ADVERTISEMENT

7ರಂದು ಕುಡ್ಲ ಟಾಕೀಸ್‌ನಲ್ಲಿ ‘ಪೆಪ್ಪೆರೆರೆ ಪೆರೆರೆರೆ’ ಸಿನಿಮಾ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 7:44 IST
Last Updated 4 ಮಾರ್ಚ್ 2021, 7:44 IST
‘ಪೆಪ್ಪೆರೆರೆ ಪೆರೆರೆರೆ’ ಸಿನಿಮಾದ ದೃಶ್ಯ
‘ಪೆಪ್ಪೆರೆರೆ ಪೆರೆರೆರೆ’ ಸಿನಿಮಾದ ದೃಶ್ಯ   

ಮಂಗಳೂರು: ನಿಶಾನ್ ವರುಣ್ ಮೂವೀಸ್ ಬ್ಯಾನರ್‌ನಡಿ ತಯಾರಾದ ವಿಜಯ್ ಶೋಭರಾಜ್ ಪಾವೂರು ನಿರ್ದೇಶನದ ‘ಪೆಪ್ಪೆರೆರೆ ಪೆರೆರೆರೆ’ ತುಳು ಸಿನಿಮಾ ಇದೇ 7ರಂದು ‘ನಮ್ಮ ಕುಡ್ಲ ಟಾಕೀಸ್‌’ನಲ್ಲಿ ತೆರೆ ಕಾಣಲಿದೆ.

‘ನಮ್ಮ ಕುಡ್ಲ ಟಾಕೀಸ್‌’ನಲ್ಲಿ 7ರಂದು ಭಾನುವಾರ ಮಧ್ಯಾಹ್ನ 1.30, ಸಂಜೆ 6 ಹಾಗೂ ರಾತ್ರಿ 9 ಗಂಟೆಗೆ ಪ್ರದರ್ಶನ ಕಾಣಲಿದೆ. ಮಾರ್ಚ್ ತಿಂಗಳ ಪ್ರತಿ ಭಾನುವಾರ ಮೂರು ಪ್ರದರ್ಶನಗಳಂತೆ ಒಟ್ಟು 12 ಪ್ರದರ್ಶನಗಳನ್ನು ಕಾಣಲಿದೆ. ಬಳಿಕ ಸಿನಿಮಾ ಮಲ್ಟಿಫ್ಲೆಕ್ಸ್‌ನಲ್ಲಿಯೂ ತೆರೆ ಕಾಣಲಿದೆ’ ಎಂದು ಚಿತ್ರದ ಸಹ ನಿರ್ದೇಶಕ ರಾಹುಲ್ ಅಮೀನ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಮಲ್ನಾಡ್ ಇನ್‌ಫೊಟೆಕ್ ಹಾಗೂ ವಿ4 ಇನ್‌ಫೊಟೆಕ್ ಸಂಪರ್ಕದ ಎಲ್ಲ ಕೇಬಲ್ ಆಪರೇಟರ್‌ಗಳು ಗ್ರಾಹಕರಿಗೆ ‘ನಮ್ಮ ಕುಡ್ಲ ಟಾಕೀಸ್’ ಎಂಬ ಪ್ರತ್ಯೇಕ ಚ್ಯಾನೆಲ್‌ನ ಸಂಪರ್ಕ ನೀಡುತ್ತಾರೆ. ಸಾಮಾನ್ಯ ಟಿವಿಯಲ್ಲಿ ಸಿನೆಮಾ ವೀಕ್ಷಣೆ ಮಾಡಲು ₹ 120 ಹಾಗೂ ಎಚ್‌ಡಿ ಗುಣಮಟ್ಟಕ್ಕೆ ₹ 160 ಪಾವತಿಸಬೇಕಾಗುತ್ತದೆ. ಚ್ಯಾನೆಲ್ ಸಂಖ್ಯೆ 88 ಅಥವಾ 888‌ರಲ್ಲಿ ವೀಕ್ಷಿಸಬಹುದು. ಸಿನೆಮಾ ವೀಕ್ಷಣೆ ಮಾಡಲು ತಮ್ಮ ಕೇಬಲ್ ಅಪರೇಟರ್‌ರನ್ನು ಸಂಪರ್ಕಿಸಬಹುದಾಗಿದೆ’ ಎಂದು ಹೇಳಿದರು.

