ADVERTISEMENT

ಪತ್ತೇದಾರಿ ಜಾಡಿನಲ್ಲಿ ‘ಉದ್ದಿಶ್ಯ’

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2018, 11:18 IST
Last Updated 14 ಆಗಸ್ಟ್ 2018, 11:18 IST
ಅರ್ಚನಾ ಗಾಯಕ್‌ವಾಡ್‌
ಅರ್ಚನಾ ಗಾಯಕ್‌ವಾಡ್‌   

ಹಾಲಿವುಡ್‌ ಬರಹಗಾರ್ತಿ ರೊರ್ಬಟಾ ಗ್ರೀಫಿನ್‌ ಬರೆದ ಕಥೆಯನ್ನು ಕನ್ನಡದಲ್ಲಿ ‘ಉದ್ದಿಶ್ಯ’ ರೂಪದಲ್ಲಿ ಸಿನಿಮಾವಾಗಿಸಿದ್ದಾರೆ ನಿರ್ದೇಶಕ ಹೇಮಂತ್‌ ಕೃಷ್ಣಪ್ಪ. ಅಮೆರಿಕದಲ್ಲಿ ನೆಲೆಸಿದ್ದ ಅವರು ಬೆಂಗಳೂರಿಗೆ ಬಂದು ಈ ಚಿತ್ರಕ್ಕಾಗಿ ಎರಡೂವರೆ ವರ್ಷಕಾಲ ಕಷ್ಟಪಟ್ಟಿದ್ದಾರಂತೆ.

‘ಅಮೆರಿಕದಲ್ಲಿ ಇದ್ದಾಗ ಕಿರುಚಿತ್ರಗಳನ್ನು ನಿರ್ದೇಶನ ಮಾಡುವ ಜೊತೆಗೆ ನಟನೆ ಕೂಡ ಮಾಡಿದ್ದೇನೆ. ಈ ಅನುಭವದ ಮೇಲೆಯೇ ಮೊದಲ ಬಾರಿಗೆ ಕನ್ನಡದಲ್ಲಿ ಸಿನಿಮಾ ಮಾಡಿದ್ದೇನೆ. ಚಿತ್ರದ ಕೊನೆಯಲ್ಲಿ ಹಾರರ್‌ ಇದೆ’ ಎಂದರು ಹೇಮಂತ್.

ಮೈಸೂರಿನ ಮೃಗಾಲಯದಿಂದ ಕಥೆ ಆರಂಭವಾಗುತ್ತದೆಯಂತೆ. ನಿರ್ದೇಶನದ ಜೊತೆಗೆ ಚಿತ್ರಕ್ಕೆ ಬಂಡವಾಳ ಕೂಡ ಹೂಡಿದ್ದಾರೆ. ಅಲ್ಲದೇ, ಚಿತ್ರದಲ್ಲಿ ತನಿಖಾಧಿಕಾರಿಯಾಗಿಯೂ ಕಾಣಿಸಿಕೊಂಡಿದ್ದಾರೆ. ‘ಮೃಗಾಲಯಗಳಲ್ಲಿ ಚಿತ್ರೀಕರಣಕ್ಕೆ ಅನುಮತಿ‍ಪಡೆಯುವುದು ತುಂಬಾ ಕಷ್ಟ’ ಎಂದು ಹೇಳಿಕೊಂಡರು.

ADVERTISEMENT

‘ರಾಷ್ಟ್ರೀಯ ಮೃಗಾಲಯದ ಪ್ರಾಧಿಕಾರದ ನಿಯಮಾವಳಿಯ ಪ್ರಕಾರ ಮೃಗಾಲಯಗಳಲ್ಲಿ ಶೂಟಿಂಗ್‌ಗೆ ಅವಕಾಶವಿಲ್ಲ. ಕೊನೆಗೆ, ನಾವು ಬಳ್ಳಾರಿಯಲ್ಲಿ ಚಿತ್ರೀಕರಣ ನಡೆಸಿದೆವು. ಅಮೆರಿಕದಲ್ಲಿ ಇಂತಹ ನಿರ್ಬಂಧವಿಲ್ಲ. ಭಾರತಕ್ಕೆ ಹೋಲಿಸಿದರೆ ಅಮೆರಿಕದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಬಹುಬೇಗ ಅನುಮತಿ ದೊರೆಯುತ್ತದೆ’ ಎಂದು ಅನುಭವ ಹಂಚಿಕೊಂಡರು.

‘ಉದ್ದಿಶ್ಯ’ ಚಿತ್ರ‍ಪತ್ತೇದಾರಿ ಕಥೆಯಾಗಿದೆ. ಸ್ಥಳೀಯ ಪೊಲೀಸರ ನೆರವಿನೊಂದಿಗೆ ತನಿಖಾಧಿಕಾರಿಯು ಕೊಲೆಯ ರಹಸ್ಯವನ್ನು ಬಯಲು ಮಾಡಲು ಹೊರಡುತ್ತಾನೆ. ಇದು ಥ್ರಿಲ್ಲರ್‌ ಕಥೆಯಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಒಂದು ದಶಕಕ್ಕೂ ಹೆಚ್ಚು ಕಾಲ ಕಿರುತೆರೆಯಲ್ಲಿ ನಟಿಸುತ್ತಿರುವ ನಟಿ ಅರ್ಚನಾ ಗಾಯಕ್‌ವಾಡ್‌ ಮೊದಲ ಬಾರಿಗೆ ಬೆಳ್ಳಿತೆರೆಗೆ ಪ್ರವೇಶಿಸಿದ್ದಾರೆ. ಚಿತ್ರದಲ್ಲಿ ಅವರು ತನಿಖಾಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.‘ಎಲ್ಲರಿಗೂ ಹಿರಿತೆರೆಯಲ್ಲಿ ನಟನೆಗೆ ಅವಕಾಶ ಸಿಗಬೇಕಿದೆ. ನನಗೂ ಅವಕಾಶ ಸಿಕ್ಕಿದೆ. ನನ್ನ ಸಾಮರ್ಥ್ಯವನ್ನು ಚಿತ್ರದಲ್ಲಿ ಸಾಬೀತುಪಡಿಸಿದ್ದೇನೆ’ ಎಂದರು.

ಬಿಜೆಪಿ ರಾಜ್ಯ ಘಟಕದ ವಕ್ತಾರ ಅಶ್ವಥ್‌ ನಾರಾಯಣ ಪಾದ್ರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ನನಗೆ ಸಿನಿಮಾ ಹೊಸದು. ಆದರೆ, ನಾನು ಸರ್ಕಾರಿ ನೌಕರನಾಗಿದ್ದಾಗ ರಂಗಭೂಮಿಯೊಂದಿಗೆ ನಂಟು ಬೆಸೆದುಕೊಂಡಿದ್ದೆ. ಹಲವು ನಾಟಕಗಳಲ್ಲಿ ಅಭಿನಯಿಸಿದ ಅನುಭವವಿದೆ’ ಎಂದರು.

ಅಕ್ಷತಾ, ಇಚ್ಛಾ, ಪ್ರಣಮ್ಯ ತಾರಾಗಣದಲ್ಲಿದ್ದಾರೆ. ಚೇತನ್‌ ರಘುರಾಮ್‌ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಶೇಡ್ರಾಕ್ ಸಾಲೊಮನ್‌ ಅವರು ಸಂಗೀತ ಸಂಯೋಜಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.