ADVERTISEMENT

Interview| ಹಂಸಲೇಖ ಮತ್ತು ನನ್ನನ್ನು ಮತ್ತೆ ಸೇರಿಸಿದ್ದಾನೆ ‘ಪಂಪ’: ಮಹೇಂದರ್

ಕೆ.ಎಂ.ಸಂತೋಷಕುಮಾರ್
Published 1 ಅಕ್ಟೋಬರ್ 2020, 19:30 IST
Last Updated 1 ಅಕ್ಟೋಬರ್ 2020, 19:30 IST
ನಿರ್ದೇಶಕ ಎಸ್‌ ಮಹೇಂದರ್‌
ನಿರ್ದೇಶಕ ಎಸ್‌ ಮಹೇಂದರ್‌    

ಕನ್ನಡದ ಅತ್ಯಂತ ಸೂಕ್ಷ್ಮಮತಿ ನಿರ್ದೇಶಕರಲ್ಲಿ ಎಸ್‌. ಮಹೇಂದರ್‌ ಕೂಡ ಒಬ್ಬರು. ಅವರ ನಿರ್ದೇಶನದ ‘ತಾಯಿ ಇಲ್ಲದ ತವರು’, ‘ಅಕ್ಕ–ತಂಗಿ’, ‘ಹೆತ್ತವರು’ ‘ಶೃಂಗಾರಕಾವ್ಯ’, ‘ಕೌರವ’, ‘ಕರ್ಪೂರದ ಗೊಂಬೆ’, ‘ಸ್ನೇಹಲೋಕ’, ‘ನಿನಗಾಗಿ’, ‘ಅಸುರ’, ‘ವಾಲಿ’, ‘ತಂದೆಗೆ ತಕ್ಕಮಗ’, ‘ಗೌಡ್ರು’ನಂತಹಸಿನಿಮಾಗಳನ್ನು ಕನ್ನಡದ ಸಿನಿಪ್ರಿಯರು ಎಂದಿಗೂ ಮರೆಯಲಾರರು. ಮೂರು ದಶಕಗಳಲ್ಲಿ ಅವರು 35 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.2017ರಲ್ಲಿ ‘ಒನ್ಸ್‌ ಮೋರ್‌ ಕೌರವ’ ಸಿನಿಮಾ ನಿರ್ದೇಶಿಸಿದ ನಂತರ ಅವರು ಬಿಡುವು ಪಡೆದಿದ್ದರು.ಸಂಗೀತ ನಿರ್ದೇಶಕ ಹಂಸಲೇಖ ಮತ್ತು ಚಿತ್ರನಿರ್ದೇಶಕ ಎಸ್‌. ಮಹೇಂದರ್‌ ನಿರ್ದೇಶನದಲ್ಲಿ ಮೂಡಿಬಂದ ಹಲವು ಚಿತ್ರಗಳು ಸಂಗೀತಮಯ ಚಿತ್ರಗಳೇ ಆಗಿವೆ. ಈ ಜೋಡಿ 16 ವರ್ಷಗಳ ನಂತರ ಮತ್ತೆ ಜತೆಯಾಗಿದೆ. ‘ಪಂಪ’ ಸಿನಿಮಾಕ್ಕೆ ಇಬ್ಬರೂ ಜತೆಯಾಗಿ ಕೆಲಸ ಮಾಡಿದ್ದಾರೆ.

ಎರಡು ದಶಕಗಳಿಂದ ಮೇಕಪ್‌ ಹಚ್ಚದೇ ನಟನೆಯಿಂದ ದೂರವಿದ್ದಮಹೇಂದರ್‌ ಈಗ ಮತ್ತೆ ನಟನಾಗಿ ಬಣ್ಣ ಹಚ್ಚಿದ್ದಾರೆ.ಗಡ್ಡ ವಿಜಿ ನಿರ್ದೇಶನದ ‘ಶಬ್ದ’ ಚಿತ್ರದಲ್ಲಿ ಲೀಡ್‌ ರೋಲ್‌ನಲ್ಲಿ ನಟಿಸಿದ್ದಾರೆ. ಒಂದು ಕಾಲಕ್ಕೆ ಬಿಡುವಿಲ್ಲದ ನಿರ್ದೇಶಕ ಎನಿಸಿಕೊಂಡಿದ್ದ ಅವರು ವರ್ಷಕ್ಕೆ ನಾಲ್ಕು, ಐದು ಸಿನಿಮಾಗಳನ್ನು ನಿರ್ದೇಶಿಸಿದ ಹೆಗ್ಗಳಿಕೆಯೂ ಅವರಿಗಿದೆ. ಈಗಲೂ ಇವರ ಕೈಯಲ್ಲಿನಾಲ್ಕೈದು ಚಿತ್ರಗಳಿವೆ.ಈ ಚಿತ್ರಗಳ ಕುರಿತು ಹಲವು ಮಾಹಿತಿಗಳನ್ನು ಮಹೇಂದರ್‌ ‘ಪ್ರಜಾಪ್ಲಸ್‌’ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

lಬಿಡುವಿನ ನಂತರ ನಿರ್ದೇಶನಕ್ಕೆ ಮರಳಿದ ಬಗ್ಗೆ ಹೇಳಿ...