ADVERTISEMENT

‘ಈ ಸಿನಿಮಾದ ಒಟಿಟಿ ಟಿಕೇಟ್‌ ಖರೀದಿಸಿದವರಿಗೆ www.touchwoodmovie.comನ ಮೂಲಕ ಇದೇ 7ರಂದು ಮಧ್ಯಾಹ್ನ 3ರಿಂದ ಮೂರುದಿನಗಳ ಕಾಲ ಸ್ಟ್ರೀಮಿಂಗ್‌ ಮಾಡಲಾಗುತ್ತದೆ. ಇದೇ ಪ್ಲಾಟ್‌ಫಾರ್ಮ್‌ನಲ್ಲಿ ₹ 199ಕ್ಕೆ ಟಿಕೆಟ್‌ ಕೂಡ ಲಭ್ಯವಿದೆ. ಥಿಯೇಟರ್‌ನಲ್ಲಿ ಸಿನಿಮಾ ಬಿಡುಗಡೆಯಾದಾಗ ಇದೇ ಟಿಕೆಟ್‌ನಲ್ಲಿ ಚಿತ್ರವನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ. ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಹೊರಗಿರುವ ಸಿನಿಮಾಪ್ರಿಯರು www.nishavarunmovies.comನಲ್ಲಿ ಟಿಕೆಟ್‌ ಖರೀದಿಸಿ, ವೀಕ್ಷಿಸಬಹುದು’ ಎಂದರು.

‘ಒಟಿಟಿ ಟಿಕೆಟ್‌ ಖರೀದಿಸಿದವರಿಗೆ ಲಕ್ಕಿ ಡ್ರಾ ಮೂಲಕ ಹಲವರಿಗೆ ಬಹುಮಾನ ವಿತರಿಸಲಾಗಿದೆ. ಇನ್ನುಳಿದ ಬಂಪರ್‌ ಡ್ರಾ ಕಾರನ್ನು ಸಿನಿಮಾ ಥಿಯೇಟರ್‌ಗೆ ಬಿಡುಗಡೆ ಮಾಡಿದ ಎರಡು ವಾರಗಳಲ್ಲಿ ಡ್ರಾ ಮಾಡಲಾಗುವುದು. ಇದೊಂದು ಪಕ್ಕಾ ಮನರಂಜನೆಯ ಸಿನಿಮಾವಾಗಿದ್ದು, ತುಳುವರು ಪ್ರೋತ್ಸಾಹಿಸಬೇಕು’ ಎಂದು ಹೇಳಿದರು.

‘ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನವೆಲ್ಲವೂ ವಿಜಯ್ ಶೋಭರಾಜ್ ಪಾವೂರು ಅವರದ್ದಾಗಿದೆ. ರಾಹುಲ್ ಅಮೀನ್ ಅವರ ಸಹ ನಿರ್ದೇಶನವಿರುವ ಈ ಸಿನಿಮಾಕ್ಕೆ ನಿಶಾನ್ ಕೃಷ್ಣ ಭಂಡಾರಿ ಮತ್ತು ವರುಣ್ ಸಾಲ್ಯಾನ್ ಬಂಡವಾಳ ಹಾಕಿದ್ದಾರೆ. ಚಿತ್ರದಲ್ಲಿ ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಭೋಜರಾಜ ವಾಮಂಜೂರು, ಅರವಿಂದ ಬೋಳಾರ್, ದೀಪಕ್ ರೈ ಪಾಣಾಜೆ, ಸತೀಶ್ ಬಂದಲೆ, ಸಾಯಿಕೃಷ್ಣ ಕುಡ್ಲ, ಉಮೇಶ್ ಮಿಜಾರ್ ಮೊದಲಾದವರು ಅಭಿನಯಿಸಿದ್ದಾರೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಕಾಶ್‌, ಬಾಳ ಜಗನ್ನಾಥ ಶೆಟ್ಟಿ, ನಿರ್ಮಾಪಕರಾದ ನಿಶಾನ್ ಕೃಷ್ಣ ಭಂಡಾರಿ, ವರುಣ್ ಸಾಲ್ಯಾನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.