ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ದುಬೈನಲ್ಲಿ ನಡೆಯಲಿರುವ 'ದಬಾಂಗ್ ದಿ ಟೂರ್ ರಿಲೋಡೆಡ್' ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಸಿದ್ಧರಾಗಿದ್ದಾರೆ.
ಜೀವ ಬೆದರಿಕೆಯ ಸಂದೇಶಗಳ ನಡುವೆ ಭದ್ರತೆ ಹೆಚ್ಚಿಸಿಕೊಂಡಿರುವ ಸಲ್ಮಾನ್ ಖಾನ್ ಅವರು ಇದೀಗ ದುಬೈನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ನೃತ್ಯ ಸೇರಿದಂತೆ ವಿವಿಧ ಮನರಂಜನಾ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡು ಅವರು ಮಾಹಿತಿ ನೀಡಿದ್ದಾರೆ.
‘ಡಿಸೆಂಬರ್ 7ರಂದು ದುಬೈನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದೇನೆ. ಈ ವೇಳೆ ಸೋನಾಕ್ಷಿ ಸಿನ್ಹಾ, ಜಾಕ್ವೆಲಿನ್ ಫರ್ನಾಂಡೀಸ್, ದಿಶಾ ಪಟಾನಿ, ತಮನ್ನಾ ಭಾಟಿಯಾ, ಪ್ರಭುದೇವ , ಮನೀಶ್ ಪಾಲ್, ಸುನಿಲ್ ಗ್ರೋವರ್ ಸೇರಿದಂತೆ ಆಸ್ತಾ ಗಿಲ್ ಸಹ ಪ್ರದರ್ಶನ ನೀಡಲಿದ್ದಾರೆ’ ಎಂದೂ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಸದ್ಯ ಹಿಂದಿ ಬಿಗ್‌ಬಾಸ್ ರಿಯಾಲಿಟಿ ಹಾಗೂ ಸಿಕಂದರ್ ಚಿತ್ರದಲ್ಲಿ ಸಲ್ಮಾನ್ ಬ್ಯುಸಿಯಾಗಿದ್ದಾರೆ.
ಕೆಲವು ದಿನಗಳ ಹಿಂದೆ ಮುಂಬೈನ ಬಾಂದ್ರಾ ಪ್ರದೇಶದಲ್ಲಿರುವ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಎದುರು ಕಿಡಿಗೇಡಿಗಳು ನಾಲ್ಕು ಸುತ್ತು ಗುಂಡು ಹಾರಿಸಿ, ಪರಾರಿಯಾಗಿದ್ದರು. ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನಿಂದ ಸಲ್ಮಾನ್‌ಗೆ ಹಲವು ಕೊಲೆ ಬೆದರಿಕೆಗಳು ಬಂದಿದ್ದವು.
ಸಲ್ಮಾನ್‌ಗೆ ₹5 ಕೋಟಿ ನೀಡುವಂತೆ ಬೇಡಿಕೆಯಿಟ್ಟು ಜೀವ ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ಜಾರ್ಖಂಡ್ ಮೂಲದ ವ್ಯಕ್ತಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.