ಕನ್ನಡದ ನಟ, ನಿರ್ದೇಶಕ ಹಾಗೂ ರಾಜಕಾರಣಿ ಉಪೇಂದ್ರ ಅವರು ಸಿನಿಮಾ ಪುರವಣಿಯ ಸಂದರ್ಶನದಲ್ಲಿ ತಮ್ಮ ಮೂರು ದಶಕಗಳ ಸಿನಿಮಾ ಬದುಕಿನ ಬಗ್ಗೆ ಅನೇಕ ಸಂಗತಿಗಳನ್ನು ತೆರೆದಿಟ್ಟಿದ್ದಾರೆ. ಅಲ್ಲದೆ, ಅವರು ನಟಿಸಿರುವ ಬಹುನಿರೀಕ್ಷೆಯ ಸಿನಿಮಾ ‘ಐ ಲವ್ ಯು’ ಇದೇ 14ರಂದು ರಾಜ್ಯದಾದ್ಯಂತ ತೆರೆ ಕಾಣುತ್ತಿದೆ. ಈ ಸಿನಿಮಾ ಬಗ್ಗೆಯೂಅವರು ಇಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.
ರಾಜಕೀಯಕ್ಕೆ ಹೋದರು ಎನ್ನುವಾಗಲೇಸಿನಿಮಾಕ್ಕೆ ವಾಪಸ್ ಬಂದಿದ್ದೀರಿ?
ನನಗೆ ರಾಜಕೀಯದಲ್ಲಿ ಕೆಲಸ ಸಿಕ್ಕಿದ್ದರೆ ನಾನು ಸಿನಿಮಾಕ್ಕೆ ವಾಪಸ್ ಬರುತ್ತಿರಲಿಲ್ಲ. ಖಂಡಿತಾ ನಾನು ಈಗ ಸಿನಿಮಾ ಮಾಡಲೇಬೇಕು. ನನ್ನ ವೃತ್ತಿಗೆ ಮರಳಿದ್ದೇನೆ.ಮತ್ತೆ ಚುನಾವಣೆ ಬಂದಾಗ ರಾಜಕಾರಣಕ್ಕೆ ಇಳಿಯುತ್ತೇನೆ. ಎಲ್ಲರಿಗೂ ಒಂದು ಗುರಿ ಇರುವಂತೆ ನನಗೂ ಒಂದು ಗುರಿ ಇತ್ತು. ಅದೇ ‘ಪ್ರಜಾಕೀಯ’. ಆ ಗುರಿ ಸಾಧನೆಗೆ ಸಿನಿಮಾ ರಂಗವನ್ನು ಮಾಧ್ಯಮವಾಗಿ ಆಯ್ಕೆ ಮಾಡಿಕೊಂಡೆ ಅಷ್ಟೇ. ನನ್ನ ರಾಜಕೀಯ ಪರಿಕಲ್ಪನೆಗಳನ್ನು ‘ಆಪರೇಷನ್ ಅಂತ’, ‘ಸೂಪರ್’ ಸಿನಿಮಾಗಳಲ್ಲಿ ತೋರಿಸಿಯೂ ಇದ್ದೇನೆ.
‘ಐ ಲವ್ ಯು’ ಸಿನಿಮಾದಲ್ಲಿ ತುಂಬಾ ಎರಾಟಿಕ್ ದೃಶ್ಯ ಇದೆಯಂತೆ...
ಐ ಲವ್ ಯೂ ಎನ್ನುವುದು ಪಕ್ಕಾ ಒಳ್ಳೆಯ ಸಬ್ಜೆಕ್ಟ್ ಇರುವ ಸಿನಿಮಾ. ಅದರಲ್ಲಿ ಒಂದು ಸಾಂಗ್ ಸೀಕ್ವೆನ್ಸ್‌ನಲ್ಲಿ ಅಂತಹ ಅಭಿನಯದ ಅಗತ್ಯವಿತ್ತು. ಆ ರೀತಿ ಇಂಟಿಮೇಟ್ ಆಗಿರುವ ಹಾಡು ಅದು. ಚಿನ್ನಿಪ್ರಕಾಶ್ ಅದನ್ನು ನಿರ್ದೇಶಿಸಿದ್ದಾರೆ. ಟ್ರೇಲರ್ ತೋರಿಸಿದಾಗ ಬೇರೆ ರೀತಿ ಕಾಣಿಸುತ್ತದೆ. ಹಾಡನ್ನು ಹಾಡಾಗಿ ದೃಶ್ಯದ ಜತೆಗೆ ತೋರಿಸಿದಾಗ ಬೇರೆ ರೀತಿ ಕಾಣಿಸುತ್ತದೆ. ನಿರ್ದೇಶಕರು ಒಂದೆರಡು ದೃಶ್ಯದ ತುಣುಕುಗಳನ್ನು ಕತ್ತರಿಸಿ, ಟ್ರೇಲರ್ ಜತೆಗೆ ಬಳಸಿದ್ದಾರೆ. ಹಾಗಾಗಿ ಅದು ಬೇರೆ ರೀತಿ ಕಾಣಿಸುತ್ತಿದೆ. ಬೇರೆ ಬೇರೆ ರೀತಿಯಲ್ಲೂ ಚರ್ಚೆಯಾಗುತ್ತಿದೆ.
