ಬೆಂಗಳೂರು: 'ಮೆಗಾಸ್ಟಾರ್' ಚಿರಂಜೀವಿ ನಟನೆಯ 'ಸೈರಾ ನರಸಿಂಹ ರೆಡ್ಡಿ' ಸಿನಿಮಾ ಕನ್ನಡ ಸೇರಿದಂತೆ ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳ ಭಾಷೆಯಲ್ಲಿ ಅಕ್ಟೋಬರ್ 2ರಂದು ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.
ಬಿಗ್ ಬಜೆಟ್ ನ ಈ ಚಿತ್ರದಲ್ಲಿ ಚಿರಂಜೀವಿ ಅವರು ಸ್ವಾತಂತ್ರ್ಯ ಸೇನಾನಿ ಸೈರಾ ನರಸಿಂಹರೆಡ್ಡಿ ಪಾತ್ರದಲ್ಲಿ ನಟಿಸಿದ್ದಾರೆ. ಅಮಿತಾಭ್ ಬಚ್ಚನ್, ಸುದೀಪ್, ವಿಜಯ್ ಸೇತುಪತಿ, ನಯನತಾರಾ, ತಮನ್ನಾ ಭಾಟಿಯಾ, ಜಗಪತಿ ಬಾಬು ನಟಿಸಿದ್ದಾರೆ.
ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಭಾನುವಾರ ರಾತ್ರಿ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಚಿತ್ರತಂಡ ಆಗಮಿಸಿತ್ತು.
ನಟ ಚಿರಂಜೀವಿ ನಾನು ಬಹಳ ಚೆನ್ನಾಗಿದ್ದೇನೆ. ನೀವೆಲ್ಲಾ ಚೆನ್ನಾಗಿದ್ದೀರಾ ಎಂದು ಮಾತು ಆರಂಭಿಸಿದರು.
ವೃತ್ತಿ ಬದುಕಿನಲ್ಲಿ ಸ್ವಾತಂತ್ರ್ಯ ಸೇನಾನಿಯ ಪಾತ್ರ ಮಾಡುವ ಆಸೆ ಇತ್ತು. ಭಗತ್ ಸಿಂಗ್ ಪಾತ್ರ ಮಾಡುವ ಆಸೆಯೂ ಮೊಳೆತಿತ್ತು. ನರಸಿಂಹ ರೆಡ್ಡಿಯ ಚರಿತ್ರೆ ಬಗ್ಗೆ ಯಾರಿಗೂ ಗೊತ್ತಿಲ್ಲ. ಅವರು ದೇಶದ ಪ್ರಥಮ ಸ್ವಾತಂತ್ರ್ಯ ಸೇನಾನಿ. ಅವರ ಪಾತ್ರ ತೆರೆಯ ಮೇಲೆ ಬರುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಸೈರಾ ಭಾರತೀಯ ಸಿನಿಮಾ. ಎಲ್ಲರೂ ನೋಡಿ ಹೆಮ್ಮೆಪಡುವಂತಹ ಚಿತ್ರ. ಪ್ರತಿ ಸೀನ್ ಚೆನ್ನಾಗಿ ಬರಲು ನಿರ್ದೇಶಕ ಸುರೇಂದರ್ ರೆಡ್ಡಿ ಸಾಕಷ್ಟು ಶ್ರಮಪಟ್ಟಿದ್ದಾರೆ. ಎಲ್ಲರ ಶ್ರಮದಿಂದ ಸಿನಿಮಾ ಚೆನ್ನಾಗಿ ಮೂಡಿಬಂದಿದೆ ಎಂದು ಹೇಳಿದರು.
