ADVERTISEMENT

ವೈಜನಾಥ್ ಬಿರಾದಾರ್ ಈಗ ಐನೂರು ಸಿನಿಮಾಗಳ ಸರದಾರ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 6:31 IST
Last Updated 30 ಸೆಪ್ಟೆಂಬರ್ 2020, 6:31 IST
‘90 ಹೊಡಿ ಮನೀಗ್ ನಡಿ’ ಸಿನಿಮಾದಲ್ಲಿ ವೈಜನಾಥ್ ಬಿರಾದಾರ್
‘90 ಹೊಡಿ ಮನೀಗ್ ನಡಿ’ ಸಿನಿಮಾದಲ್ಲಿ ವೈಜನಾಥ್ ಬಿರಾದಾರ್   

ಭಿಕ್ಷುಕ, ಕುಡುಕನಂತಹ ಸಣ್ಣಪುಟ್ಟ ಪಾತ್ರಗಳಿಗಷ್ಟೇ ಸೀಮಿತರಾಗಿದ್ದ ನಟ ವೈಜನಾಥ್‌ ಬಿರಾದಾರ್‌ ಅವರಿಗೆ ಅಂತರರಾಷ್ಟ್ರೀಯಮಟ್ಟದ ಇಮೇಜ್‌ ತಂದುಕೊಟ್ಟಿದ್ದು ‘ಕನಸೆಂಬೋ ಕುದುರೆಯನೇರಿ’ ಚಿತ್ರ. 2010ರಲ್ಲಿ ತೆರೆಕಂಡ ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದು ಗಿರೀಶ ಕಾಸರವಳ್ಳಿ.

ಎಂಬತ್ತರ ದಶಕದಲ್ಲಿ ಹೆಗಲ ಮೇಲೆ ಸಿನಿಮಾದಲ್ಲಿ ನಟಿಸಬೇಕೆಂಬ ಕನಸಿನ ಮೂಟೆ ಹೊತ್ತುಕೊಂಡು ಬೀದರ್‌ನಿಂದ ಬೆಂಗಳೂರಿಗೆ ಬಸ್‌ ಹತ್ತಿದವರು ಬಿರಾದಾರ್. ವೃತ್ತಿಬದುಕಿನಲ್ಲಿ ಅವರು ಸಾಕಷ್ಟು ಏರಿಳಿತ ಕಂಡಿದ್ದಾರೆ. ಈಗ ಉಮೇಶ್ ಬಾದರದಿನ್ನಿ‌ ಮತ್ತು ನಾಗರಾಜ್ ಅರೆಹೊಳೆ ಜಂಟಿಯಾಗಿ ನಿರ್ದೇಶಿಸುತ್ತಿರುವ ‘90 ಹೊಡಿ ಮನೀಗ್ ನಡಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಂದಹಾಗೆ ಇದು ಬಿರಾದಾರ್‌ ನಟನೆಯ 500ನೇ ಸಿನಿಮಾ. ಮದ್ಯಪಾನದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಸಂದೇಶ ಹೇಳುವುದೇ ಇದರ ಕಥಾಹಂದರ.

ಚಿತ್ರದ ಕಥೆ ಹಾಗೂ ಸಂಭಾಷಣೆ ಬರೆದಿರುವುದು ಉಮೇಶ್ ಬಾದರದಿನ್ನಿ. ಚಿತ್ರಕಥೆಯ ಜವಾಬ್ದಾರಿಯನ್ನು ಇಬ್ಬರೂ ನಿಭಾಯಿಸಿದ್ದಾರೆ. ಈ ಹಿಂದೆ ‘ಬಿಡಲಾರೆ ಎಂದೂ ನಿನ್ನ’ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದ ಉಮೇಶ ಬಾದರದಿನ್ನಿಗೆ ಇದು ದ್ವಿತೀಯ ಚಿತ್ರ. ‘ಹಾರೋ ಹಕ್ಕಿ’ ಮತ್ತು ‘ಕೀಟ್ಲೆ ಕೃಷ್ಣ’ ಎಂಬ ಮಕ್ಕಳ ಸಿನಿಮಾ ನಿರ್ದೇಶಿಸಿರುವ ಅನುಭವ ನಾಗರಾಜ್ ಅರೆಹೊಳೆ ಅವರ ಬೆನ್ನಿಗಿದೆ.

ADVERTISEMENT

ಬಾಗಲಕೋಟೆ ಸುತ್ತಮುತ್ತ ಚಿತ್ರದ ಅರ್ಧದಷ್ಟು ಶೂಟಿಂಗ್‌ ಪೂರ್ಣಗೊಳಿಸಿರುವ ಚಿತ್ರತಂಡ, ಬೆಂಗಳೂರು ಮತ್ತು ಬಿಡದಿ ಸುತ್ತಮುತ್ತ ಮುಂದಿನ ಹಂತದ ಶೂಟಿಂಗ್‌ ನಡೆಸಲು ಸಿದ್ಧತೆ ನಡೆಸಿದೆ.

ವಿ. ನಾಗೇಂದ್ರಪ್ರಸಾದ್ ಮತ್ತು ಶಿವು ಭೇರಗಿ ಅವರ ಸಾಹಿತ್ಯವಿದೆ. ಚಿತ್ರದ ಮೂರು ಹಾಡುಗಳಿಗೆ ಕಿರಣ್ ಶಂಕರ್-ಶಿವು ಭೇರಗಿ ಸಂಗೀತ ನೀಡಿದ್ದಾರೆ. ಅಮ್ಮ ಟಾಕೀಸ್ ಬಾಗಲಕೋಟೆ ಸಂಸ್ಥೆ ಲಾಂಛನದಡಿ ರತ್ನಮಾಲ ಬಾದರದಿನ್ನಿ ಇದಕ್ಕೆ ಬಂಡವಾಳ ಹೂಡಿದ್ದಾರೆ.

ಛಾಯಾಗ್ರಹಣ ಕೃಷ್ಣ ನಾಯ್ಕರ್ ಅವರದ್ದು. ವೆಂಕಿ ಯುಡಿವಿ ಸಂಕಲನ ನಿರ್ವಹಿಸಿದ್ದಾರೆ. ರಾಜಾರಮೇಶ್ ಅವರ ಸಾಹಸ ನಿರ್ದೇಶನವಿದೆ. ಭೂಷಣ್ ನೃತ್ಯ ನಿರ್ದೇಶಿಸಿದ್ದಾರೆ. ಕರಿಸುಬ್ಬು, ಧರ್ಮ, ನೀತು, ಪೂಜಾ, ಅಭಯ್ ವೀರ್, ಪ್ರಶಾಂತ್ ಸಿದ್ಧಿ, ಆರ್.ಡಿ. ಬಾಬು, ವಿವೇಕ್ ಜಂಬಗಿ ತಾರಾಗಣದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.