ನಿಮ್ಮ ಮಡದಿಯ ಅಸಮಾಧಾನಕ್ಕೂ ಅದು ಕಾರಣವಾಗಿದೆಯಂತೆ?
ಉಪೇಂದ್ರ ನಿರ್ದೇಶಕರಾಗಿ ಆ ಹಾಡಿನಲ್ಲಿ ತೊಡಗಿಸಿಕೊಂಡರೆಂದುರಚಿತಾ ರಾಮ್ ಹೇಳಿರುವ ಬಗ್ಗೆ ಪ್ರಿಯಾಂಕಾ ಪ್ರತಿಕ್ರಿಯಿಸಿದ್ದಾರೆ. ಬೇರೆಯವರ ಸಿನಿಮಾದಲ್ಲಿ ನೀವು ಏಕೆ ನಿರ್ದೇಶಕರಾಗಿ ತೊಡಗಿಸಿಕೊಳ್ಳುತ್ತೀರಿ ಎಂದು ನನ್ನನ್ನೂಪ್ರಿಯಾಂಕಾ ಕೇಳಿದರು. ‘ಇಲ್ಲಮ್ಮಾ ನಾನು ನಿರ್ದೇಶಕನಾಗಿ ಭಾಗಿಯಾಗಿಲ್ಲ. ನಿರ್ದೇಶಕರು ಮತ್ತು ಕೊರಿಯೊಗ್ರಾಫರ್ ಇದ್ದಾರೆ. ನಾನ್ಯಾಕೆ ಅದರಲ್ಲಿ ಭಾಗಿಯಾಗಲಿ. ನಾನೊಬ್ಬ ನಟನಾಗಿ ಅಭಿನಯಿಸುವಾಗ, ನಿರ್ದೇಶಕನಾಗಿ ಎಂದೂ ಭಾಗಿಯಾಗಿಲ್ಲ’ ಎನ್ನುವುದನ್ನು ಪ್ರಿಯಾಂಕಾಗೆ ಮನವರಿಕೆ ಮಾಡಿದ್ದೇನೆ.
ಆ ದೃಶ್ಯ ಚೆನ್ನಾಗಿಯೇ ಇದೆ. ಬ್ಯೂಟಿಫುಲ್ಲಾಗಿದೆ. ರಚಿತಾ ಅವರು ತುಂಬಾ ಬ್ಯೂಟಿಫುಲ್ಲಾಗಿ ಅದರಲ್ಲಿ ಕಾಣಿಸಿಕೊಂಡಿದ್ದಾರೆ. ರಚಿತಾ ಕೂಡ ಆ ಹಾಡನ್ನು ಎಂಜಾಯ್ ಮಾಡಿದ್ದಾರೆ. ಯಾರೋ ಹೇಳಿದ್ದಾರೆಂದು ಪ್ರೇಕ್ಷಕರು ತಲೆಕೆಡಿಸಿಕೊಳ್ಳಬಾರದು. ಎಲ್ಲರೂ ನೋಡುವಂತಹ ಕೌಟುಂಬಿಕ ಚಿತ್ರವಿದು.
ನಿರ್ದೇಶನಕ್ಕೆ ಮರಳುತ್ತಿರುವ ಬಗ್ಗೆ ಏನು ಹೇಳುತ್ತೀರಿ?
