ADVERTISEMENT

500ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ‘ಉದ್ಘರ್ಷ’ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2019, 12:09 IST
Last Updated 18 ಮಾರ್ಚ್ 2019, 12:09 IST
‘ಉದ್ಘರ್ಷ’ ಚಿತ್ರದಲ್ಲಿ ಕಬೀರ್‌ ದುಹಾನ್‌ ಸಿಂಗ್‌ ಮತ್ತು ಸಾಯಿ ಧನ್ಸಿಕಾ
‘ಉದ್ಘರ್ಷ’ ಚಿತ್ರದಲ್ಲಿ ಕಬೀರ್‌ ದುಹಾನ್‌ ಸಿಂಗ್‌ ಮತ್ತು ಸಾಯಿ ಧನ್ಸಿಕಾ   

ಸಸ್ಪೆನ್ಸ್‌, ಥ್ರಿಲ್ಲರ್‌ ಸಿನಿಮಾಗಳ ಜಗತ್ತಿನಲ್ಲಿ ಸುನೀಲ್‌ ಕುಮಾರ್‌ ದೇಸಾಯಿ ಪರಿಚಿತ ಹೆಸರು. ‘ಉದ್ಘರ್ಷ’ ಚಿತ್ರದ ಮೂಲಕ ಅವರು ಪ್ರೇಕ್ಷಕರಿಗೆ ಮರ್ಡರ್‌ ಮಿಸ್ಟರಿ ಕಥೆ ಹೇಳುತ್ತಿದ್ದಾರೆ. ಇದೇ ಶುಕ್ರವಾರ ಕನ್ನಡ ಸೇರಿದಂತೆ ತೆಲುಗು, ತಮಿಳು ಮತ್ತು ಮಲಯಾಳ ಭಾಷೆಯಲ್ಲಿ ಈ ಸಿನಿಮಾ ತೆರೆಕಾಣುತ್ತಿದೆ. ಈ ಕುರಿತು ಮಾಹಿತಿ ಹಂಚಿಕೊಳ್ಳಲು ಸುದ್ದಿಗೋಷ್ಠಿಗೆ ಹಾಜರಾಗಿದ್ದರು.

‘ನಾಲ್ಕೂ ಭಾಷೆಯಲ್ಲಿ ಐನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ತೆರೆಕಾಣುತ್ತಿದೆ. ತಮಿಳು ಮತ್ತು ಮಲಯಾಳ ಭಾಷೆಯಲ್ಲೂ ಚಿತ್ರಕ್ಕೆ ಉತ್ತಮ ಸಹಕಾರ ಸಿಕ್ಕಿದೆ. ಇದು ಮೈಂಡ್‌ಗೇಮ್‌ ಸಿನಿಮಾ. ಯುವಪೀಳಿಗೆಗೆ ಹೊಸ ಅನುಭವ ನೀಡಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು ದೇಸಾಯಿ.

‘ಚಿತ್ರಕ್ಕೆ ‘ಎ’ ಪ್ರಮಾಣಪತ್ರ ಸಿಕ್ಕಿದೆ. ಠಾಕೂರ್‌ ಅನೂಪ್ ಸಿಂಗ್‌ ನೆಗೆಟೀವ್‌ ಶೇಡ್‌ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಈ ಸಿನಿಮಾದ ಪಾತ್ರಕ್ಕೆ ಹೊಸ ರೂಪ, ರಂಗು ಬೇಕಿತ್ತು. ಅದನ್ನು ಅನೂಪ್‌ ಸೊಗಸಾಗಿ ನಿರ್ವಹಿಸಿದ್ದಾರೆ’ ಎಂದು ಹೊಗಳಿದರು.

ADVERTISEMENT

‘ಖಳನಟನಾಗಿ ನಟಿಸುವಾಗ ಕೆಲವು ಮಿತಿಗಳಿರುತ್ತವೆ. ಜೊತೆಗೆ, ನಿರ್ದೇಶಕರು ಹಾಕುವ ಗೆರೆ ದಾಟಲು ಸಾಧ್ಯವಿಲ್ಲ. ದೇಸಾಯಿ ಸರ್‌ ನನಗೆ ಸಂ‍ಪೂರ್ಣ ಸಹಕಾರ ನೀಡಿದ್ದರು. ನನ್ನ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಲು ಅನುವು ಮಾಡಿಕೊಟ್ಟಿದ್ದರು’ ಎಂದರು ಚಿತ್ರದ ನಾಯಕ ಠಾಕೂರ್‌ ಅನೂಪ್‌ ಸಿಂಗ್.

