ADVERTISEMENT

ರಿಷಬ್‌ಗೆ ಹ್ಯಾಟ್ಸ್ ಆಫ್, ಅದ್ಭುತ ಅನುಭವ: ಕಾಂತಾರ ಮೆಚ್ಚಿದ ವಿವೇಕ್ ಅಗ್ನಿಹೋತ್ರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಅಕ್ಟೋಬರ್ 2022, 6:27 IST
Last Updated 23 ಅಕ್ಟೋಬರ್ 2022, 6:27 IST
ರಿಷಬ್ ಶೆಟ್ಟಿ ಮತ್ತು ವಿವೇಕ್‌ ಅಗ್ನಿಹೋತ್ರಿ
ರಿಷಬ್ ಶೆಟ್ಟಿ ಮತ್ತು ವಿವೇಕ್‌ ಅಗ್ನಿಹೋತ್ರಿ   

ಬೆಂಗಳೂರು: ನಟ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ’ ಸಿನಿಮಾಕ್ಕೆ ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕಾಂತಾರ ಸಿನಿಮಾ ನೂರಾರು ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಪರ ಭಾಷಾ ನಟ –ನಟಿಯರು ಸೇರಿದಂತೆ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.

ಇದೀಗ ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಅವರು ‘ಕಾಂತಾರ’ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

‘ನಾನು ‘ಕಾಂತಾರ’ ಚಿತ್ರವನ್ನು ವೀಕ್ಷಿಸಿ ಚಿತ್ರಮಂದಿರದಿಂದ ಈಗಷ್ಟೇ ಹೊರಬಂದಿದ್ದೇನೆ. ನಾನು ನಿಮ್ಮೊಂದಿಗೆ ಒಂದು ವಿಶಿಷ್ಟ ಅನುಭವ ಅನುಭವವನ್ನು ಹಂಚಿಕೊಳ್ಳಲೇಬೇಕು.. ವಾಹ್... ಎಂತಹ ಅದ್ಭುತ ಅನುಭವ, ನೀವು ಅಂತಹ ಚಿತ್ರವನ್ನು ನೋಡಿರಲು ಸಾಧ್ಯವಿಲ್ಲ. ನಾನೂ ಕೂಡ ಅಂತಹ ಚಿತ್ರವನ್ನು ಈವರೆಗೆ ನೋಡಿರಲಿಲ್ಲ. ರಿಷಬ್ ಶೆಟ್ಟಿಗೆ ಹ್ಯಾಟ್ಸ್ ಆಫ್’ ಎಂದು ಬರೆದುಕೊಂಡಿದ್ದಾರೆ.

‘ರಿಷಬ್, ನಿರ್ದೇಶಕರಾಗಿ ನೀವು ಉತ್ತಮ ಕೆಲಸ ಮಾಡಿದ್ದೀರಿ. ನನಗಾದ ಅನುಭವವನ್ನು ಹಂಚಿಕೊಳ್ಳದೆ ಇರಲು ಸಾಧ್ಯವಾಗುತ್ತಿಲ್ಲ. ‘ಕಾಂತಾರ’ದಲ್ಲಿ ಜಾನಪದ ಕಲೆಯ ಬಗ್ಗೆ ಬೆಳಕು ಚೆಲ್ಲಿದೆ. ಇದು ಒಂದು ರೀತಿಯ ಕಾದಂಬರಿ ಅನುಭವ. ವಿಶೇಷವಾಗಿ ಕ್ಲೈಮ್ಯಾಕ್ಸ್ ಅದ್ಭುತವಾಗಿದೆ. ಇದು ರಿಷಬ್ ಶೆಟ್ಟಿ ಅವರ ‘ಮಾಸ್ಟರ್‌ ಪೀಸ್’. ನಾನು ನೋಡಿದ ಅತ್ಯುತ್ತಮ ಚಲನಚಿತ್ರಗಳಲ್ಲಿ ಕಾಂತಾರವೂ ಒಂದು’ ಎಂದು ಅಗ್ನಿಹೋತ್ರಿ ಹೇಳಿಕೊಂಡಿದ್ದಾರೆ.

