ADVERTISEMENT

ಜೀವ ಬೆದರಿಕೆ ಪತ್ರ: ಸಲ್ಮಾನ್ ಖಾನ್ ನಿವಾಸಕ್ಕೆ ಭದ್ರತೆ ಹೆಚ್ಚಿಸಿದ ಮುಂಬೈ ಪೊಲೀಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಜೂನ್ 2022, 11:55 IST
Last Updated 6 ಜೂನ್ 2022, 11:55 IST
ಸಲ್ಮಾನ್ ಖಾನ್
ಸಲ್ಮಾನ್ ಖಾನ್   

ಮುಂಬೈ: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಮತ್ತು ಅವರ ತಂದೆ ಸಲೀಂ ಖಾನ್‌ ಅವರಿಗೆ ಜೀವ ಬೆದರಿಕೆ ಪತ್ರ ಬಂದಿರುವ ಹಿನ್ನೆಲೆಯಲ್ಲಿ ಬಾಂದ್ರಾದಲ್ಲಿರುವ ಅವರ ನಿವಾಸದ ಸುತ್ತ ಭದ್ರತೆ ಹೆಚ್ಚಿಸಲಾಗಿದೆ. ಮುಂಬೈ ಪೊಲೀಸರ ತಂಡ ಸಲ್ಮಾನ್‌ ಅವರ ನಿವಾಸಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚಿತ್ರ ಬರಹಗಾರ ಸಲೀಂ ಖಾನ್‌ ಅವರು ಭಾನುವಾರ ಬೆಳಿಗ್ಗೆ ವಾಯು ವಿಹಾರ ಮುಗಿಸಿ ಕುಳಿತಿದ್ದ ಸ್ಥಳದಲ್ಲಿ ಅನಾಮಿಕ ವ್ಯಕ್ತಿಯೊಬ್ಬ ಇಟ್ಟಿದ್ದ ಪತ್ರವೊಂದು ಪತ್ತೆಯಾಗಿತ್ತು. ಆ ಪತ್ರದಲ್ಲಿ ಸಲೀಂ ಮತ್ತು ಅವರ ಮಗ, ನಟ ಸಲ್ಮಾನ್‌ ಖಾನ್‌ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು.

ತಮ್ಮ ಭದ್ರತಾ ಸಿಬ್ಬಂದಿಯ ಸಹಕಾರದೊಂದಿಗೆ ಸಲೀಂ ಅವರು ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದರು. ದೂರಿನನ್ವಯ ಬಾಂದ್ರಾ ಪೊಲೀಸ್‌ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 506–IIರ (ಜೀವ ಬೆದರಿಕೆ) ಅಡಿಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ADVERTISEMENT

ಮುಂಬೈ ಪೊಲೀಸ್‌ ಅಪರಾಧ ವಿಭಾಗದ ಐವರು ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರು ಸಲ್ಮಾನ್‌ ಖಾನ್‌ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ಸ್‌ಗೆ ಭೇಟಿ ನೀಡಿ, ಸಲ್ಮಾನ್‌ ಕುಟುಂಬ ಸದಸ್ಯರೊಂದಿಗೆ ಮಾತನಾಡಿದ್ದಾರೆ. ಸುಮಾರು ಒಂದು ತಾಸು ಅಧಿಕಾರಿಗಳು ಬೆದರಿಕೆ ಪತ್ರದ ಕುರಿತು ಮಾಹಿತಿ ಪಡೆದಿದ್ದಾರೆ.

ಪತ್ರ ಸಿಕ್ಕಿರುವ ಸ್ಥಳಕ್ಕೂ ಪೊಲೀಸರು ಭೇಟಿ ನೀಡಿದ್ದು, ಸುತ್ತಮುತ್ತಲಿನ ಪ್ರದೇಶದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಈ ಮೂಲಕ ಪತ್ರ ಇಟ್ಟಿರುವ ಅನಾಮಿಕನನ್ನು ಪತ್ತೆ ಮಾಡುವ ಪ್ರಯತ್ನ ನಡೆದಿದೆ ಎಂದಿದ್ದಾರೆ.

‌ಈ ವಿಚಾರವನ್ನು ಮುಂಬೈ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. 'ಪತ್ರದ ಕುರಿತು ಹಾಗೂ ಇಡೀ ಪ್ರಕರಣದ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ...ಈವರೆಗೂ ಯಾರನ್ನೂ ಬಂಧಿಸಿಲ್ಲ. ಅಗತ್ಯವಾದರೆ ಭದ್ರತೆಯನ್ನು ಹೆಚ್ಚಿಸುತ್ತೇವೆ ' ಎಂದು ಮುಂಬೈ ಪೊಲೀಸ್‌ ಕಮಿಷನರ್‌ ಸಂಜಯ್‌ ಪಾಂಡೆ ಹೇಳಿದ್ದಾರೆ.

ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿ ಕಡೆಗೆ ಬೊಟ್ಟು...

'ನೀನೂ ಸಿಧು ಮೂಸೆವಾಲಾನ ರೀತಿ ಕೊನೆಯಾಗುತ್ತೀಯ' ಎಂದು ಅನಾಮಿಕ ಪತ್ರದಲ್ಲಿರುವುದಾಗಿ ವರದಿಯಾಗಿದೆ. ಮೂಸೆವಾಲಾ ಹತ್ಯೆಗೆ ಸಂಬಂಧಿಸಿದಂತೆ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಇದೀಗ ಸಲ್ಮಾನ್‌ ಖಾನ್ ಅವರಿಗೂ ಆತನ ಗ್ಯಾಂಗ್‌ನಿಂದಲೇ ಪತ್ರ ಬಂದಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಅನಾಮಿಕ ಪತ್ರದ ಬಗ್ಗೆಯೂ ಪೊಲೀಸರು ಬಿಷ್ಣೋಯಿಗೆ ಪ್ರಶ್ನೆ ಮಾಡಿರುವುದಾಗಿ ತಿಳಿದು ಬಂದಿದೆ.

ಕಳೆದವಾರ ಪಂಜಾಬ್‌ನ ಮಾನ್ಸಾ ಗ್ರಾಮದಲ್ಲಿ ಪಂಜಾಬಿ ಗಾಯಕ, ರಾಜಕಾರಣಿ ಸಿಧು ಮೂಸೆವಾಲಾ ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ ಆ ಕೃತ್ಯ ಎಸಗಿರುವುದಾಗಿ ಆರೋಪಿಸಲಾಗಿದೆ. ಅದೇ ಗ್ಯಾಂಗ್‌ 2018ರಲ್ಲಿ ಸಲ್ಮಾನ್‌ ಖಾನ್‌ ಅವರಿಗೆ ಜೀವ ಬೆದರಿಕೆ ಹಾಕಿತ್ತು. ಬಿಷ್ಣೋಯಿ ಸಮುದಾಯವು ಕೃಷ್ಣಮೃಗವನ್ನು ಪೂಜನೀಯವಾಗಿ ಕಾಣುತ್ತದೆ. ಕೃಷ್ಣಮೃಗ ಬೇಟೆ ಪ್ರಕರಣದ ಸಂಬಂಧ ಸಲ್ಮಾನ್‌ಗೆ ಜೋಧಪುರದಲ್ಲಿ ಕೊಲೆ ಬೆದರಿಕೆ ಹಾಕಲಾಗಿತ್ತು.

ಲಾರೆನ್ಸ್‌ ಬಿಷ್ಣೋಯಿ ಪ್ರಸ್ತುತ ದೆಹಲಿಯ ತಿಹಾರ್‌ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.