‘ಕೈಥಿ’, ‘ಮಾಸ್ಟರ್’, ‘ವಿಕ್ರಮ್’, ‘ಲಿಯೋ’–ಹೀಗೆ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದ ಕಾಲಿವುಡ್ ನಿರ್ದೇಶಕ ಲೋಕೇಶ್ ಕನಕರಾಜ್ ನಿರ್ದೇಶನದ ಹೊಸ ಸಿನಿಮಾ ‘ಕೂಲಿ’ಯಲ್ಲಿ ನಟ ಉಪೇಂದ್ರ ‘ಕಲೀಶ’ ಎಂಬ ಪಾತ್ರದಲ್ಲಿ ನಟಿಸಲಿದ್ದಾರೆ.
ಸನ್ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿರುವ ಈ ಸಿನಿಮಾದಲ್ಲಿ ನಟ ರಜನಿಕಾಂತ್ ನಾಯಕರಾಗಿ ನಟಿಸುತ್ತಿದ್ದಾರೆ. ಇದು ರಜನಿಕಾಂತ್ ನಟನೆಯ 171ನೇ ಸಿನಿಮಾ. ಚಿತ್ರದ ಕಥೆಯೂ ಲೋಕೇಶ್ ಅವರದ್ದು. ಸತ್ಯರಾಜ್, ನಾಗಾರ್ಜುನ, ಶೃತಿಹಾಸನ್, ಮಲಯಾಳದ ಖ್ಯಾತ ನಟ ಸೌಬೀನ್ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸಲಿದ್ದಾರೆ. ‘ನನ್ನ ಗುರು, ನನ್ನ ಸೂಪರ್ಸ್ಟಾರ್ ರಜನಿ ಸರ್ ಜೊತೆ ಕೂಲಿ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದೇನೆ’ ಎಂದು ‘ಎಕ್ಸ್’ನಲ್ಲಿ ಉಪೇಂದ್ರ ಬರೆದುಕೊಂಡಿದ್ದಾರೆ. ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನಿರ್ದೇಶನವಿದೆ.
ಸದ್ಯ ಕನ್ನಡದಲ್ಲಿ ತಮ್ಮದೇ ನಿರ್ದೇಶನದ ‘ಯುಐ’ ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದ್ದಾರೆ ಉಪೇಂದ್ರ. ಅಕ್ಟೋಬರ್ನಲ್ಲಿ ಸಿನಿಮಾ ತೆರೆಕಾಣಲಿದ್ದು, ಚಿತ್ರತಂಡ ಬಿಡುಗಡೆ ದಿನಾಂಕವನ್ನು ಇನ್ನಷ್ಟೇ ಘೋಷಿಸಬೇಕಿದೆ. ‘ಎಚ್2ಒ’, ‘ಸನ್ ಆಫ್ ಸತ್ಯಮೂರ್ತಿ’ ಸಿನಿಮಾಗಳ ಮೂಲಕ ಈಗಾಗಲೇ ತಮಿಳು ಹಾಗೂ ತೆಲುಗು ಪ್ರೇಕ್ಷಕರಿಗೆ ಉಪೇಂದ್ರ ಪರಿಚಿತ. ಇದೀಗ ಸೂಪರ್ಸ್ಟಾರ್ ರಜನಿಕಾಂತ್ ಸಿನಿಮಾ ಮೂಲಕ ಮತ್ತೊಮ್ಮೆ ಪ್ಯಾನ್ ಇಂಡಿಯಾಗೆ ಉಪೇಂದ್ರ ಹೆಜ್ಜೆ ಇಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.