ಹೈದರಾಬಾದ್:ಟಾಲಿವುಡ್ ನಟ ಮಹೇಶ್ ಬಾಬು ತಂದೆ, ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಎಂದು ಖ್ಯಾತಿಯಾಗಿದ್ದ ಕೃಷ್ಣ (79) ಅವರ ಅಂತ್ಯಕ್ರಿಯೆ ಹೈದರಾಬಾದ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಬುಧವಾರ ನೆರವೇರಿತು.
ಕೃಷ್ಣ ಅವರು ವಯೋಸಹಜ ಖಾಯಿಲೆಯಿಂದ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾಗಿದ್ದರು.
ಹೈದರಾಬಾದ್‌ನ ಜೂಬ್ಲಿ ಹಿಲ್ಸ್‌ನಲ್ಲಿರುವ ಮಹಾಪ್ರಸ್ಥಾನದಲ್ಲಿ ಕೃಷ್ಣ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಜರುಗಿತು. ಈ ವೇಳೆ ಸರ್ಕಾರದ ಪರ ಶ್ರೀನಿವಾಸ್ ಯಾದವ್ ಅವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಮಹೇಶ್ ಬಾಬು ತಮ್ಮ ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು 200 ಜನರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಅಲ್ಲದೇ ವಿಡಿಯೊಗ್ರಫಿಗೆ ಮಾಧ್ಯಮಗಳು ಸೇರಿದಂತೆ ಯಾರಿಗೂ ಅವಕಾಶ ನೀಡಿರಲಿಲ್ಲ.
ಇನ್ನು ಕೃಷ್ಣ ಅವರ ನಿಧನಕ್ಕೆ ಟಾಲಿವುಡ್ ಬುಧವಾರ ಬಂದ್ ಘೋಷಿಸಿತ್ತು.
ಮಹೇಶ್ ಬಾಬು ತಾಯಿ ಇಂದಿರಾ ಅವರು ಕಳೆದ ಸೆಪ್ಟೆಂಬರ್‌ನಲ್ಲಿ ನಿಧನರಾಗಿದ್ದರು. ಮಹೇಶ್ ಸಹೋದರ ರಮೇಶ್ ಬಾಬು ಕಳೆದ ಜನವರಿಯಲ್ಲಿ ಮೃತಪಟ್ಟಿದ್ದರು. ಒಂದೇ ವರ್ಷದಲ್ಲಿ ಮಹೇಶ್ ಬಾಬು ಅವರ ಕುಟುಂಬಕ್ಕೆ ಎದುರಾದ ಅಘಾತದ ಬಗ್ಗೆ ಅಭಿಮಾನಿಗಳು ಸಂಕಟ ವ್ಯಕ್ತಪಡಿಸಿದ್ದಾರೆ.
ಕೃಷ್ಣ ಅವರು 350ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿ, ಸೂಪರ್ ಸ್ಟಾರ್ ಎಂದೇ ಜನಪ್ರಿಯತೆ ಗಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.