ಮುಂಬೈ: ಹಿಂದಿ ಚಿತ್ರರಂಗದ ಖ್ಯಾತ ನಟ ದಿಲೀಪ್ ಕುಮಾರ್ (98) ಬುಧವಾರ ನಿಧನರಾದರು.
ದಿಲೀಪ್ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಅವರನ್ನು ಮುಂಬೈನ ಪಿ.ಡಿ.ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅವರ ಉಸಿರಾಟ ಸಂಬಂಧಿತ ತೊಂದರೆಗಳಿಗೆ ಪಿಡಿ ಹಿಂದುಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದ ಶ್ವಾಸಕೋಶತಜ್ಞ ಡಾ.ಜಲಿಲ್ ಪಾರ್ಕರ್ ಅವರು ನಟನ ಸಾವಿನ ಕುರಿತು ಖಚಿತ ಪಡಿಸಿರುವುದಾಗಿ ಎಎನ್‌ಐ ಟ್ವೀಟಿಸಿದೆ.
ಸಾವಿನ ಕುರಿತು ದಿಲೀಪ್ ಅವರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಲಾಗಿದೆ. 'ದೇವರಿಂದಲೇ ಬಂದವರು ನಾವು ಹಾಗೂ ಅವರಲ್ಲಿಯೇ ಮರಳುವೆವು ನಾವು' ಎಂದು ದಿಲೀಪ್ ಕುಮಾರ್ ಅವರ ಕುಟುಂಬದ ಆಪ್ತ ಫೈಸಲ್ ಫಾರೂಕಿ ಪ್ರಕಟಿಸಿದ್ದಾರೆ.
ಉಸಿರಾಟದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಜೂನ್ 30ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದಕ್ಕೂ ಮುನ್ನ ಜೂನ್ 6ರಂದು ಶ್ವಾಸಕೋಶ ಸಂಬಂಧಿತ ಸಮಸ್ಯೆಯಿಂದಲೇ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು.
ಮುಂಬೈನ ಸಾಂತಾಕ್ರೂಸ್‌ನಲ್ಲಿ ಇಂದು ಸಂಜೆ 5 ಗಂಟೆಗೆ ದಿಲೀಪ್ ಕುಮಾರ್ ಅವರ ಅಂತ್ಯ ಸಂಸ್ಕಾರ ನಡೆಯಲಿದೆ.
ಪೇಶಾವರದಲ್ಲಿ 1922ರ ಡಿಸೆಂಬರ್ 11ರಂದು ಜನಿಸಿದ ಮೊಹಮ್ಮದ್ ಯೂಸುಫ್ ಖಾನ್ (ದಿಲೀಪ್ ಕುಮಾರ್), ನಂತರದಲ್ಲಿ ಮುಂಬೈಗೆ ಸ್ಥಳಾಂತರಗೊಂಡರು. ಅವರ ಕುಟುಂಬದ ಸದಸ್ಯರು ಹಣ್ಣುಗಳ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು.
ಅವರಿಗೆ ಪದ್ಮಭೂಷಣ, ಪದ್ಮವಿಭೂಷಣ ಹಾಗೂ ದಾದಾಸಾಹೇಬ್ ಫಾಲ್ಕೆ ಗೌರವಗಳು ಸಂದಿವೆ. ಅವರು ರಾಜ್ಯಸಭೆಯ ಸದಸ್ಯರೂ ಆಗಿದ್ದರು.
ಬ್ಯೂಟಿ ಕ್ವೀನ್ ಎಂದೇ ಹೆಸರಾಗಿದ್ದ ನಟಿ ಸಾಯಿರಾ ಬಾನು ಅವರನ್ನು ದಿಲೀಪ್ ಕುಮಾರ್ 1966ರಲ್ಲಿ ವಿವಾಹವಾದರು.
ದಿಲೀಪ್ ಕುಮಾರ್ ಎಂದು ಕರೆಸಿಕೊಂಡ ಮೊಹಮ್ಮದ್ ಯೂಸುಫ್ ಖಾನ್, ಜ್ವಾರ್ ಭಾಟಾ (1944) ಸಿನಿಮಾ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು. ಸುಮಾರು ಐದು ದಶಕಗಳ ಸಿನಿಮಾ ಪಯಣದಲ್ಲಿ ದಿಲೀಪ್ 65 ಸಿನಿಮಾಗಳಲ್ಲಿ ನಟಿಸಿದರು. ಅಂದಾಜ್ (1949), ಆನ್ (1952), ದಾಗ್ (1952), ದೇವ್‌ದಾಸ್ (1955), ಆಜಾದ್ (1955) ಹಾಗೂ ಐತಿಹಾಸಿಕ ಚಿತ್ರ ಮುಘಲ್–ಎ–ಅಜಮ್ (1960), ಗಂಗಾ ಜಮುನಾ (1961), ರಾಮ್ ಔರ್ ಶ್ಯಾಮ್ (1967) ದಿಲೀಪ್ ಅವರ ಪ್ರಮುಖ ಸಿನಿಮಾಗಳು.
1981ರಲ್ಲಿ ಕ್ರಾಂತಿ ಚಿತ್ರದ ಮೂಲಕ ಮತ್ತೆ ದಿಲೀಪ್ ಕುಮಾರ್ ದೊಡ್ಡ ಪರದೆಯ ಮೇಲೆ ಕಾಣಿಸಿಕೊಂಡರು. ಅನಂತರ ಶಕ್ತಿ (1982), ವಿಧಾತ (1982), ಮಶಾಲ್ (1984), ಕರ್ಮ (1986) ಹಾಗೂ 1991ರಲ್ಲಿ ರಾಜ್ ಕುಮಾರ್ ಜೊತೆಗೆ ನಟಿಸಿದ ಸೌದಾಗರ್ ಯಶಸ್ವಿ ಸಿನಿಮಾಗಳ ಸಾಲಿನಲ್ಲಿವೆ.
ಪ್ರಧಾನಿ ನರೇಂದ್ರ ಮೋದಿ, ನಟ ಅಮಿತಾಬ್ ಬಚ್ಚನ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿ ಟ್ವೀಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.