ಹುಬ್ಬಳ್ಳಿ: ನಟ ಶಿವರಾಜ್‌ಕುಮಾರ್ ಅಭಿನಯದ ‘ವೇದ’ ಸಿನಿಮಾದ ಟ್ರೇಲರ್ ಅನ್ನು ಅಪಾರ ಅಭಿಮಾನಿಗಳ ಹರ್ಷೋದ್ಗಾರದ ನಡುವೆ, ನಗರದ ರೈಲ್ವೆ ಮೈದಾನದ ವರ್ಣರಂಜಿತ ವೇದಿಕೆಯಲ್ಲಿ ಬುಧವಾರ ರಾತ್ರಿ ಬಿಡುಗಡೆ ಮಾಡಲಾಯಿತು. ನೆಚ್ಚಿನ ನಟನನ್ನು ಅಭಿಮಾನಿಗಳು ಹೂಮಳೆಗರೆದು ಬರಮಾಡಿಕೊಂಡರು, ಶಿವಣ್ಣನ ಹಾಡಿಗೆ ಜನರ ಚಪ್ಪಾಳೆ ಹಾಗೂ ಶಿಳ್ಳೆ ಮುಗಿಲು ಮುಟ್ಟಿತು.
‘ಟಗರು’ ಸಿನಿಮಾದ ಹಾಡಿಗೆ ಶಿವಣ್ಣ ಹೆಜ್ಜೆ ಹಾಕುತ್ತಿದ್ದಂತೆ, ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ‘ನೀನ್ಯಾರೋ ನಾನ್ಯಾರೋ' ಮತ್ತು ವೇದ ಸಿನಿಮಾದ ‘ಪುಷ್ಪ’ ಗೀತೆಗಳನ್ನು ಹಾಡಿದರು. ಶಿವಣ್ಣನ ಆಟೋಗ್ರಾಫ್ ಮತ್ತು ಸೆಲ್ಫಿಗಾಗಿ ವೇದಿಕೆಯಲ್ಲಿ ಹಲವರು ಮುಗಿಬಿದ್ದರು.
ನಂತರ ಮಾತನಾಡಿದ ಶಿವರಾಜ್‌ಕುಮಾರ್, ‘ನಮ್ಮ ಕುಟುಂಬಕ್ಕೆ ಹುಬ್ಬಳ್ಳಿ ಮೇಲೆ ವಿಶೇಷ ಪ್ರೀತಿ. ಅಪ್ಪಾಜಿ ಕಾಲದಿಂದಲೂ ಇಲ್ಲಿನ ಸಿದ್ಧಾರೂಢಸ್ವಾಮಿ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆಯುತ್ತೇವೆ. ಅವರ ‘ಆಕಸ್ಮಿಕ’, ನನ್ನ ‘ಶ್ರೀರಾಮ್’, ‘ಮೈಲಾರಿ’ ಸಿನಿಮಾಗಳನ್ನು ಹುಬ್ಬಳ್ಳಿ ಮತ್ತು ಸುತ್ತಮುತ್ತ ಚಿತ್ರೀಕರಿಸಲಾಗಿತ್ತು’ ಎಂದು ನೆನೆದರು.
ಸಿನಿಮಾದ ನಿರ್ಮಾಪಕಿಯೂ ಆಗಿರುವ ಗೀತಾ ಶಿವರಾಜ್‌ಕುಮಾರ್ ಮಾತನಾಡಿ, ‘ಇದು ನಮ್ಮ ಪ್ರೊಡಕ್ಷನ್‌ನ ಮೊದಲ ಸಿನಿಮಾ. ಇದೇ 23ರಂದು ಸಿನಿಮಾ ಬಿಡುಗಡೆ ಆಗಲಿದೆ. ಅಭಿಮಾನಿಗಳು ಈ ಸಿನಿಮಾ ನೋಡಿ ಹಾರೈಸಬೇಕು’ ಎಂದು ಮನವಿ ಮಾಡಿದರು.
ನಿರ್ದೇಶಕ ಎ. ಹರ್ಷ, ‘ಶಿವಣ್ಣ ಅವರನ್ನು ನೋಡಬೇಕು ಎಂದು ಕನಸು ಕಂಡಿದ್ದವನಿಗೆ ಅವರ ನಾಲ್ಕು ಸಿನಿಮಾ ನಿರ್ದೇಶನ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ಅಭಿಮಾನಿಗಳು ವೇದ ಸಿನಿಮಾವನ್ನು ಗೆಲ್ಲಿಸಬೇಕು’ ಎಂದರು.
ಮಾಜಿ ಶಾಸಕ ಸಂತೋಷ್ ಲಾಡ್ ಮಾತನಾಡಿ, ‘ಒಟಿಟಿ ಬಂದ ಮೇಲೆ ಸಿನಿಮಾ ಟಿಕೆಟ್‌ಗಳ ಮಾರಾಟ ಕಡಿಮೆ ಆಗಿದೆ. ದೇಶದಲ್ಲಿ 8,700 ಚಿತ್ರಮಂದಿರಗಳಿದ್ದರೆ ಚೀನಾದಲ್ಲಿ 80 ಸಾವಿರ ಇವೆ. ಸಿನಿಮಾಗಳನ್ನು ಪ್ರೋತ್ಸಾಹಿಸಲು ಸರ್ಕಾರದಿಂದಲೇ ತಾಲ್ಲೂಕಿಗೊಂದು ಚಿತ್ರಮಂದಿರಗಳನ್ನು ನಿರ್ಮಿಸಬೇಕು’ ಎಂದು ಒತ್ತಾಯಿಸಿದರು.
ಸಿನಿಮಾದ ನಾಯಕ ನಟಿ ಗಾನವಿ ಮಾತನಾಡಿ, ‘ವೇದ ಗಟ್ಟಿ ಕತೆ ಇರುವ ಸಿನಿಮಾ. ಇದರಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿದ್ದು ನನ್ನ ಹೆಮ್ಮೆ’ ಎಂದು ಹೇಳಿದರು.
ನಟಿ ಅದಿತಿ ಸಾಗರ್, ಖಳನಟ ಚೆಲುವರಾಜ್, ಝಿ ಸ್ಟುಡಿಯೊಸ್‌ನ ಲಕ್ಷ್ಮಿ, ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಕುಮಾರ್, ಚಿ.ಗುರುದತ್, ರಾಜೇಶ್ ಭಟ್, ಲಕ್ಷ್ಮಣ್, ಶಿವರಾಜ್‌ಕುಮಾರ್ ಪುತ್ರಿ ನಿವೇದಿತಾ ಇದ್ದರು.
ರಾಜವಂಶ ಅಭಿಮಾನಿಗಳ ಬಳಗದ ಅಧ್ಯಕ್ಷ ರಘು ವದ್ದಿ ಅವರನ್ನು ಶಿವರಾಜ್‌ಕುಮಾರ್ ಸನ್ಮಾನಿಸಿದರು. ಡಾ. ರಾಜ್‌ಕುಮಾರ್ ಅಭಿಮಾನಿಗಳ ಬಳಗದ ಅಧ್ಯಕ್ಷ ಶಿವಾನಂದ ಮುತ್ತಣ್ಣವರ ಅವರು, ಶಿವಣ್ಣನಿಗೆ ಬೆಳ್ಳಿ ಗದೆ ನೀಡಿದರು. ಅಭಿಮಾನಿಗಳು ಬೃಹತ್ ಹಾರ ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.