ಬೆಂಗಳೂರು: ಡಬ್ಲೂಡಬ್ಲೂಇ ನಲ್ಲಿ ಮಿಂಚಿದ್ದ ಹಾಗೂ ಭಾರತದ ವೃತ್ತಿಪರ ಕುಸ್ತಿಪಟು ದಿಲೀಪ್ ಸಿಂಗ್ ರಾಣಾ ಉರ್ಫ್ ದಿ ಗ್ರೇಟ್ ಖಲಿ ಕನ್ನಡ ಸಿನಿಮಾದಲ್ಲಿ ಅಭಿನಯಿಸಲು ಸಜ್ಜಾದರೇ? ಹೌದು ಹೀಗೊಂದು ಸಂಗತಿ ಹೊರಬಿದ್ದಿದೆ.
ದಾವಣಗೆರೆ ಮೂಲದ ನಿರ್ದೇಶಕ, ಗೀತ ರಚನೆಕಾರ ರಾಕಿ ಸೋಮ್ಲಿ ನಿರ್ದೇಶಿಸುತ್ತಿರುವ ಮಾಲಾಶ್ರೀ ಹಾಗೂ ಭೂಮಿ ಶೆಟ್ಟಿ ಪ್ರಮುಖ ತಾರಾಗಣದಲ್ಲಿರುವ ‘ಕೆಂಡದ ಸೆರಗು’ ಚಿತ್ರದಲ್ಲಿ ಗ್ರೇಟ್ ಖಲಿ ಅಭಿನಯಿಸಲಿದ್ದಾರೆ ಎಂದು 'ದಿ ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.
ಆದರೆ, ಈ ಸುದ್ದಿಯನ್ನು ಚಿತ್ರತಂಡ ಇನ್ನೂ ಖಚಿತಪಡಿಸಿಲ್ಲ. ರಾಖಿ ಸೊಮ್ಲಿ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಗ್ರೇಟ್ ಖಲಿ ಅವರನ್ನು ಭೇಟಿಯಾಗಿ ಮಾತನಾಡಿಸಿ ಬಂದಿರುವ ಚಿತ್ರಗಳನ್ನು ಹಂಚಿಕೊಂಡಿದ್ದು, ಹೊಸ ಸುದ್ದಿ ನೀಡುವುದಾಗಿ ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಕೆಂಡದ ಸೆರಗು ಚಿತ್ರ ಮಹಿಳಾ ಕುಸ್ತಿಪಟು ಬಗೆಗಿನ ಚಿತ್ರವಾಗಿದೆ. ಹೀಗಾಗಿ ಚಿತ್ರದಲ್ಲಿ ಕುಸ್ತಿಪಟುವಾಗಿರುವ ಗ್ರೇಟ್ ಖಲಿ ಅವರನ್ನು ಕರೆತರಲು ಒಪ್ಪಿಸಲಾಗಿದೆ. ಈ ಬಗ್ಗೆ ಗ್ರೇಟ್ ಖಲಿ ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ.
ಕೆ. ಕೊಟ್ರೇಶ್ ಗೌಡ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಕೆಂಡದ ಸೆರಗು ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದ್ದು ಸಾಕಷ್ಟು ಗಮನ ಸೆಳೆದಿದೆ. ಸಿಂಧು ಲೋಕನಾಥ್, ಟಿಕ್ಟಾಕ್ ಸ್ಟಾರ್ ಬಸು ಹಿರೇಮಠ ಸೇರಿದಂತೆ ಅನೇಕರ ತಾರಾಬಳಗ ಈ ಚಿತ್ರಕ್ಕಿದೆ.
ಟೀಸರ್ ನೋಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.