ADVERTISEMENT

ವೃತ್ತಿ ಜೀವನದ ಅತ್ಯುತ್ತಮ ಸಮಯವಿದು: ನೀನಾಸಂ ಸತೀಶ್

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 20:00 IST
Last Updated 22 ಅಕ್ಟೋಬರ್ 2020, 20:00 IST
ನೀನಾಸಂ ಸತೀಶ್‌
ನೀನಾಸಂ ಸತೀಶ್‌   

ಸಹಜ ನಟನೆಯಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ ‘ಅಭಿನಯ ಚತುರ’ ನೀನಾಸಂ ಸತೀಶ್ ಸ್ಯಾಂಡಲ್‌ವುಡ್‌ನಲ್ಲಿ ಬೇಡಿಕೆಯಲ್ಲಿರುವ ನಟ. ಕೋವಿಡ್‌ ಲಾಕ್‌ಡೌನ್‌ ತೆರೆವಾಗುತ್ತಿದ್ದಂತೆ ಇವರ ನಟನೆಯ ಮೂರು ಚಿತ್ರಗಳು ಒಟ್ಟೊಟ್ಟಿಗೆ ಆರಂಭವಾಗಿವೆ. ಕ್ಷಣವೂ ಬಿಡುವಿಲ್ಲದಂತೆ ಅವರು ಈಗ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಇದು ಸದ್ಯದ ಮಟ್ಟಿಗೆ ದಾಖಲೆ ಕೂಡ ಹೌದು. ತಮ್ಮ ಈ ಸಿನಿಪಯಣದ ಬಗ್ಗೆ ಹಲವು ಮಾಹಿತಿಗಳನ್ನು ಅವರು ‘ಪ್ರಜಾಪ್ಲಸ್‌’ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

* ಲಾಕ್‌ಡೌನ್‌ ಅವಧಿಯನ್ನು ವೃತ್ತಿ ಬದುಕಿಗೆ ಯಾವ ರೀತಿ ಬಳಸಿಕೊಂಡ್ರಿ?

ಕುಟುಂಬದವರೊಂದಿಗೆಹೆಚ್ಚು ಸಮಯ ಕಳೆಯಲು ಸಾಧ್ಯವಾಯಿತು. ಒಳ್ಳೊಳ್ಳೆಯ ಸಿನಿಮಾಗಳು ಮತ್ತು ವೆಬ್‌ ಸರಣಿಗಳನ್ನು ನೋಡಲು ಅವಕಾಶವಾಯಿತು. ಒಂದಿಷ್ಟು ವರ್ಕೌಟ್‌, ಜತೆಗೆ ವಿಶ್ರಾಂತಿಗೆ ಸದುಪಯೋಗಪಡಿಸಿಕೊಂಡೆ.

ADVERTISEMENT

* ಮೂರು ಸಿನಿಮಾಗಳು ಒಟ್ಟಿಗೆ ಶುರುವಾಗಿರುವ ಬಗ್ಗೆ ಹೇಳಿ...

ಮಂಗಳವಾರ (ಅ.21) ಮೂರು ಸಿನಿಮಾಗಳ ಚಿತ್ರೀಕರಣ ಒಟ್ಟಿಗೆ ಶುರುವಾಯಿತು. ‘ಪೆಟ್ರೊಮ್ಯಾಕ್ಸ್‌’ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ನಡೆದರೆ, ‘ದಸರಾ’ ಮತ್ತು ‘ಮ್ಯಾಟ್ನಿ’ ಚಿತ್ರಗಳ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಿತು.

* ಈ ಚಿತ್ರಗಳ ಕಥೆಯ ಎಳೆ ಏನಿದೆ? ನಿಮ್ಮ ಪಾತ್ರಗಳು ಹೇಗೆ ಭಿನ್ನವಾಗಿವೆ?

‘ದಸರಾ’ ಚಿತ್ರ ಥ್ರಿಲ್ಲರ್‌ ಕಥೆಯದ್ದು, ಇದರಲ್ಲಿ ನನ್ನದು ಪತ್ತೇದಾರನ ಪಾತ್ರ. ಕಾರವಾರ ಮತ್ತು ಬೆಂಗಳೂರಿನಲ್ಲಿ ನಡೆಯುವ ಕಥೆ ಇದರಲ್ಲಿದೆ. ‘ಮ್ಯಾಟ್ನಿ’ ಚಿತ್ರ ರೊಮ್ಯಾಂಟಿಕ್‌ ಥ್ರಿಲ್ಲರ್‌ ಕಥೆಯದ್ದಾಗಿದೆ. ಇದರಲ್ಲಿ ಎರಡು ಶೇಡ್‌ಗಳ ವಿಶೇಷ ಪಾತ್ರಗಳನ್ನು ನಿರ್ವಹಿಸುತ್ತಿರುವೆ. ‘ಪೆಟ್ರೊಮ್ಯಾಕ್ಸ್‌’ನಲ್ಲಿ ಅನಾಥ ಹುಡುಗ ಮತ್ತು ಡೆಲಿವರಿ ಬಾಯ್‌ ಪಾತ್ರ ನಿಭಾಯಿಸುತ್ತಿರುವೆ.