ಕಾಂತಾರ ಚಿತ್ರದ ಬಗ್ಗೆ ಒಂದೇ ಪದದಲ್ಲಿ ಹೇಳುವುದಾದರೆ ‘ಇದು ಕೇವಲ ವಾಹ್! ಅದ್ಭುತ ಅನುಭವ’ ಎಂದಷ್ಟೇ ಹೇಳಬಹುದು. ಸಾಧ್ಯವಾದಷ್ಟು ಬೇಗ ಸಿನಿಮಾ ವೀಕ್ಷಿಸಿ’ ಎಂದು ಅಗ್ನಿಹೋತ್ರಿ ಕರೆ ನೀಡಿದ್ದಾರೆ.

‘ಕಾಂತಾರ’, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷದ ಕಥೆಯಾಗಿದ್ದು, ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರಿಷಬ್‌ ಶೆಟ್ಟಿ ಜೊತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಹೊಂಬಾಳೆ ಫಿಲಂಸ್‌ ಚಿತ್ರವನ್ನು ನಿರ್ಮಿಸಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ.

‘ಕಾಂತಾರ’ ಸಿನಿಮಾ ಈವರೆಗೆ ₹170 ಕೋಟಿ ಗಳಿಕೆ ಕಂಡಿದೆ ಎಂದು ವರದಿ ಆಗಿದೆ. ಈ ಮೂಲಕ ಕನ್ನಡದ ಹಲವು ಸಿನಿಮಾಗಳು ಮಾಡಿದ್ದ ದಾಖಲೆಗಳನ್ನು ಈ ಚಿತ್ರ ಮುರಿದಿದೆ. ಈ ಮೂಲಕ ಈ ವರ್ಷ ತೆರೆಗೆ ಬಂದ ಕನ್ನಡದ ಚಿತ್ರಗಳ ಪೈಕಿ ಅತಿ ಹೆಚ್ಚು ಗಳಿಕೆ ಮಾಡಿದ ಎರಡನೇ ಚಿತ್ರ ಇದಾಗಿದೆ. ಮೊದಲ ಸ್ಥಾನದಲ್ಲಿ ‘ಕೆಜಿಎಫ್ 2’ ಇದೆ.

ಕಳೆದ ಮಾರ್ಚ್‌ 11ರಂದು ಬಿಡುಗಡೆಯಾಗಿದ್ದ ವಿವೇಕ್‌ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್‌ ಫೈಲ್ಸ್‌’ ಚಿತ್ರ ಚರ್ಚೆಗೆ ಗ್ರಾಸವಾಗಿತ್ತು.

ಕಾಶ್ಮೀರ ಪಂಡಿತರ ಮೇಲಾದ ದೌರ್ಜನ್ಯ, ನಿರಾಶ್ರಿತರ ಹತ್ಯೆ ಕುರಿತ ಈ ಚಿತ್ರವು ಬಿಡುಗಡೆಯಾದ ನಂತರ ದೇಶದಾದ್ಯಂತ ಸಂಚಲನ ಸೃಷ್ಟಿಸಿತ್ತು. ಹಲವು ರಾಜ್ಯಗಳು ಚಿತ್ರಕ್ಕೆ ತೆರಿಗೆ ವಿನಾಯಿತಿಯನ್ನೂ ನೀಡಿದ್ದವು. ರಾಜಕೀಯ ಕೆಸರೆರಚಾಟಕ್ಕೂ ಈ ಚಿತ್ರವು ವೇದಿಕೆ ಮಾಡಿತ್ತು. ಇದೆಲ್ಲದರ ನಡುವೆ ಬಾಕ್ಸ್‌ ಆಫೀಸ್‌ನಲ್ಲೂ ಈ ಚಿತ್ರ ಸದ್ದು ಮಾಡಿತ್ತು.

ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ, ಪ್ರಕಾಶ್‌ ಬೆಳವಾಡಿ ಮತ್ತು ದರ್ಶನ್ ಕುಮಾರ್ ಮುಂತಾದ ದಿಗ್ಗಜರೇ ನಟಿಸಿದ್ದ ಈ ಸಿನಿಮಾವು 1991ರಲ್ಲಿ ಕಾಶ್ಮೀರದಲ್ಲಿ ನಡೆದ ಪಂಡಿತರ ಹತ್ಯೆ ಹಾಗೂ ವಲಸೆಯನ್ನು ಕಟ್ಟಿಕೊಟ್ಟಿತ್ತು.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.