ನವದೆಹಲಿ: ದೇಶದ ಸಿನಿಮಾರಂಗದಲ್ಲಿ ಸೋಮವಾರ ಇತಿಹಾಸ ಸೃಷ್ಟಿಯಾಗಿದ್ದು, ಒಂದು ಕಿರು ಸಾಕ್ಷ್ಯಚಿತ್ರ ಮತ್ತು ಸಿನಿಮಾ ಹಾಡು ಆಸ್ಕರ್ ಅಂಗಳದಲ್ಲಿ ಮೋಡಿ ಮಾಡಿವೆ. ತಮಿಳಿನ ‘ದಿ ಎಲಿಫೆಂಟ್ ವಿಸ್ಪರರ್ಸ್’ ಕಿರು ಸಾಕ್ಷ್ಯಚಿತ್ರವು 95ನೇ ಅಕಾಡೆಮಿ ಪ್ರಶಸ್ತಿ ಪಡೆದುಕೊಂಡಿದೆ. ತೆಲುಗಿನ ‘ಆರ್‌ಆರ್‌ಆರ್’ ಚಿತ್ರದ ‘ನಾಟು ನಾಟು’ ಅತ್ಯುತ್ತಮ ಗೀತೆ ವಿಭಾಗದಲ್ಲಿ ಪ್ರಶಸ್ತಿ ಗಳಿಸಿದೆ.
ಬಾಲಿವುಡ್‌ನಾಚೆಗೂ ವಿಸ್ತರಿಸಿರುವ ಸಿನಿಮಾ ಪ್ರಭಾವಳಿ ಹಾಗೂ ದೇಶದಲ್ಲಿ ಕಿರು ಸಾಕ್ಷ್ಯಚಿತ್ರಗಳ ಬೆಳವಣಿಗೆಯನ್ನು ಈ ಎರಡೂ ಗೆಲುವುಗಳು ದೃಢಪಡಿಸಿವೆ.
ಭಾರತದ ಚಿತ್ರನಿರ್ಮಾಣ ಸಂಸ್ಥೆಗಳ ಎರಡು ಚಿತ್ರಗಳು ಜಗತ್ತಿನ ಅತಿದೊಡ್ಡ ಸಿನಿಮಾ ಪ್ರಶಸ್ತಿಗೆ ಒಂದೇ ವರ್ಷದಲ್ಲಿ ಭಾಜನವಾಗಿರುವುದು ಇದೇ ಮೊದಲು. ಈ ಸಾಧನೆಗೆ ದೇಶದಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.
ಅಮೆರಿಕದ ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ದಿ ಎಲಿಫೆಂಟ್ ವಿಸ್ಪರರ್ಸ್ ಕಿರು ಸಾಕ್ಷ್ಯಚಿತ್ರವನ್ನು ಕಾರ್ತಿಕಿ ಗೊನ್ಸಾಲ್ವೆನ್ಸ್ ಅವರು ನಿರ್ದೇಶಿಸಿದ್ದು, ಗುನೀತ್ ಮೊಂಗಾ ಅವರು ನಿರ್ಮಿಸಿದ್ದಾರೆ. ಗೊನ್ಸಾಲ್ವೆನ್ಸ್ ಅವರು ಪ್ರಶಸ್ತಿಯನ್ನು ತಾಯ್ನಾಡಿಗೆ ಸಮರ್ಪಿಸಿದರು. ನಾಟು ನಾಟು ಗೀತೆಗೆ ಸಂದ ಪ್ರಶಸ್ತಿಯನ್ನು ಆರ್‌ಆರ್‌ಆರ್ ಚಿತ್ರದ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಹಾಗೂ ಗೀತರಚನೆಕಾರ ಚಂದ್ರಬೋಸ್ ಅವರಿಗೆ ನೀಡಲಾಯಿತು.