ADVERTISEMENT

ಪ್ರಾರಂಭದ ದಿನಗಳಲ್ಲಿತುಂಬಾ ಸಿನಿಮಾ ಮಾಡಬೇಕೆಂಬ ಹಸಿವು, ಅಸ್ತಿತ್ವ ಮತ್ತು ಬದುಕಿನಪ್ರಶ್ನೆ ಇತ್ತು. ಚಲಾವಣೆಯಲ್ಲಿರಬೇಕೆಂಬ ಕಾರಣಕ್ಕಾದರೂ ಸಿನಿಮಾ ಮಾಡಲೇಬೇಕಿತ್ತು. ಹಾಗಂತ ನನಗೆ ಬಂದ ಸಿನಿಮಾಗಳನ್ನೆಲ್ಲ ಒಪ್ಪಿಕೊಂಡಿದ್ದರೆ ನನ್ನ ಸಿನಿಮಾಗಳ ಸಂಖ್ಯೆಯೂ ನೂರು ದಾಟಿರುತ್ತಿದ್ದವು. ನಾನು ತುಂಬಾ ಚ್ಯೂಸಿ. ಒಳ್ಳೆಯ ಸಬ್ಜೆಕ್ಟ್‌ಗಾಗಿ ಕಾಯುವೆ. ಈಗ ಒಳ್ಳೆಯ ಕಥಾವಸ್ತುವಿನೊಂದಿಗೆ ನಿರ್ದೇಶನಕ್ಕೆ ಮರಳಿದ್ದೇನೆ.

lಪಂಪ ಎಂದಾಕ್ಷಣ ಆದಿಕವಿಯೇ ನೆನಪಾಗುತ್ತಾರಲ್ಲವೇ?

ಆದಿಕವಿ ಪಂಪನಿಗೂ ನಮ್ಮ ಸಿನಿಮಾದ ಪಂಪನಿಗೂ ಯಾವುದೇ ಸಂಬಂಧವಿಲ್ಲ. ಆದರೆ, ಈ ಸಿನಿಮಾ ಕಥೆಯ ಆತ್ಮ ಕನ್ನಡದ್ದೇ ಆಗಿದೆ. ಆದಿಕವಿ ಪಂಪನ ಮೇಲೆ ತುಂಬಾ ಅಭಿಮಾನ ಇಟ್ಟುಕೊಂಡಿರುವ ಪ್ರೊಫೆಸರ್ ಈಪಂಪ, ಅಂದರೆ ಪಂಚಳ್ಳಿ ಪರಶಿವಮೂರ್ತಿ ಒಬ್ಬ ಕನ್ನಡಪರ ಹೋರಾಟಗಾರ. ಆತನ ಜೀವನದಲ್ಲಿ ನಡೆಯುವ ಸಾಮಾನ್ಯ ಘಟನಾವಳಿಗಳೇ ಈ ಸಿನಿಮಾದ ಕಥಾಹಂದರ. ಒಬ್ಬ ಸಾಹಿತಿಯ ಜೀವನಚರಿತ್ರೆ ಎನ್ನಬಹುದು. ‘ಪಂಪ’ ಸಿನಿಮಾ ನಿರ್ದೇಶನ ನನ್ನ ಪಾಲಿಗೆ ದೊರೆತಿದ್ದೇ ನನ್ನ ಅದೃಷ್ಟ.

lಇದು ಎಂತಹ ಜಾನರ್‌ನ ಸಿನಿಮಾ

ನಾನು ಈವರೆಗೆ ಮುಟ್ಟದೇ ಇದ್ದ ಜಾನರ್‌ ಇದು. ‘ಪೊಯೆಟಿಕ್‌ ಥ್ರಿಲ್ಲರ್’ ಜಾನರ್‌‌‌ ಎನ್ನಬಹುದು. ಪಕ್ಕಾ ಕಮರ್ಶಿಯಲ್‌ ಸಿನಿಮಾ ಇದು.ಇದರಲ್ಲಿ ಮೂರು ಆಯಾಮಗಳ ಮೂರು ವಿಭಿನ್ನ ಪ್ರೇಮಕಥೆಗಳಿವೆ. ಹಾಗೆಯೇ ಇಡೀ ಚಿತ್ರತಂಡವೇ ಇದರಲ್ಲಿ ನಾಯಕ ಮತ್ತು ನಾಯಕಿಯ ಪಾತ್ರವಹಿಸುತ್ತದೆ. ಎಲ್ಲ ಪಾತ್ರಗಳಿಗೂ ಸ್ಕೋಪ್‌ ಇದೆ.ಪ್ರೊಫೆಸರ್ ಪಂಪನ ಪಾತ್ರದಲ್ಲಿ ಹಿರಿಯ ರಂಗಭೂಮಿ ಕಲಾವಿದ ಕೀರ್ತಿ ಭಾನು ಅದ್ಭುತವಾಗಿ ನಟಿಸಿದ್ದಾರೆ. ಶೃಂಗೇರಿ ಸಂಗೀತಾ, ರಾಘವ್ ನಾಯಕ್, ಅರವಿಂದ್, ಆದಿತ್ಯ ಶೆಟ್ಟಿ, ಭಾವನಾ ಭಟ್, ರೇಣುಕಾ, ರವಿ ಭಟ್, ಶ್ರೀನಿವಾಸಪ್ರಭು, ಪೃಥ್ವಿರಾಜ್ ಮತ್ತು ಚಿಕ್ಕಹೆಜ್ಜಾಜಿ ಮಹದೇವ್ ಉಳಿದ ಪಾತ್ರಗಳಿಗೆ ಜೀವ ತುಂಬಿದ್ದಾರೆ.