ಅನೂಪ್‌ ಅವರ ತಂದೆ ವಕೀಲರಂತೆ. ತಾಯಿ ಗೃಹಿಣಿ. ಅವರ ಚಿತ್ರಗಳಿಗೆ ತಂದೆ– ತಾಯಿಯೇ ವಿಮರ್ಶಕರಂತೆ. ಇತ್ತೀಚೆಗೆ‍ಪೋಷಕರು ಬೆಂಗಳೂರಿಗೆ ಭೇಟಿ ನೀಡಿದಾಗ ‘ಉದ್ಘರ್ಷ’ ಚಿತ್ರವನ್ನು ಅವರಿಗೆ ತೋರಿಸಿದರಂತೆ. ಅವರ ತಂದೆ ತದೇಕಚಿತ್ತದಿಂದ ಚಿತ್ರ ವೀಕ್ಷಿಸಿದರಂತೆ. ‘ಕಥೆ ಹೀರೊ ಅಥವಾ ಹೀರೊಯಿನ್‌ ಹಿಂದೆ ಸುತ್ತುವುದಿಲ್ಲ. ಪ್ರತಿಯೊಂದು ಪಾತ್ರವೂ ಇಲ್ಲಿ ಮುಖ್ಯವಾಗುತ್ತದೆ. ಚಿತ್ರ ಆರಂಭವಾದ ನಾಲ್ಕು ನಿಮಿಷಕ್ಕೆ ಕಥೆ ಶುರುವಾಗುತ್ತದೆ. ಪ್ರೇಕ್ಷಕನಿಗೆ ಪ್ರತಿಕ್ಷಣವೂ ಕುತೂಹಲ ಮೂಡಿಸುತ್ತಾ ಹೋಗುತ್ತದೆ. ಅದೇ ದೇಸಾಯಿ ಸರ್‌ ಅವರ ವೈಶಿಷ್ಯ.ನನ್ನಪ್ಪನಿಗೆ ಚಿತ್ರ ಇಷ್ಟವಾಗಿದೆ. ಪ್ರೇಕ್ಷಕರಿಗೂ ಚಿತ್ರ ಇಷ್ಟವಾಗಲಿದೆ’ ಎಂದು ಸಂತಸ ಹಂಚಿಕೊಂಡರು.

ನಟರಾದ ಅಲ್ಲು ಅರ್ಜುನ್, ಸೂರ್ಯ, ದರ್ಶನ್‌ ಅವರ ನಟನೆ ನೋಡಿ ಅನೂಪ್‌ ಸಾಕಷ್ಟು ಕಲಿತಿದ್ದಾರಂತೆ. ‘ಕಬೀರ್‌ ದುಹಾನ್‌ ಸಿಂಗ್ ಮತ್ತು ನಾನು ಸ್ನೇಹಿತರು. ಆತನನ್ನು ಐದು ವರ್ಷದ ಹಿಂದೆ ಭೇಟಿ ಮಾಡಿದ್ದೆ. ಈಗ ಅವರೇ ನನ್ನ ಚಿತ್ರಕ್ಕೆ ವಿಲನ್. ಕಿಶೋರ್‌ ಕೂಡ ಚಿತ್ರದಲ್ಲಿ ಚೆನ್ನಾಗಿ ನಟಿಸಿದ್ದಾರೆ’ ಎಂದು ಹೇಳಿದರು.

ಆರ್‌. ದೇವರಾಜ್‌ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ‘ಹಣಕ್ಕಾಗಿ ಸಿನಿಮಾ ಮಾಡಿಲ್ಲ. ಜನರಿಗೆ ಸಿನಿಮಾದಲ್ಲಿ ಒಂದು ಬದಲಾವಣೆ ನೀಡಬೇಕಿದೆ. ಅದನ್ನು ನಾವು ನೀಡಿದ್ದೇವೆ ಅಷ್ಟೇ’ ಎಂದು ಹೇಳಿಕೊಂಡರು.

ನಟಿಯರಾದ ಸಾಯಿ ಧನ್ಸಿಕಾ, ಶ್ರದ್ಧಾ ದಾಸ್‌ ತಾರಾಗಣದಲ್ಲಿದ್ದಾರೆ. ಸಂಜೋಯ್‌ ಚೌಧರಿ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಪಿ. ರಾಜನ್‌ ಮತ್ತು ವಿಷ್ಣುವರ್ಧನ್‌ ಅವರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.