ADVERTISEMENT

ಬಾಲಿವುಡ್ ನಟ ಸುಶಾಂತ್‌ಗೆ ಅಲ್ಬಂ ಮೂಲಕ ‘ಅಲ್ವಿದಾ’

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2021, 9:29 IST
Last Updated 14 ಫೆಬ್ರುವರಿ 2021, 9:29 IST
‘ಅಲ್ವಿದಾ’ ಹಾಡಿನ ಆಲ್ಬಂ ಟೀಸರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರರಂಗದ ಪ್ರಮುಖ ಗಣ್ಯರು ಭಾಗವಹಿಸಿದ್ದರು
‘ಅಲ್ವಿದಾ’ ಹಾಡಿನ ಆಲ್ಬಂ ಟೀಸರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರರಂಗದ ಪ್ರಮುಖ ಗಣ್ಯರು ಭಾಗವಹಿಸಿದ್ದರು   

ಬಾಲಿವುಡ್ ನಟ ಸುಶಾಂತ್‌ ಸಿಂಗ್ ನಿಧನರಾಗಿ ಮುಂದಿನ ಜೂನ್‌ಗೆ ವರ್ಷ ತುಂಬುತ್ತದೆ. ಆ ಸಾವಿನ ತನಿಖೆಯಲ್ಲಿಯೇ ಸುಶಾಂತ್ ಹೆಚ್ಚು ಸುದ್ದಿಯಾದರು. ಕೊಲೆಯೋ, ಆತ್ಮಹತ್ಯೆಯೋ ಎಂಬಂಥ ಪ್ರಶ್ನೆಯೇ ದೊಡ್ಡ ಮಟ್ಟದಲ್ಲಿ ಸದ್ದುಗದ್ದಲ ಮಾಡಿತು. ಆ ಸಾವನ್ನು ಹೊರತುಪಡಿಸಿ ಬಾಲಿವುಡ್‌ನಲ್ಲಿ ಅವರ ಸಾಧನೆ ಕುರಿತು ‘ಅಲ್ವಿದಾ’ ಆಲ್ಬಂ ಹಾಡು ಇದೀಗ ಸಿದ್ಧವಾಗಿದೆ.

ಸುಶಾಂತ್‌ ಬದುಕಿನ ಹೋರಾಟವನ್ನು ‘ಪ್ಲೇ ಟು‌ ಮಿ’ ಸಂಸ್ಥೆ ನಿರ್ಮಿಸಿದ ಆಲ್ಬಂನ ‘ಅಲ್ವಿದಾ’ ಹಾಡಿನಲ್ಲಿ ತೋರಿಸಿದ್ದಾರೆ ಗಾಯಕ ವಿನಯ್‌ ಚಂದ್ರ.ಸಂಗೀತವೂ ಅವರದ್ದೇ. ಹಾಡು ಹಿಂದಿಯಲ್ಲಿದೆ ಅಭಿಲಾಷ್ ಗುಪ್ತಾ ಅವರ ಸಾಹಿತ್ಯವಿದೆ. ‘ಬಾಲಿವುಡ್‌ನಲ್ಲಿ‌ ನೆಲೆ ನಿಲ್ಲಲು ಸುಶಾಂತ್ ಅವರ ಶ್ರಮ ಹೇಗಿತ್ತು ಎಂಬುದನ್ನು ಈ‌ ಹಾಡಿನಲ್ಲಿ ತೋರಿಸಿದ್ದೇವೆ. ಅವರ ಬಾಲ್ಯದ ಫೋಟೋಗಳಿಂದ ಹಿಡಿದ ಇತ್ತೀಚಿನ ಫೋಟೋಗಳನ್ನು ಮೂರು ನಿಮಿಷದ ವಿಡಿಯೋದಲ್ಲಿ ಸೆರೆ ಹಿಡಿದಿದ್ದೇವೆ. ಕೊನೆಗೆ ತಮ್ಮ ಈ ಸಿನಿಮಾ ಪಯಣದಲ್ಲಿ ಕೈಹಿಡಿದವರಿಗೆ, ಆಸರೆಯಾದವರಿಗೆ ಥ್ಯಾಂಕ್ಸ್ ಹೇಳಿ ಹೊರಡುವ ಪರಿಕಲ್ಪನೆಯಲ್ಲಿ ರೂಪಿಸಲಾಗಿದೆ’ ಎಂದು ಪ್ಲೇಟು ಮಿ ವೇದಿಕೆಯ ಸಿಇಒಕೀರ್ತಿ ವಾಸನ್ ಸುಬ್ರಮಣ್ಯಂ ಹೇಳಿದರು.

ಬೆಂಗಳೂರಿನಲ್ಲಿಯೇ ಸಂಪೂರ್ಣವಾಗಿ ಸೆಟ್ ಹಾಕಿ ಅಲ್ವಿದಾ ಹಾಡಿನ ಶೂಟಿಂಗ್ ಮಾಡಲಾಗಿದೆ. ಸದ್ಯ ಟೀಸರ್ ಬಿಡುಗಡೆ ಆಗಿದೆ. ಇನ್ನೊಂದು ವಾರದಲ್ಲಿ ಯೂಟ್ಯೂಬ್ ನಲ್ಲಿ ಹಾಡು ಬಿಡುಗಡೆ ಆಗಲಿದೆ. ಶ್ರೀಧರ್ ಮತ್ತು ಶೀತಲ್ ಈ ಹಾಡಿಗೆ ಹಣ ಹೂಡಿದ್ದಾರೆ. ಹಾಡಿನ ನಿರ್ದೇಶನವನ್ನೂ ಶ್ರೀಧರ್ ಮಾಡಿದ್ದಾರೆ. ಅನಿಲ್‌ ಕುಮಾರ್‌ ಅವರ ಛಾಯಾಗ್ರಹಣ, ಸಂಕಲನ ಇದೆ.

ADVERTISEMENT

ಬಿಡುಗಡೆ ಕಾರ್ಯಕ್ರಮದಲ್ಲಿ ಹಿರಿಯ ಸಂಗೀತ ನಿರ್ದೇಶಕ ವಿ. ಮನೋಹರ್, ಸಾಹಸ‌ ನಿರ್ದೇಶಕ ಥ್ರಿಲ್ಲರ್ ಮಂಜು, ವಿನಯ್ ಚಂದ್ರ ಅವರ ತಂದೆ ಮತ್ತು ಹಿರಿಯ ಪತ್ರಕರ್ತರು ಆಗಿರುವ ಸುರೇಶ್ ಚಂದ್ರ, ರವಿಚೇತನ್, ನಟಿ ರೂಪಿಕಾ, ಅಭಯ್ ಚಂದ್ರ, ಕೀರ್ತಿ ವಾಸನ್ ಇದ್ದರು.

ಪ್ಲೇಟು ಮಿ ಭಾರತದ ಪ್ರಮುಖ ಪ್ರದರ್ಶಕ ಕಲೆಗಳ ಪ್ರದರ್ಶನ ವೇದಿಕೆಯೂ ಹೌದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.