ADVERTISEMENT

ಈ ವಾರ ಮೂರು ಚಿತ್ರಗಳು ತೆರೆಗೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2024, 23:41 IST
Last Updated 6 ಜೂನ್ 2024, 23:41 IST
ಸಾರಿಕಾ ರಾವ್‌
ಸಾರಿಕಾ ರಾವ್‌   

ಬಿಡುಗಡೆ ಸಿದ್ಧವಿರುವ ಹಲವಾರು ಚಿತ್ರಗಳಿವೆ. ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನಕ್ಕಾಗಿ ಪೈಪೋಟಿಯೂ ಇಲ್ಲ. ಆದಾಗ್ಯೂ, ಚುನಾವಣೆ ಕಳೆದು ತಿಂಗಳಾದರೂ ಚಿತ್ರ ಬಿಡುಗಡೆಗೆ ಆಸಕ್ತಿ ತೋರುತ್ತಿಲ್ಲ... 

ಸಹಾರಾ

ಮಹಿಳಾ ಕ್ರಿಕೆಟ್ ಕುರಿತಾಗಿನ ಕಥೆ ಹೊಂದಿರುವ ಚಿತ್ರ ಇಂದು (ಜೂ.7) ತೆರೆ ಕಾಣುತ್ತಿದೆ. ನಟಿ ಸಾರಿಕಾ ರಾವ್‌ ಮುಖ್ಯಭೂಮಿಕೆಯಲ್ಲಿರುವ ಚಿತ್ರಕ್ಕೆ ಮಂಜೇಶ್‌ ಭಗವತ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ‘ಈ ಚಿತ್ರ ಮಂಡ್ಯ ಹುಡುಗಿ ಕ್ರಿಕೆಟರ್ ಆದ ಕಥೆಯನ್ನು ಹೊಂದಿದೆ. ಸಾರಿಕಾ ರಾವ್ ಪಾತ್ರಕ್ಕಾಗಿಯೇ ರಣಜಿ ಆಟಗಾರರಾದ ಕೆ.ಬಿ. ಪವನ್ ಬಳಿ ಕ್ರಿಕೆಟ್ ಆಟದ ಬಗ್ಗೆ ತರಬೇತಿ ಪಡೆದುಕೊಂಡು ಬಂದು ನಂತರ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ’ ಎಂದಿದೆ ಚಿತ್ರತಂಡ. ಮಾ ಕ್ರಿಯೆಷನ್ಸ್ ನಿರ್ಮಾಣದ ಚಿತ್ರದಲ್ಲಿ ಮಂಜುನಾಥ ಹೆಗಡೆ, ಕುರಿ ಸುನಿಲ್ ಪ್ರಕಾಶ್ ಶೆಟ್ಟಿ ಮುಂತಾದವರು ಅಭಿನಯಿಸಿದ್ದಾರೆ. ಕ್ರಿಕೆಟ್ ಆಧಾರಿಸಿದ ಈ ಚಿತ್ರಕ್ಕೆ ಕಿಚ್ಚ ಸುದೀಪ್ ನಿರೂಪಣೆ ಮಾಡಿದ್ದಾರೆ. ಆಂಥೋನಿ ರುತ್ ವಿನ್ಸೆಂಟ್ ಛಾಯಾಚಿತ್ರಗ್ರಹಣ, ಸೂರಜ್ ಜೋಯಿಸ್ ಸಂಗೀತವಿದೆ.

ADVERTISEMENT

ಅನರ್ಥ:

‘ಗುಪ್ತಗಾಮಿನಿ’, ‘ಪ್ರೀತಿ ಇಲ್ಲದ ಮೇಲೆ’ ಮುಂತಾದ ಧಾರಾವಾಹಿಗಳ ಸಂಚಿಕೆ ನಿರ್ದೇಶಕರಾಗಿದ್ದ ರಮೇಶ್ ಕೃಷ್ಣ ಆ್ಯಕ್ಷನ್‌–ಕಟ್‌ ಹೇಳಿರುವ ‘ಅನರ್ಥ’ ಈ ವಾರ ತೆರೆ ಕಾಣುತ್ತಿರುವ ಮತ್ತೊಂದು ಚಿತ್ರ. 

