ಚನ್ನಪಟ್ಟಣದ ಈ ಚೆಲುವ ಸಿನಿಮಾ ಮೋಹಿ. ಸಿನಿಮಾ ಪ್ಯಾಷನ್‌ಗೋಸ್ಕರವೇ ಪೊಲೀಸ್ ಕೆಲಸಕ್ಕೆ ಗುಡ್‌ಬೈ ಹೇಳಿದವರು. ಸಿನಿಮಾ ಮೇಲಿನ ಪ್ರೀತಿ, ನಟನಾಗಬೇಕೆಂಬ ಹಂಬಲದಿಂದ ಚಂದನವನ ಪ್ರವೇಶಿಸಿದ ರಾಜೀವ್ ಅವರಿಗೆ ಪೊಲೀಸ್ ಕೆಲಸ ಕಳೆದುಕೊಂಡಿದ್ದಕ್ಕೆ ಸ್ವಲ್ವವೂ ಬೇಜಾರು ಇಲ್ಲವಂತೆ. ‘ಉಸಿರೇ ಉಸಿರೇ’ ಚಿತ್ರವು ಸೆಟ್ಟೇರಿರುವ ಹಿನ್ನೆಲೆಯಲ್ಲಿ ಅವರ ಮನದ ಮಾತು.
ಕ್ರಿಕೆಟ್ ನಂಟು ಇದ್ದವರು ಸಿನಿಮಾ ಕ್ಷೇತ್ರಕ್ಕೆ ಇಳಿದದ್ದು ಹೇಗೆ?
ಹೌದು ನನ್ನ ಸಿನಿ ಪಯಣ ಕ್ರಿಕೆಟ್ ನೊಂದಿಗೆ ಸಖ್ಯ ಹೊಂದಿದೆ. 2008ರಲ್ಲಿ ದಾವಣಗೆರೆಯಲ್ಲಿ ನಡೆದ ರಾಜ್ ಕ್ರಿಕೆಟ್ ಕಪ್‌ಪಂದ್ಯದಲ್ಲಿ ಕಿಚ್ಚ ಸುದೀಪ್ ಅವರೊಂದಿಗೆ ಆಡಿದ್ದು ಸಿನಿಮಾ ನಂಟು ಬೆಳೆಯಲು ಕಾರಣವಾಯಿತು. ಸಿಸಿಎಲ್‌ನ ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿ ಪ್ರಭಾವಿ ಆಟಗಾರನೆಂದೇ ಹೆಸರಾಗಿದ್ದೆ. ಸುದೀಪ್ ಅವರೊಂದಿಗೂ ಕ್ರಿಕೆಟ್ ಆಡಿದ್ದೇನೆ. ನನ್ನ ಆಟವನ್ನು ಸುದೀಪ್ ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಕ್ರಿಕೆಟ್ ಮೂಲಕ ಪರಿಚಯವಾದ ನಿರ್ದೇಶಕ ನಂದಕಿಶೋರ್, ನಿರ್ಮಾಪಕ ಶಂಕರೇಗೌಡ ಸಿನಿಮಾದ ಗಾಡ್‌ಫಾದರ್‌ಗಳು.
ಪೊಲೀಸ್ ಸಮವಸ್ತ್ರ ಬಿಟ್ಟು ಬಣ್ಣ ಹಚ್ಚಲು ಕಾರಣ?
