ADVERTISEMENT

‘ಪುಷ್ಪ–ದಿ ರೂಲ್‌’ ಬಿಡುಗಡೆ ಮುಂದಕ್ಕೆ; ಹೊಸ ದಿನಾಂಕ ಯಾವುದು ಗೊತ್ತೇ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಜೂನ್ 2024, 3:26 IST
Last Updated 18 ಜೂನ್ 2024, 3:26 IST
ಪುಷ್ಪ: ದಿ ರೂಲ್‌ ಸಿನಿಮಾದ ಪೋಸ್ಟರ್‌
ಪುಷ್ಪ: ದಿ ರೂಲ್‌ ಸಿನಿಮಾದ ಪೋಸ್ಟರ್‌    

ಬೆಂಗಳೂರು: ಟಾಲಿವುಡ್‌ ನಟ ಅಲ್ಲು ಅರ್ಜುನ್‌ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಪುಷ್ಪ –2’ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಡಿಸೆಂಬರ್‌ 6ರಂದು ಎಲ್ಲಾ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿರುವ ಮೈತ್ರಿ ಮೂವೀಸ್‌ ನಿರ್ಮಾಣ ಸಂಸ್ಥೆ, ‘ನಾವು ನಿಮಗೆ (ಪ್ರೇಕ್ಷಕರಿಗೆ) ಅತ್ಯುತ್ತಮವಾದದ್ದನ್ನು ನೀಡಲು ಉದ್ದೇಶಿಸಿದ್ದೇವೆ. ದೊಡ್ಡ ಪರದೆಯ ಮೇಲೆ ಸ್ಮರಣೀಯ ಅನುಭವವನ್ನು ಪಡೆಯಲು ಕಾಯುವಿಕೆ ಹೆಚ್ಚಾಗುತ್ತಿದೆ. ಪುಷ್ಪ–ದಿ ರೂಲ್‌ 2024ರ ಡಿಸೆಂಬರ್‌ 6ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ’ ಎಂದು ತಿಳಿಸಿದೆ.

ಸಿನಿಮಾ ಚಿತ್ರೀಕರಣದ ಕೆಲಸಗಳು ಹಾಗೂ ನಿರ್ಮಾಣೋತ್ತರ ಕಾರ್ಯಗಳು ಇನ್ನೂ ಬಾಕಿ ಉಳಿದಿರುವುದರಿಂದ ಬಿಡುಗಡೆ ದಿನಾಂಕವನ್ನು ಬದಲಾಯಿಸಿದ್ದೇವೆ ಎಂದು ಚಿತ್ರ ತಂಡ ವಿವರಿಸಿದೆ.

ADVERTISEMENT

ತೆಲುಗು, ಹಿಂದಿ, ಕನ್ನಡ, ತಮಿಳು, ಮಲಯಾಳಂ, ಬೆಂಗಾಲಿ ಭಾಷೆಗಳಲ್ಲಿ ‘ಪುಷ್ಪ– 2’ ಆಗಸ್ಟ್​ 15ರಂದು ಬಿಡುಗಡೆ ಆಗಲಿದೆ ಎಂದು ಈ ಹಿಂದೆ ಚಿತ್ರತಂಡ ಅಧಿಕೃತವಾಗಿ ಘೋಷಿಸಿತ್ತು.

ಟಾಲಿವುಡ್ ಸೇರಿದಂತೆ ಹಲವು ಭಾಷೆಗಳ ಪ್ರಮುಖ ಸಿನಿಮಾಗಳು ಆಗಸ್ಟ್‌ 15ರಂದು ಬಿಡುಗಡೆಯಾಗುತ್ತಿವೆ. ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಅಭಿನಯದ ‘ಖೇಲ್‌ ಖೇಲ್‌ ಮೇ’, ಶ್ರದ್ಧಾ ಕಪೂರ್ ಪ್ರಮುಖ ಪಾತ್ರದಲ್ಲಿರುವ ಅಮರ್ ಕೌಶಿಕ್ ಅವರ ಕಾಮಿಡಿ, ಹಾರರ್ ‘ಸ್ತ್ರೀ–2’ ಸಿನಿಮಾ, ನಿಖಿಲ್ ಅಡ್ವಾಣಿ ಅವರ ವೇದ ಸಿನಿಮಾ ಸೇರಿದಂತೆ ನಟ ರಾಮ್‌ ಪೋತಿನೇನಿ ಅಭಿನಯದ ‘ಡಬಲ್ ಇಸ್ಮಾರ್ಟ್’ ಸಿನಿಮಾಗಳು ಆಗಸ್ಟ್‌ 15ರಂದು ಬಿಡುಗಡೆಗೆ ಸಜ್ಜಾಗಿವೆ.

ಪುಷ್ಪ–2 ಚಿತ್ರವನ್ನು ಸುಕುಮಾರ್‌ ನಿರ್ದೇಶಿಸುತ್ತಿದ್ದು, ಮೈತ್ರಿ ಮೂವೀಸ್‌ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿದೆ. ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ, ಫಹಾದ್‌ ಫಾಸಿಲ್‌ ಸೇರಿದಂತೆ ಹಲವರು ನಟಿಸಿದ್ದಾರೆ.

ಪುಷ್ಪ-1 ಸಿನಿಮಾ 2021ರ ಡಿಸೆಂಬರ್‌ನಲ್ಲಿ ತೆರೆಕಂಡಿತ್ತು. ಈ ಸಿನಿಮಾದ ಯಶಸ್ಸಿನಿಂದಾಗಿ ನಟ ಅಲ್ಲು ಅರ್ಜುನ್‌ ಅವರ ಖ್ಯಾತಿಯೂ ಮತ್ತಷ್ಟು ಹೆಚ್ಚಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.