಿಕ್‌ಗಳು ನಿರ್ಮಾಣಗೊಂಡಿದ್ದು, ಜನರನ್ನು ರಂಜಿಸಿವೆ. ಆದರೆ, ಸಾಹಿತಿಗಳ ಬಯೋಪಿಕ್‌ ನಿರ್ಮಾಣವಾಗಿರುವುದು ವಿರಳ. ಕಮರ್ಷಿಯಲ್‌ ಆಗಿ ಇಂತಹ ಸಿನಿಮಾಗಳಿಂದ ಲಾಭ ಗಿಟ್ಟುವುದಿಲ್ಲ ಎಂಬುದು ಬಹುತೇಕ ನಿರ್ಮಾಪಕರ ಲೆಕ್ಕಾಚಾರ.

ಕನ್ನಡದಲ್ಲಿ ಈಗ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ಜೀವನಚರಿತ್ರೆಯನ್ನು ತೆರೆಗೆ ತರಲು ಸಿದ್ಧತೆ ನಡೆದಿದೆ. ಗೋವಿಂದ ಪೈ ಅವರ ತವರು ನೆಲದವರೇ ಆದ ನಟ ರಘು ಭಟ್ ಕರುನಾಡಿನ ಹೆಮ್ಮೆಯ ಕವಿಯ ಬಯೋಪಿಕ್ ನಿರ್ಮಿಸಲು ಮುಂದಾಗಿದ್ದಾರೆ. ಈಗಾಗಲೇ ಈ ಚಿತ್ರದ ಪ್ರೀ ಪ್ರೊಡಕ್ಷನ್‌ ಕೆಲಸವೂ ನಡೆಯುತ್ತಿದೆ.

ಕೋವಿಡ್‌–19 ಕಾಣಿಸಿಕೊಳ್ಳದಿದ್ದರೆ ಗೋವಿಂದ ಪೈ ಅವರ ಜನ್ಮದಿನವಾದ ಮಾರ್ಚ್ 23ರಂದೇ ಈ ಚಿತ್ರ ಸೆಟ್ಟೇರಬೇಕಿತ್ತು. ಕೋವಿಡ್‌–19 ನಿಯಂತ್ರಣಕ್ಕೆ ಬಂದ ಬಳಿಕ ಮುಹೂರ್ತ ನೆರವೇರಿಸಿ, ಶೂಟಿಂಗ್‌ ಆರಂಭಿಸಲು ಚಿತ್ರತಂಡ ನಿರ್ಧರಿಸಿದೆ.

ADVERTISEMENT

ಪತ್ರಕರ್ತ ಗಣೇಶ್ ಕಾಸರಗೋಡು ಇದರ ಕಥೆ ಮತ್ತು ಚಿತ್ರಕಥೆಯ ಜವಾಬ್ದಾರಿ ಹೊತ್ತಿದ್ದಾರೆ. ರಘು ಭಟ್ ಅವರು ತಮ್ಮ ಲಕ್ಷ್ಮಿ ಗಣೇಶ್ ಪ್ರೊಡಕ್ಷನ್ಸ್‌ನಡಿ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಶೀಘ್ರವೇ, ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಲಿರುವ ನಿರ್ದೇಶಕರ ಹೆಸರನ್ನು ಬಹಿರಂಗಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಗೋವಿಂದ ಪೈ ಪಾತ್ರದಲ್ಲಿ ಚಂದನವನದ ಯಾವ ನಟ ನಟಿಸಲಿದ್ದಾರೆ ಎಂಬ ಕುತೂಹಲ ಹೆಚ್ಚಿರುವುದು ಸಹಜ. ‘ಸ್ಟಾರ್‌ ನಟರೊಬ್ಬರು ಇದರಲ್ಲಿ ನಟಿಸಲಿದ್ದಾರೆ. ಆ ನಟರೊಂದಿಗೆ ಮಾತುಕತೆಯೂ ಅಂತಿಮ ಹಂತದಲ್ಲಿದೆ. ಹಲವು ಯುವ ಮತ್ತು ಹಿರಿಯ ಕಲಾವಿದರು ಈ ಬಯೋಪಿಕ್‌ನಲ್ಲಿ ನಟಿಸಲಿದ್ದಾರೆ’ ಎನ್ನುತ್ತಾರೆ ರಘು ಭಟ್.

‘ಇದು ಗೋವಿಂದ ಪೈ ಅವರ ಬಯೋಪಿಕ್ ಮಾತ್ರವಲ್ಲದೆ ಪಕ್ಕಾ ಕಮರ್ಷಿಯಲ್ ಸಿನಿಮಾವೂ ಹೌದು. ಅವರ ಜೀವನ, ನಡೆದುಬಂದ ಹಾದಿ ಮತ್ತು ಆದರ್ಶಗಳ ಬಗ್ಗೆ ಎಲ್ಲರಿಗೂ ತೋರಿಸಬೇಕು ಎಂಬುದು ನನ್ನಾಸೆ. ಹಾಗಾಗಿ, ಈ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದೇನೆ’ ಎಂಬುದು ಅವರ ವಿವರಣೆ.

ಗೋವಿಂದ ಪೈ ಕರ್ನಾಟಕ–ಕೇರಳ ಗಡಿಭಾಗದ ಮಂಜೇಶ್ವರದಲ್ಲಿ 1883ರ ಮಾರ್ಚ್ 23ರಂದು ಜನಿಸಿದರು. 1963ರ ಸೆಪ್ಟೆಂಬರ್ 6ರಂದು ಅವರು ನಿಧನರಾದರು. 1949ರಲ್ಲಿ ಅಂದಿನ ಮದ್ರಾಸ್‌ ಸರ್ಕಾರ ಗೋವಿಂದ ಪೈ ಅವರಿಗೆ ‘ರಾಷ್ಟ್ರಕವಿ’ ಎಂಬ ಬಿರುದು ನೀಡಿ ಗೌರವಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.