‘ಉಪ್ಪಿ–2’ ರಿಲೀಸ್ ಆದ 9 ವರ್ಷಗಳ ಬಳಿಕ ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ಆ್ಯಕ್ಷನ್ ಕಟ್ ಹೇಳಿರುವ ‘UI’ ಸಿನಿಮಾ ಮಾರ್ಚ್ ಅಂತ್ಯಕ್ಕೆ ಅಥವಾ ಏಪ್ರಿಲ್‌ನಲ್ಲಿ ತೆರೆಗೆ ಬರಲಿದೆ.
ಈಗಾಗಲೇ ಚಿತ್ರದ ಟೀಸರ್ ಹಾಗೂ ‘ಚೀಪ್’ ಹಾಡಿನ ತುಣುಕು ಬಿಡುಗಡೆಗೊಳಿಸಿರುವ ಉಪೇಂದ್ರ, ಸೋಮವಾರ(ಮಾರ್ಚ್ 4) ಚಿತ್ರದ ಮೊದಲ ಹಾಡನ್ನು ಬಿಡುಗಡೆಗೊಳಿಸಿದರು. ‘ಟ್ರೋಲ್ ಆಗುತ್ತೆ..ಇದು ಟ್ರೋಲ್ ಆಗುತ್ತೆ...ಇನ್‌ಸ್ಟಾದಲ್ಲಿ ತುಂಬಾ ರೀಲ್ಸ್ ಆಗುತ್ತೆ. ಕೆಲ್ಸ ಇಲ್ದೋರಿಗೆ ಟೈಂಪಾಸ್ ಆಗುತ್ತೆ...’ ಎನ್ನುವ ಈ ಹಾಡು ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಟ್ರೋಲ್‌ಗಳ ಜೊತೆಗೆ ಜನರನ್ನು ಕಾಡುತ್ತಿರುವ ಪ್ರಸ್ತುತ ಸಮಸ್ಯೆಗಳ ಬಗ್ಗೆಯೂ ಹಾಡಿನಲ್ಲಿ ದೃಶ್ಯಗಳು ಅಡಗಿವೆ. ಈ ಹಾಡಿಗೆ ನರೇಶ್ ಕುಮಾರ್ ಎಚ್.ಎನ್ ಸಾಹಿತ್ಯವಿದ್ದು, ಐಶ್ವರ್ಯ ರಂಗರಾಜನ್, ಹರ್ಷಿಕಾ ದೇವನಾಥ್, ಬಿ.ಅಜನೀಶ್ ಲೋಕನಾಥ್ ಹಾಗೂ ಅನೂಪ್ ಭಂಡಾರಿ ಹಾಡಿದ್ದಾರೆ. ಶಿವಕುಮಾರ್ ಜೆ.ಕಲಾನಿರ್ದೇಶನದಲ್ಲಿ ಹಾಡು ಮೂಡಿಬಂದಿದೆ.
‘ಇಂದಿನ ಪರಿಸ್ಥಿತಿ ಈ ಹಾಡಿಗೆ ಬೇಡಿಕೆ ಇಡುತ್ತಿತ್ತು. ಹೀರೊನೊಂದಿಗೆ ಪ್ರೀತಿಯಲ್ಲಿ ಬಿದ್ದು ತನ್ನದೇ ಲೋಕದಲ್ಲಿರುವ ನಾಯಕಿಗೆ ಸೂಕ್ತವಾಗುವಂತೆ, ಹಲವು ಟ್ರೋಲ್‌ಗಳನ್ನು ಬಳಸಿ ಈ ಹಾಡು ಮಾಡಲಾಗಿದೆ. ನಾನು ನರೇಶ್ ಜೊತೆಯಾಗಿ ಕೂತು ಈ ಹಾಡನ್ನು ಸಿದ್ಧಪಡಿಸಿದೆವು. ಇದು ಸುಲಭವಾಗಿರಲಿಲ್ಲ, ಪ್ರಸ್ತುತ ಇರುವ ಟ್ರೋಲ್‌ಗಳಿಂದಲೇ ಹಾಡು, ವಾಕ್ಯಗಳನ್ನು ತೆಗೆದು ಒಂದು ಕಥೆಯ ರೂಪದಲ್ಲಿ ಹಾಡು ಸಿದ್ಧಪಡಿಸಬೇಕಿತ್ತು. ಜನರೇ ಇಷ್ಟಪಟ್ಟಿರುವುದನ್ನು ಹಾಡಾಗಿ ಮಾಡಿದ್ದೇವೆ. ‘ಚೀಪ್..’ಸಾಂಗ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಸಿನಿಮಾವನ್ನು ಮಾರ್ಚ್ ಅಂತ್ಯಕ್ಕೆ ಅಥವಾ ಏಪ್ರಿಲ್‌ನಲ್ಲಿ ಬಿಡುಗಡೆಗೊಳಿಸಲಾಗುವುದು’ ಎಂದಿದ್ದಾರೆ ಉಪೇಂದ್ರ.
ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ಟೈನರ್ಸ್ ಲಾಂಛನದಲ್ಲಿ ಜಿ.ಮನೋಹರನ್ ಹಾಗೂ ಕೆ.ಪಿ.ಶ್ರೀಕಾಂತ್ ಈ ಚಿತ್ರವನ್ನು ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.