ನಾನು ಮತ್ತೆ ನಿರ್ದೇಶನ ಮಾಡಬೇಕೆನ್ನುವ ಬಗ್ಗೆ ಅಭಿಮಾನಿಗಳಿಂದ ತುಂಬಾ ಬೇಡಿಕೆ ಇದೆ. ನನಗೂ ತುಂಬಾ ಆಸಕ್ತಿಯೂ ಇದೆ. ಚಿತ್ರಕಥೆಯೂ ಸಿದ್ಧವಾಗಿದೆ. ತುಂಬಾ ವರ್ಷಗಳಿಂದ ಮಾಡಿಕೊಂಡಿರುವ ಚಿತ್ರಕಥೆಗಳಲ್ಲಿ ಒಂದನ್ನು ಅಂತಿಮಗೊಳಿಸಿದ್ದೇನೆ. ಒಂದು ಸಿನಿಮಾ ನಿರ್ದೇಶನಕ್ಕೆ ಇಳಿದರೆ, ಅದನ್ನು ಪೂರ್ಣಗೊಳಿಸಲು ನನಗೆ ಒಂದು ಅಥವಾ ಒಂದು ಒಂದೂವರೆ ವರ್ಷ ಬೇಕಾಗುತ್ತದೆ. ಇದರ ನಡುವೆ ಒಂದು ವೇಳೆ ಮಧ್ಯಂತರ ಚುನಾವಣೆ ಎದುರಾದರೆ ಅದಕ್ಕೂ ನಾನು ಸಿದ್ಧನಾಗಿರಬೇಕಾಗುತ್ತದೆ. ಹಾಗಾಗಿ ನಿರ್ದೇಶನಕ್ಕೆ ಇಳಿಯುವ ಬಗ್ಗೆ ಕಾದು ನೋಡುತ್ತಿದ್ದೇನೆ.
ಬುದ್ಧಿವಂತ–2 ಸಿನಿಮಾ ಬಗ್ಗೆ ಹೇಳಿ...
ಅದು ಕೂಡ ಒಳ್ಳೆಯ ಸಿನಿಮಾ. ತುಂಬಾ ಬುದ್ಧಿವಂತಿಕೆಯ ಸ್ಕ್ರಿಪ್ಟ್. ನಾಯಕನ ಬುದ್ಧಿವಂತಿಕೆ ಮೇಲೆ ನಡೆಯುವ ಚಿತ್ರಕಥೆ. ಬುದ್ಧಿವಂತ –2 ಟೈಟಲ್ ಚೆನ್ನಾಗಿರುತ್ತದೆ ಎಂದು ಅದನ್ನು ಆಯ್ಕೆ ಮಾಡಿದ್ದಾರೆ. ಚಿತ್ರೀಕರಣ ನಡೆಯುತ್ತಿದೆ. ಮೌರ್ಯ ನಿರ್ದೇಶನ ಮಾಡುತ್ತಿದ್ದು, ಟಿ.ಆರ್. ಚಂದ್ರಶೇಖರ್ ನಿರ್ಮಾಪಕರಾಗಿದ್ದಾರೆ.
ನೀವು ಸದಾ ಹೇಳುವ ಟ್ಯಾಗ್ ಲೈನ್‌ಗಳ ಬಗ್ಗೆ ಹೇಳಿ...
ಒಮ್ಮೆ ನಾನು ಹುಷಾರಿಲ್ಲದೇ ಮಲಗಿರುವಾಗ,ನನ್ನ ತಾಯಿ ಒಂದು ಸಂದೇಶ ಕಳುಹಿಸಿದ್ದರು. ಅದು ಎಷ್ಟು ಚೆನ್ನಾಗಿತ್ತೆಂದರೆ ‘ಮಲಗೇ ಇದ್ದರೆ ಸಾವು, ಕೂತೇ ಇದ್ದರೆ ರೋಗ, ನಡೆದಾಡುತ್ತಿದ್ದರೆ ಜೀವನ. ಎದ್ದು ಹೊರಡು’ ಎಂದಿತ್ತು. ನಾನು ಹೊಸದಾಗಿ ಏನನ್ನೂ ಹೇಳುತ್ತಿಲ್ಲ, ದೊಡ್ಡವರು, ಮಹಾತ್ಮರು ಹೇಳಿದ ಮಾತುಗಳನ್ನು ಮೆಲುಕು ಹಾಕುತ್ತಿರುತ್ತೇನೆ. ಎಲ್ಲೋ ಓದಿದ್ದು, ಕೇಳಿದ್ದನ್ನು ಎಷ್ಟು ಚೆನ್ನಾಗಿದೆ ಎಂದು ಉಲ್ಲೇಖಿಸುತ್ತೇನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.