ಪೊಲೀಸ್ ಕುಟುಂಬದ ನನಗೆ ಪೊಲೀಸ್ ಉದ್ಯೋಗ ಅರಸಿ ಬಂದಿತ್ತು. ನಾನು ಪೊಲೀಸ್ ಇಲಾಖೆಯಲ್ಲಿ ಬೆರಳಚ್ಚು ತಜ್ಞ. ತುಂಬಾ ಒಳ್ಳೆಯ ಹುದ್ದೆಯಲ್ಲಿದ್ದೆ. ಆದರೆ, ಸಿನಿಮಾದವರ ನಂಟು ಹಾಗೆಯೇ ಇತ್ತು. ನಾನೊಮ್ಮೆ (2011) ವಿಶಾಖಪಟ್ಟಣದಲ್ಲಿ ನಡೆದ ಕ್ರಿಕೆಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಪತ್ರಿಕೆಯೊಂದರಲ್ಲಿ ಫೋಟೊ ಕೂಡ ಪ್ರಕಟವಾಯಿತು. ಇದನ್ನು ನೋಡಿದ ಮೇಲಾಧಿಕಾರಿ ನನ್ನನ್ನು ಮಂಗಳೂರಿಗೆ ವರ್ಗಾವಣೆ ಮಾಡಿದರು. ಕ್ರಿಕೆಟ್ ಮೇಲಿನ ಪ್ರೀತಿ, ಸಿನಿಮಾ ಹುಚ್ಚಿನಿಂದ ಕೆಲಸಕ್ಕೆ ರಾಜೀನಾಮೆ ನೀಡಿದೆ. ನಂತರ, ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದೆ. ಅದೂ ಬಹಳ ಕಾಲ ಮುಂದುವರಿಯಲಿಲ್ಲ. ನಂತರ ಹೋಟೆಲ್ ವ್ಯಾಪಾರ ಶುರು ಮಾಡಿ ಕಣ್ಣು ಬಿಡುವಷ್ಟರಲ್ಲಿ ಕೋವಿಡ್‌ನಿಂದ ಹೋಟೆಲ್‌ಗೆ ಬೀಗ ಬಿತ್ತು. ಆರ್ಥಿಕವಾಗಿ ದಿವಾಳಿಯೂ ಆದೆ. ಆದರೂ ಕನಸು ಬಿಡಲಿಲ್ಲ. ಈಗ ಇಲ್ಲಿಯವರೆಗೆ ಬಂದಿದ್ದೇನೆ.
ಬಿಗ್‌ಬಾಸ್ ಮನೆ ಬಗ್ಗೆ?
ಬಿಗ್‌ಬಾಸ್‌ಗೆ ಹೋಗುವ ಮುನ್ನ ಯಾವುದೇ ನಿರ್ದಿಷ್ಟ ಗೇಮ್ ಪ್ಲ್ಯಾನ್ ಅಥವಾ ಆಲೋಚನೆ ಹೊತ್ತುಕೊಂಡು ಹೋಗಿರಲಿಲ್ಲ. ಬಾಲ್ ಹೇಗೆ ಬರುತ್ತದೆಯೋ ಹಾಗೆ ಆಡುವುದು ಕ್ರಿಕೆಟಿಗನ ಕಾರ್ಯ ಅಲ್ವಾ. ಬಿಗ್‌ಬಾಸ್‌ನಲ್ಲಿಯೂ ಹಾಗೆಯೇ ಇದ್ದೆ. ಪರಿಸ್ಥಿತಿಗೆ ತಕ್ಕಂತೆ ವರ್ತನೆ ನನ್ನ ಮನೋಧರ್ಮ.
ಇದುವರೆಗಿನ ಚಿತ್ರಗಳು?
ನಾಯಕ ನಟನಾಗಿ ಅಭಿನಯಿಸಿದ ಮೊದಲ ಚಿತ್ರ ‘ಸ್ತ್ರೀಶಕ್ತಿ’. ‘ಗುಬ್ಬಿ’, ‘ಗೆಸ್ಟ್‌ಹೌಸ್’, ‘ಕೆಂಪೇಗೌಡ’, ‘ವರದನಾಯಕ’, ‘ಆರ್‌ಎಕ್ಸ್ ಸೂರಿ’, ‘ಅಮಾವಾಸ್ಯೆ’, ‘ಬೆಂಗಳೂರು–560023’ ಸಿನಿಮಾಗಳಲ್ಲಿ ನಟಿಸಿದ್ದೇನೆ. ಈಗ ‘ಉಸಿರೇ ಉಸಿರೇ’ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಆಗಿದೆ. ಕಿಚ್ಚ ಸುದೀಪ್ ಅವರ ಹುಚ್ಚ ಸಿನಿಮಾದ ‘ಉಸಿರೇ ಉಸಿರೇ’ ಹಾಡಿನ ಸಾಲು ಈ ಸಿನಿಮಾದ ಶೀರ್ಷಿಕೆ ಗೀತೆ. ಈ ಸಿನಿಮಾಕ್ಕೆ ಸುದೀಪ್ ಸಾಥ್ ನೀಡಿದ್ದಾರೆ.
ಉಸಿರೇ... ಚಿತ್ರವಾಗಿ ತೆರೆದುಕೊಂಡ ಬಗೆ ಹೇಗೆ?
