ಚಂದನವನದ ‘ರಿಯಲ್ ಸ್ಟಾರ್’ ಉಪೇಂದ್ರ ತಮ್ಮ ನಿರ್ದೇಶನದ ಹೊಸ ಚಿತ್ರ ‘UI’ ಸಿನಿಮಾದ ಟೀಸರ್ ಬಿಡುಗಡೆಮಾಡಿದ್ದಾರೆ.
ಉಪೇಂದ್ರ ಜನ್ಮದಿನದಂದೇ(ಸೆ.18) ‘UI’ ಟೀಸರ್ ಬಿಡುಗಡೆ ಮಾಡಲಾಗಿದ್ದು ಅಭಿಮಾನಿಗಳಿಂದ ಪ್ರಶಂಸೆ ವ್ಯಕ್ತವಾಗಿದೆ. ಟೀಸರ್ ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆ ಕಂಡಿದೆ.
ಟೀಸರ್ನಲ್ಲಿ ಯಾವುದೇ ದೃಶ್ಯಗಳನ್ನು ತೋರಿಸದೇ ಜನರ ತಲೆಗೆ ಹುಳು ಬಿಟ್ಟಿದ್ದಾರೆ. ಕೇವಲ ಒಂದಷ್ಟು ಡೈಲಾಗ್ಗಳು ಮತ್ತು ಶಬ್ದ ಮಾತ್ರ ಕೇಳಿಸುತ್ತದೆ. ಇದನ್ನು ಕೇಳಿಸಿಕೊಂಡು ಅಭಿಮಾನಿಗಳು ಕಥೆಯನ್ನು ಊಹಿಸಿಕೊಳ್ಳಬೇಕು ಎಂದು ಉಪೇಂದ್ರ ಹೇಳಿದ್ದಾರೆ.
ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್, ದುನಿಯಾ ವಿಜಯ್ ಕೂಡ ಹಾಜರಿದ್ದರು. ಟೀಸರ್ ಬಿಡುಗಡೆ ಬಳಿಕ ಮಾತನಾಡಿದ ಅವರು, ‘ಒಂದು ಸತ್ಯ ಹೇಳಿ ಬಿಡ್ತೀನಿ. ಚಿತ್ರದಲ್ಲಿ ಶೇ. 90 ಗ್ರಾಫಿಕ್ಸ್ ಇದೆ. ಬೇರೆ ಬೇರೆ ಕಡೆಗಳಲ್ಲಿ ಇದರ ಕೆಲಸ ನಡೆಯುತ್ತಿದೆ. ಅದು ಮುಗಿಯೋವರೆಗೂ ಏನನ್ನೂ ತೋರಿಸೋಕೆ ಆಗಲ್ಲ. ಈ ಮಧ್ಯೆ ಬರ್ತ್ಡೇ ಬಂತು. ಈ ಕಾರಣದಿಂದ ಅಭಿಮಾನಿಗಳ ತಲೆಗೆ ಕೆಲಸ ಕೊಡಲು ಈ ಟೀಸರ್ ರಿಲೀಸ್ ಮಾಡಿದ್ದೇನೆ’ ಎಂದಿದ್ದಾರೆ.
ಐದು ಭಾಷೆಗಳಲ್ಲಿ ಚಿತ್ರ ತೆರೆಗೆ ಬರುತ್ತಿದ್ದು, ಈ ವರ್ಷದ ಅಂತ್ಯಕ್ಕೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ. ಚಿತ್ರದಲ್ಲಿ ಹೆಚ್ಚಿನ ಗ್ರಾಫಿಕ್ಸ್ ಬಳಕೆ ಮಾಡಲಾಗಿದ್ದು, ಮತ್ತೊಮ್ಮೆ ನಿರ್ದೇಶನ ಮತ್ತು ನಟನೆಯಲ್ಲಿ ತಮ್ಮ ಕೈಚಳಕ ತೋರಿಸಲು ರಿಯಲ್ ಸ್ಟಾರ್ ಸಜ್ಜಾಗಿದ್ದಾರೆ.
ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ಟೈನರ್ಸ್ ಲಾಂಛನದಲ್ಲಿ ಜಿ.ಮನೋಹರನ್ ಹಾಗೂ ಕೆ.ಪಿ.ಶ್ರೀಕಾಂತ್ ಈ ಚಿತ್ರವನ್ನು ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ‘ತರ್ಲೆನನ್ಮಗ’ನಿಂದ ಹಿಡಿದು ‘ಶ್’, ‘ಓಂ’, ‘ಆಪರೇಷನ್ ಅಂತ’, ‘ಎ’, ‘ಸ್ವಸ್ತಿಕ್’, ‘ಉಪೇಂದ್ರ’, ‘ಸೂಪರ್’, ‘ಉಪ್ಪಿ–2’ ಹೀಗೆ ಸಾಲು ಸಾಲು ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದ ಉಪೇಂದ್ರ ಅವರು ಇದೀಗ ಎಂಟು ವರ್ಷಗಳ ನಂತರ ಮತ್ತೆ ನಿರ್ದೇಶಕನಾಗಿ ತೆರೆ ಮೇಲೆ ಬರಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.