‘ನಾಟು ನಾಟು’ ತೆಲುಗು ಆವೃತ್ತಿಯ ಗೀತೆಯ ನೃತ್ಯ ಪ್ರದರ್ಶನ ನಡೆಯಿತು. ನಟಿ ದೀಪಿಕಾ ಪಡುಕೋಣೆ ಅವರು ಗೀತೆಯನ್ನು ಪರಿಚಯಿಸಿದರು. ಎಸ್.ಎಸ್. ರಾಜಮೌಳಿ ನಿರ್ದೇಶನದ ಸೂಪರ್‌ಹಿಟ್ ‘ಆರ್‌ಆರ್‌ಆರ್’ ಚಿತ್ರದಲ್ಲಿ ರಾಮ್‌ಚರಣ್ ಹಾಗೂ ಜೂನಿಯರ್ ಎನ್‌ಟಿಆರ್ ಅವರು ನಟಿಸಿದ್ದಾರೆ. 2009ರಲ್ಲಿ ‘ಜೈ ಹೋ’ ಬಳಿಕ, ವಿದೇಶಿ ಭಾಷೆಯ ಅತ್ಯುತ್ತಮ ಗೀತೆ ವಿಭಾಗದಲ್ಲಿ ‘ನಾಟು ನಾಟು’ ಗೀತೆಗೆ ಪ್ರಶಸ್ತಿ ಸಿಕ್ಕಿದೆ. ಗೋಲ್ಡನ್ ಗ್ಲೋಬ್ ಹಾಗೂ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ ಬಳಿಕ ‘ನಾಟು ನಾಟು’ ಗೀತೆಗೆ ಜಾಗತಿಕ ಮಟ್ಟದಲ್ಲಿ ಸಿಕ್ಕಿರುವ ಮೂರನೇ ಪ್ರಶಸ್ತಿ ಇದಾಗಿದೆ.
ಈ ಹಿಂದಿನ ವರ್ಷಗಳಲ್ಲಿ ಆಸ್ಕರ್ ಪ್ರಶಸ್ತಿ ಪಡೆದಿದ್ದ ‘ಸ್ಮೈಲ್ ಪಿಂಕಿ’, ಹಾಗೂ ‘ಪೀರಿಯಡ್: ಎಂಡ್ ಆಫ್ ಸೆಂಟೆನ್ಸ್’ ಎಂಬ ಕಿರು ಸಾಕ್ಷ್ಯಚಿತ್ರಗಳನ್ನು ಭಾರತದ ನಿರ್ಮಾಣ ಸಂಸ್ಥೆ ನಿರ್ಮಿಸಿರಲಿಲ್ಲ. ಹೀಗಾಗಿ ಭಾರತದಲ್ಲೇ ನಿರ್ಮಾಣವಾದ ‘ದಿ ಎಲಿಫೆಂಟ್ ವಿಸ್ಪರರ್ಸ್’ ಪ್ರಶಸ್ತಿ ಪಡೆದ ಮೊದಲ ಚಿತ್ರ ಎನಿಸಿಕೊಂಡಿದೆ.
ಅಭಿನಂದನೆ: ‘ನಾಟು ನಾಟು’ ಮಾಡಿರುವ ಮೋಡಿಗೆ ದೇಶದ ಎಲ್ಲ ಕ್ಷೇತ್ರಗಳ ಗಣ್ಯರು, ಅಭಿಮಾನಿಗಳು ಅಭಿನಂದನೆ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚಿತ್ರರಂಗದ ರಜನಿಕಾಂತ್, ಶಾರುಕ್ ಖಾನ್, ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮೊದಲಾದವರು ಸಾಧನೆಯನ್ನು ಶ್ಲಾಘಿಸಿದ್ದಾರೆ.
ಆಸ್ಕರ್‌ನಲ್ಲಿ ಮಿಂಚಿದ ಏಷ್ಯಾ
ಏಷ್ಯಾದ ‘ಎವ್ವೆರಿಥಿಂಗ್ ಎವ್ವೆರಿವೇರ್’ ಚಿತ್ರವು ಏಳು ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಮಲೇಷ್ಯಾದ ಮಿಷೆಲ್ ಯೋಹ್ ಅವರು ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ಈ ವಿಭಾಗದಲ್ಲಿ ಏಷ್ಯಾಕ್ಕೆ ಸಿಕ್ಕ ಮೊದಲ ಪ್ರಶಸ್ತಿ ಇದಾಗಿದೆ. ಭಾರತದ ಶೌನಕ್ ಸೇನ್ ಅವರ ನಿರ್ದೇಶನದ ‘ಆಲ್ ದಟ್ ಬ್ರೀತ್ಸ್’ ಸಾಕ್ಷ್ಯಚಿತ್ರವು ಪ್ರಶಸ್ತಿ ಸುತ್ತಿನಲ್ಲಿ ಎಡವಿದೆ. ‘ನವಾಲ್ನಿ’ ಸಾಕ್ಷ್ಯಚಿತ್ರಕ್ಕೆ ಈ ಪ್ರಶಸ್ತಿ ಸಂದಿತು.
**
ಭಾರತದ ಸಿನಿಮಾ ತಯಾರಕರು ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಸಾಧನೆ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಇದು ಆರಂಭ ಮಾತ್ರ
–ಅನುರಾಗ್ ಠಾಕೂರ್, ಕೇಂದ್ರ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.