ನಾನು ಸುದೀಪ್ ಅವರ ಜತೆ ಕಾರಿನಲ್ಲಿ ಬರುತ್ತಿದ್ದಾಗ, ಅವರ ನಟನೆಯ ಚಿತ್ರದ ‘ಉಸಿರೇ ಉಸಿರೇ’ ಹಾಡು ಕೇಳಿದ್ದೆ. ನನಗೆ ಈ ಚಿತ್ರದ ಬಗ್ಗೆ ಗೊತ್ತಿದ್ದರಿಂದ ನಿರ್ದೇಶಕರಿಗೆ ಫೋನ್ ಮಾಡಿ ಚಿತ್ರಕ್ಕೆ ಇದೇ ಶೀರ್ಷಿಕೆ ಇಡೋಣ. ಈಗಲೇ ನೋಂದಾಯಿಸಿ ಎಂದು ಹೇಳಿದೆ. ಚಿತ್ರಕ್ಕಾಗಿ ಹೆಚ್ಚು ವರ್ಕ್‌ಔಟ್ ಏನೂ ಮಾಡಿಲ್ಲ. ಸಹಜವಾಗಿರುವ ಪಾತ್ರ. ನಾಲ್ಕು ವರ್ಷಗಳ ಶ್ರಮಕ್ಕೆ ಈಗ ಉತ್ತಮ ಕಾಲ ಕೂಡಿ ಬಂದಿದೆ.
ಉಸಿರೇ...ಯ ತಿರುಳು ಏನು? ಸಾಮಾನ್ಯ ಪ್ರೇಮಕಥೆಯೇ?
ಹೌದು ಇದು ಪಕ್ಕಾ ಪ್ರೇಮಕಥೆ. ಇಲ್ಲಿಯವರೆಗೂ ಅನೇಕ ಪ್ರೇಮಕಥೆಯುಳ್ಳ ಚಿತ್ರಗಳು ಬಂದಿವೆಯಾದರೂ ಇದು ವಿಭಿನ್ನ. ಅಮರಪ್ರೇಮಿಗಳು ಎಂದರೆ ಎಲ್ಲರೂ ರೋಮಿಯೋ - ಜೂಲಿಯೆಟ್, ಸಲೀಂ - ಅನಾರ್ಕಲಿ ಅನ್ನುತ್ತಾರೆ. ಈ ಚಿತ್ರ ನೋಡಿದ ಮೇಲೆ ಪ್ರೇಕ್ಷಕರು ಕಥಾನಾಯಕ - ನಾಯಕಿಯನ್ನು ಈ ಸಾಲಿಗೆ ಸೇರಿಸಬಹುದು.
ರಾಜೀವ್ ವ್ಯಕ್ತಿತ್ವ ಹಾಗೂ ಕುಟುಂಬದ ಬಗ್ಗೆ?
ನಾನೊಬ್ಬ ಶಾಂತ ಸ್ವಭಾವದ ವ್ಯಕ್ತಿ. ಆದರೆ, ತಪ್ಪು ಮಾಡಿದವರನ್ನು ಕಂಡಾಗ ನನ್ನದು ದಂಡಂ ದಶಗುಣಂ ವ್ಯಕ್ತಿತ್ವ. ಏಕೆಂದರೆ, ಪೊಲೀಸ್ ಶೈಲಿ ನನ್ನ ವ್ಯಕ್ತಿತ್ವದಲ್ಲಿ ಬೆರೆತು ಹೋಗಿದೆ. ಪ್ರತಿದಿನ ವರ್ಕ್‌ಔಟ್ ಮಾಡುವುದು, ಅಡುಗೆ, ಇಷ್ಟವಾದ ಚಿಕನ್ ಚಪ್ಪರಿಸುವುದು ನನಗಿಷ್ಟ. ರೇಷ್ಮಾ ಅವರನ್ನು ಪ್ರೀತಿಸಿ ಮದುವೆಯಾದೆ. ಮೂಲತಃ ಚನ್ನಪಟ್ಟಣದವರಾದ ನನ್ನ ತಂದೆ ಹನುಮಂತಯ್ಯ ನಿವೃತ್ತ ಪೊಲೀಸ್ ಇನ್‌ಸ್ಪೆಕ್ಟರ್, ತಾಯಿ ಅನಸೂಯಾ ಶಿಕ್ಷಕಿ ಆಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.