ನನಗಿಂತಲೂ ಮೊದಲೇ 'ಮಗಧೀರ' ಚಿತ್ರದಲ್ಲಿ ರಾಮ್ ಚರಣ್ ನಟಿಸಿದ. ಅಂತಹ ಸಿನಿಮಾದಲ್ಲಿ ನಟಿಸಬೇಕೆಂಬುದು ನನ್ನ ಕನಸಾಗಿತ್ತು. ಆದರೆ, ಸೈರಾದಂತಹ ಸಿನಿಮಾದಲ್ಲಿ ನಟಿಸಲು ನನಗೆ ನನ್ನ ಪುತ್ರನೇ ಅವಕಾಶ ಕಲ್ಪಿಸಿಕೊಟ್ಟಿದ್ದಾನೆ. ಇದಕ್ಕಾಗಿ ನಾನು ಆತನಿಗೆ ಆಭಾರಿ. ನೀವು ಜೀವನದಲ್ಲಿ ಏನನ್ನು ಸಾಧಿಸಿದ್ದೀರಿ ಎಂದು ಎಲ್ಲರೂ ನನ್ನನ್ನು ಕೇಳಬಹುದು. ರಾಮ್ ಚರಣ್‌ನಂತಹ ಮಗನನ್ನು ಪಡೆದಿದ್ದೇನೆ ಎಂದು ಹೆಮ್ಮೆಯಿಂದ ಹೇಳುತ್ತೇನೆ ಎಂದರು.
ನಟಿ ತಮನ್ನಾ ಮಾತನಾಡಿ, 'ನನ್ನದು ಲಕ್ಷ್ಮಿ ಪಾತ್ರ.ಇಂತಹ ಐತಿಹಾಸಿಕ ಚಿತ್ರದಲ್ಲಿ ನಟಿಸಿರುವುದು ನನ್ನ ಅದೃಷ್ಟ' ಎಂದು ಹೇಳಿದರು.
ನಿರ್ದೇಶಕ ಸುರೇಂದರ್ ರೆಡ್ಡಿ ಮಾತನಾಡಿ, 'ಕರ್ನಾಟಕದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಸಂಗೊಳ್ಳಿ ರಾಯಣ್ಣನನ್ನು ಯಾರೊಬ್ಬರು ಮರೆಯಲು ಸಾಧ್ಯವಿಲ್ಲ. ಅಂತೆಯೇ ಆಂಧ್ರದಲ್ಲಿ ಸೈರಾ ನರಸಿಂಹ ರೆಡ್ಡಿ ಅವರ ಹೋರಾಟ ಸ್ಮರಣೀಯವಾದುದು. ಚಿರಂಜೀವಿ ಸರ್ ಅವರ ಶ್ರಮದಿಂದ ಈ ಸಿನಿಮಾ ನಿರ್ಮಾಣವಾಗಿದೆ. ನಾನು ಅವರ ಕನಸಿನ ಯೋಜನೆಯ ಭಾಗವಾಗಿದ್ದು ಖುಷಿ ನೀಡಿದೆ ಎಂದರು.
ನಟ ಸುದೀಪ್ ಈ ಚಿತ್ರಕ್ಕಾಗಿ ನೀಡಿದ ಕೊಡುಗೆಯನ್ನು ಮರೆಯಲಾಗದು ಎಂದು ಹೇಳಿದರು.
ನಿರ್ಮಾಪಕ ರಾಮ್ ಚರಣ್ ಮಾತನಾಡಿ, ನಾನು ಶಿವರಾಜ್ ಕುಮಾರ್ ಅವರ ದೊಡ್ಡ ಅಭಿಮಾನಿ. ಅವರ ಹಲವು ಚಿತ್ರಗಳನ್ನು ನೋಡಿದ್ದೇನೆ ಎಂದರು.
'ಹ್ಯಾಟ್ರಿಕ್ ಹೀರೊ' ಶಿವರಾಜ್ ಕುಮಾರ್ ಮಾತನಾಡಿ, ಚಿರಂಜೀವಿ ಅವರು ಯಾವಾಗಲೂ ನಮ್ಮ ಕುಟುಂಬದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಅವರು ನಮ್ಮ ಮನೆಯ ದೊಡ್ಡಣ್ಣ. ನಾನು ಅವರ ದೊಡ್ಡ ಅಭಿಮಾನಿ. ನಾನೂ ಕೂಡ ಮೊದಲ ದಿನವೇ ಸಿನಿಮಾ ನೋಡುತ್ತೇನೆ ಎಂದರು.
ಕನ್ನಡ, ತೆಲುಗು, ಹಿಂದಿ ತಮಿಳು ಭಾಷೆ ಬೇರೆಯಲ್ಲ. ನಾವೆಲ್ಲರೂ ಭಾರತೀಯರು ಎನ್ನುವುದನ್ನು ಮರೆಯಬಾರದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.