lದೀರ್ಘ ಸಮಯದ ನಂತರ ಹಂಸಲೇಖ ಮತ್ತು ನೀವು ಜತೆಯಾಗಿದ್ದೀರಿ...

ಹಂಸಲೇಖ ಮತ್ತು ನಾನು ಒಳ್ಳೆಯ ಗೆಳೆಯರು. ‘ಶೃಂಗಾರಕಾವ್ಯ’ ಚಿತ್ರದಿಂದಲೂ ನಮ್ಮ ಗೆಳೆತನ ಅಷ್ಟೇ ಗಾಢವಾಗಿದೆ. ಈವರೆಗೆ ನಮ್ಮ ಕಾಂಬಿನೇಷನ್‌ನಲ್ಲಿ 25 ಚಿತ್ರಗಳು ಬಂದಿವೆ. ‘ಕರ್ಪೂರದ ಗೊಂಬೆ’ ಮತ್ತು ‘ಕೌರವ’ ಚಿತ್ರಗಳು ನೀಡಿದ ಖುಷಿ ಮತ್ತು ಯಶಸ್ಸನ್ನು ಎಂದಿಗೂ ಮರೆಯಲಾಗದು. 2004ರಲ್ಲಿ ತೆರೆಕಂಡ ‘ಗೌಡ್ರು’ ಸಿನಿಮಾ ನಂತರಇಬ್ಬರೂ ಜತೆಯಾಗಿ ಕೆಲಸ ಮಾಡಿರಲಿಲ್ಲ. ವಿ.ಲಕ್ಷ್ಮಿಕಾಂತ್‌ ಅವರಿಂದ‘ಪಂಪ’ ಚಿತ್ರದಲ್ಲಿ ಮತ್ತೆ ಹಂಸಲೇಖ ಜತೆಗೆ ಕೆಲಸ ಮಾಡುವ ಯೋಗ ಬಂದಿದೆ.

lಮತ್ತೆ ನಟನಾಗಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಒಂದಿಷ್ಟು ಹೇಳಿ...

‘ಗಟ್ಟಿಮೇಳ’ ಚಿತ್ರದ ನಂತರ ನಟನೆ ಬಿಟ್ಟುಬಿಟ್ಟಿದ್ದೆ. ಗಡ್ಡ ವಿಜಿ ನಿರ್ದೇಶನದ ಥ್ರಿಲ್ಲರ್‌ ಕಥೆಯ ‘ಶಬ್ದ’ ಚಿತ್ರಕ್ಕೆ ಮತ್ತೆ ಬಣ್ಣ ಹಚ್ಚಿದ್ದೇನೆ.ಮತ್ತೊಂದು ಪ್ರಮುಖ ಪಾತ್ರದಲ್ಲಿ ಅತುಲ್‌ ಕುಲಕರ್ಣಿ ನಟಿಸಿದ್ದಾರೆ. ಇದೊಂದು ಥ್ರಿಲ್ಲರ್‌ ಕಥೆಯ ಸಿನಿಮಾ.

lಮುಂದಿನ ಸಿನಿಮಾಗಳು ಯಾವುವು?

ಶ್ರೀನಗರ ಕಿಟ್ಟಿ ಮತ್ತು ಕೃತಿಕರಬಂಧ ನಟನೆಯ ‘ಪಾಪು’ ಸಿನಿಮಾ ಪೂರ್ಣಗೊಳಿಸಿದ್ದೇನೆ. ‘ಮನಸಿಗೆ ಮುತ್ತಿಟ್ಟಳು’ ಮತ್ತು ‘ರಾಜವಂಶ’ ಚಿತ್ರಗಳು ಸೆಟ್ಟೇರುವ ಹಂತದಲ್ಲಿವೆ. ಇದರ ನಡುವೆ ಮತ್ತೆರಡು ಹೊಸ ಪ್ರಾಜೆಕ್ಟ್‌ಗಳು ಬಂದಿದ್ದು, ಮಾತುಕತೆ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.