ಕೋರಮಂಗಲದ ‘ಬದ್ಮಾಷ್’ ಎಂಬ ಪಬ್‌ನಲ್ಲಿ ಕನ್ನಡ ಹಾಡನ್ನು ಹಾಕುವ ವಿಚಾರವಾಗಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಗಾಯಕ, ಸಂಗೀತ ನಿರ್ದೇಶಕ ವಾಸುಕಿ ವೈಭವ್, ‘ಇದು ಪ್ರಶ್ನಿಸುವ ಸಮಯ, ಮನವಿ ಸಲ್ಲಿಸುವ ಸಮಯವಲ್ಲ’ ಎಂದಿದ್ದಾರೆ.
ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಅಪ್‌ಲೋಡ್ ಮಾಡಿರುವ ವಾಸುಕಿ ವೈಭವ್, ‘ಇದು ಕನ್ನಡದ ಅಸ್ತಿತ್ವ, ಅಭಿಮಾನದ ಪ್ರಶ್ನೆ. ಜೊತೆಗೆ ಮಾನವೀಯತೆಯ ಪ್ರಶ್ನೆಯೂ ಹೌದು. ಪಬ್‌ಗಳಲ್ಲಿ ಹಾಗೂ ಪಾರ್ಟಿ ನಡೆಯುತ್ತಿರುವ ಸ್ಥಳಗಳಲ್ಲಿ ಕನ್ನಡ ಹಾಡುಗಳನ್ನು ಯಾಕೆ ಹಾಕುತ್ತಿಲ್ಲ ಎನ್ನುವುದನ್ನು ಕನ್ನಡದ ಅಭಿಮಾನಿಯಾಗಿ ಜೊತೆಗೆ ಕನ್ನಡ ಚಿತ್ರರಂಗದ ಸಂಗೀತ ವಿಭಾಗದಲ್ಲಿ ಕೆಲಸ ಮಾಡುವವನಾಗಿಯೂ ಕೇಳುತ್ತಿದ್ದೇನೆ. ಕನ್ನಡ ಹಾಡುಗಳನ್ನು ಹಾಕುವುದು ಅವಮಾನವೇ? ಕನ್ನಡ ಹಾಡುಗಳನ್ನು ಹಾಕುವುದರಿಂದ ಪಬ್‌ಗಳ ಫ್ಯಾಷನ್ ಕಡಿಮೆಯಾಗುತ್ತದೆಯೇ? ಕನ್ನಡ ಹಾಡುಗಳನ್ನು ಹಾಕಿದರೆ ಜನರು ಆನಂದಿಸುವುದಿಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.
‘ಇದು ನಿಜವಾಗಿಯೂ ಅರ್ಥ ಆಗದೇ ಇರುವ ವಿಷಯ. ಕನ್ನಡ ಹಾಡುಗಳನ್ನು ಹಾಕಿ ಎಂದು ಮನವಿ ಸಲ್ಲಿಸುತ್ತಿದ್ದೇವೆ ಎನ್ನುವುದನ್ನೇ ಕೇಳಲು ಬೇಸರವಾಗುತ್ತದೆ. ನಮಗೆ ಯಾವುದೇ ಭಾಷೆಗಳ ಮೇಲೆ ವಿರೋಧವಿಲ್ಲ. ನಾವು ಯಾರನ್ನೂ ದ್ವೇಷಿಸಿಲ್ಲ. ಎಲ್ಲ ಭಾಷೆಯ ಹಾಡುಗಳನ್ನು ಕೇಳಿ ನಾವು ಆನಂದಿಸುತ್ತೇವೆ. ಹೀಗಿರುವಾಗ ನಮ್ಮ ಹಾಡುಗಳನ್ನು ಹಾಕಿ ಎಂದು ಕೇಳುವುದು ತಪ್ಪೇ? ನಮ್ಮ ಅಸ್ತಿತ್ವಕ್ಕೇ ನಾವಿಷ್ಟು ಹೋರಾಡಬೇಕೇ ಎನ್ನುವುದನ್ನು ಕೇಳುವಾಗಲೇ ಬೇಸರವಾಗುತ್ತದೆ. ಇದೇ ಘಟನೆ ಮಹಾರಾಷ್ಟ್ರ, ತಮಿಳುನಾಡು ಅಥವಾ ಆಂಧ್ರದಲ್ಲಿ ನಡೆದಿದ್ದರೆ ಜನ ಸುಮ್ಮನಿರುತ್ತಿದ್ದರೇ? ಹಲ್ಲೆಗೊಳಗಾದವರ ಜೊತೆ ಮಾತನಾಡಿ ಎಲ್ಲ ವಿಷಯಗಳನ್ನು ತಿಳಿದುಕೊಂಡೇ ಈ ವಿಡಿಯೊ ಮಾಡಿದ್ದೇನೆ. ಕನ್ನಡದ ವಿಷಯವನ್ನು ಹೊರತುಪಡಿಸಿ, ಒಂದು ಮಾನವೀಯ ದೃಷ್ಟಿಯಿಂದ ನೋಡಿದಾಗಲೂ ಈ ಘಟನೆ ಖಂಡನೀಯ. ಮುಂದೆ ಪಬ್‌ಗಳಲ್ಲಿ ಈ ರೀತಿ ಮನವಿ ಸಲ್ಲಿಸುವ ಪರಿಸ್ಥಿತಿ ಬರದೇ ಇರಲಿ. ದೊಡ್ಡ ಆಂದೋಲನ, ಪ್ರತಿಭಟನೆ ಮಾಡುವ ಉದ್ದೇಶ ನನ್ನದಲ್ಲ. ಇದು ಪ್ರಶ್ನಿಸುವ ಸಮಯ, ಮನವಿ ಸಲ್ಲಿಸುವ ಸಮಯವಲ್ಲ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.