‘ಬಲಹೀನತೆಯಿಂದ ಕ್ರೂರತನ ಹುಟ್ಟುತ್ತದೆ’ ಎಂಬ ಅಡಿಬರಹವಿದೆ. ‘ಅವಕಾಶ್-ಆಕೃತಿ ಎರಡು ಪಾತ್ರಗಳ ಸುತ್ತ ಚಿತ್ರವು ಸಾಗುತ್ತದೆ. ಇಬ್ಬರು ಪ್ರೀತಿಸಿರುತ್ತಾರೆ. ಅಮಾವ್ಯಾಸೆಯ ದಿನ ಯಮಗಂಡ ಕಾಲದಲ್ಲಿ ಮದುವೆಯಾಗಲು ನಿರ್ಧರಿಸಿ, ಒಬ್ಬರನ್ನೊಬ್ಬರು ಅರಿತುಕೊಳ್ಳಲು ಒಂದು ಸ್ಥಳಕ್ಕೆ ಹೋಗುತ್ತಾರೆ. ಅಲ್ಲಿಗೆ ಹೋದಾಗ ಏನಾಗುತ್ತದೆ ಎಂಬುದನ್ನು ಚಿತ್ರದಲ್ಲಿ ನೋಡಬೇಕು’ ಎನ್ನುತ್ತಾರೆ ನಿರ್ದೇಶಕರು. 

ತೇಜಸ್ ಸಿನಿ ಕ್ರಿಯೇಶನ್ಸ್ ಮೂಲಕ ಶ್ರೀಧರ್‌ ಎನ್.ಸಿ.ಹೊಸಮನೆ ಬಂಡವಾಳ ಹೂಡಿದ್ದಾರೆ. ನಾಯಕ ವಿಶಾಲ್ ಮಣ್ಣೂರು ಅವರಿಗೆ ವಿಹಾನಿ ಜೋಡಿಯಾಗಿದ್ದಾರೆ. ವಿ.ನಾಗೇಂದ್ರಪ್ರಸಾದ್ ಸಾಹಿತ್ಯ–ಸಂಗೀತ, ಕುಮಾರ್‌ಗೌಡ ನಾಗವಾರ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.

ಯಂಗ್ ಮ್ಯಾನ್:

ಬಹುತೇಕ ಹೊಸಬರಿಂದಲೇ ಕೂಡಿರುವ ‘ಯಂಗ್‌ ಮ್ಯಾನ್‌’ ಚಿತ್ರ ತೆರೆ ಕಾಣುತ್ತಿದೆ. ಮುತ್ತುರಾಜ್ ಈ ಚಿತ್ರವನ್ನು ನಿರ್ದೇಶಿಸಿದ್ದು, ವಿಜಯಲಕ್ಷ್ಮಿ ರಾಮೇಗೌಡ ನಿರ್ಮಾಣ ಮಾಡಿದ್ದಾರೆ. ಸಿಂಗಲ್ ಟೇಕ್‌ನಲ್ಲಿಯೇ ಚಿತ್ರವನ್ನು ಚಿತ್ರೀಕರಣ ಮಾಡಿರುವುದಾಗಿ ತಂಡ ಹೇಳಿದೆ. ಲೋಕಿ ಸಂಗೀತ ನಿರ್ದೇಶನ ಹಾಗೂ ನಾಗರಾಜ್ ವೀನಸ್ ಮೂರ್ತಿ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ. ಸುನೀಲ್ ಗೌಡ, ರಾಶಿಕಾ ಕರಾವಳಿ, ಹರೀಶ್ ಆಚಾರ್ಯ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.