* ನಿಮ್ಮ ಜತೆಗೆ ತೆರೆ ಹಂಚಿಕೊಳ್ಳುತ್ತಿರುವ ನಟಿಯರ ಬಗ್ಗೆ ಒಂದಿಷ್ಟು ಹೇಳಿ....

‘ಪೆಟ್ರೊಮ್ಯಾಕ್ಸ್‌’ನಲ್ಲಿ ನನ್ನ ಜತೆ ಹರಿಪ್ರಿಯಾ ತೆರೆ ಹಂಚಿಕೊಳ್ಳುತ್ತಿದ್ದಾರೆ. ಅವರ ಜತೆ ನಟಿಸುವ ಆಸೆ ಇತ್ತು. ಅದು ಈಗ ನೆರವೇರುತ್ತಿದೆ. ‘ಅಯೋಗ್ಯ’ ಚಿತ್ರವಾದ ನಂತರ ರಚಿತಾ ರಾಮ್‌ ಮತ್ತು ನಾನು ‘ಮ್ಯಾಟ್ನಿ’ಯಲ್ಲಿ ಒಟ್ಟಾಗಿದ್ದೇವೆ. ನಮ್ಮದು ಹಿಟ್‌ ಚಿತ್ರ ನೀಡಿದ ಜೋಡಿ. ದಸರಾ ಸಿನಿಮಾ ಆಗುವುದಕ್ಕೆ ಮೂಲ ಕಾರಣ ಶರ್ಮಿಳಾ ಮಾಂಡ್ರೆ. ಅವರೇ ಇದಕ್ಕೆ ನಿರ್ಮಾಪಕಿ.

* ನಿಮ್ಮ ಗೋಧ್ರಾ ಚಿತ್ರದ ಶೀರ್ಷಿಕೆ ಬದಲಾಗುತ್ತಿರುವ ಬಗ್ಗೆ ಏನು ಹೇಳಲು ಬಯಸುವಿರಿ?

ಸೆನ್ಸಾರ್‌ ಮಂಡಳಿಯವರು ಈ ಟೈಟಲ್‌ ಬೇಡ ಎಂದರು. ಯಾಕೆ ಆ ರೀತಿ ಹೇಳಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಗೋಧ್ರಾ ಎನ್ನುವುದು ಒಂದು ಊರಿನ ಹೆಸರು. ಗೋಧ್ರಾದಲ್ಲಿ ನಡೆದ ಹತ್ಯಾಕಾಂಡಕ್ಕೂ ಈ ಸಿನಿಮಾಕ್ಕೂ ಯಾವುದೇ ಸಂಬಂಧವಿಲ್ಲ. ಸಮಾಜದಲ್ಲಿ ನಡೆಯುವಂತಹ ಬಡತನ, ಹಸಿವು, ಅವಮಾನ ಇಂತಹ ವಿಷಯವಿಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ಆದಷ್ಟು ಶೀಘ್ರ ಹೊಸ ಟೈಟಲ್‌ ಪ್ರಕಟಿಸಲಿದ್ದೇವೆ.

* ನಿಮ್ಮ ನಿರ್ದೇಶನದ ಕನಸು ಯಾವ ಹಂತದಲ್ಲಿದೆ?

ನಿರ್ದೇಶನದ ಕನಸು ಹಾಗೆಯೇ ಇದೆ. ನಾನು ನಿರ್ದೇಶಿಸಲಿರುವ ‘ಮೈನೇಮ್‌ ಈಸ್‌ ಸಿದ್ದೇಗೌಡ’ ಸಿನಿಮಾ
ಶೇ 50 ಭಾಗ ಅಮೆರಿಕದಲ್ಲಿ ಚಿತ್ರೀಕರಿಸಬೇಕು. ಹಾಗಾಗಿ ಒಂದು ವರ್ಷ ಚಿತ್ರೀಕರಣ ಮುಂದೂಡಿದ್ದೇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.