ADVERTISEMENT

ಬೆಂಗಳೂರು: ವಿಷ್ಣುವರ್ಧನ್ ಜಯಂತಿ ನಾಳೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2024, 16:27 IST
Last Updated 16 ಸೆಪ್ಟೆಂಬರ್ 2024, 16:27 IST
ನಟ ವಿಷ್ಣುವರ್ಧನ್
ನಟ ವಿಷ್ಣುವರ್ಧನ್   

ಬೆಂಗಳೂರು: ವಿಎಸ್‌ಎಸ್ ಅಭಿಮಾನ್ ಡಾ. ವಿಷ್ಣುವರ್ಧನ್ ಪುಣ್ಯಭೂಮಿ ಟ್ರಸ್ಟ್‌ ವತಿಯಿಂದ ಕೆಂಗೇರಿಯಲ್ಲಿರುವ ಅಭಿಮಾನ್ ಸ್ಟುಡಿಯೋದಲ್ಲಿ ಬುಧವಾರ ವಿಷ್ಣುವರ್ಧನ್ ಅವರ 74ನೇ ವರ್ಷದ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್‌ ಸಂಸ್ಥಾಪಕ ಅಧ್ಯಕ್ಷ ಟಿ. ತಿಮ್ಮರಾಜು (ರಾಜುಗೌಡ) ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಅಭಿಮಾನ್ ಸ್ಟುಡಿಯೊದಲ್ಲಿ ವಿಷ್ಣುವರ್ಧನ್ ಮಂಟಪಕ್ಕೆ ಹೂವಿನ ಅಲಂಕಾರ, ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲು ಜಿಲ್ಲಾಧಿಕಾರಿ ಅನುಮತಿ ನೀಡಿದ್ದಾರೆ. ಹಿಂದಿನ ರಾತ್ರಿಯೇ ಹೋಗಿ ಕೇಕ್‌ ಕತ್ತರಿಸುವುದು ಸೇರಿದಂತೆ ಯಾವುದೇ ಚಟುವಟಿಕೆ ನಡೆಸಿ ಗೊಂದಲ ಸೃಷ್ಟಿಸಬಾರದು ಎಂದು ಸೂಚಿಸಿದ್ದಾರೆ. ವಿಷ್ಣುವರ್ಧನ್ ಸ್ಮರಣಾರ್ಥ ಬುಧವಾರ ರಕ್ತದಾನ ಶಿಬಿರ ನಡೆಸಲಾಗುವುದು. ಅನ್ನದಾನ ಮಾಡಲಾಗುವುದು. ರಾಜ್ಯದ ವಿವಿಧ ಪ್ರದೇಶಗಳ ಸಾವಿರಾರು ಅಭಿಮಾನಿಗಳು ಭಾಗವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಅಭಿಮಾನ್ ಸ್ಟುಡಿಯೊ ಮಾಲೀಕರು 15 ವರ್ಷಗಳಿಂದ 9 ಎಕರೆ ಜಾಗದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. 10 ಗುಂಟೆಯನ್ನು ದಾನವಾಗಿ ಬರೆದುಕೊಟ್ಟು, ಸರ್ಕಾರದ ಜತೆಗೆ ಸಂಧಾನಕ್ಕೆ ಬಾರದೆ, ವಿಷ್ಣುವರ್ಧನ್‌ರ ಅಭಿಮಾನಿಗಳ ಮತ್ತು ಸಂಘಗಳ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ. ಜನ್ಮದಿನ ಹಾಗೂ ಪುಣ್ಯಸ್ಮರಣೆ ಕಾರ್ಯಕ್ರಮಗಳಿಗೆ ಸಹಕಾರ ಕೊಡುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಿಕೊಡಬೇಕು ಎಂದು ಮನವಿ ಮಾಡಿದರು.

ADVERTISEMENT

ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಬಿ.ವೈ. ರಮೇಶ್, ವಕೀಲ ಕೆ.ಎಸ್. ವರುಣ್, ಕಾನೂನು ಸಲಹೆಗಾರ ಮೋಹನ್ ಸಿಂಹ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.