ನವದೆಹಲಿ: ಸಿನಿಮಾ ಕ್ಷೇತ್ರಕ್ಕೆ ಅಭೂತಪೂರ್ವ ಕೊಡುಗೆ ನೀಡಿದ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ(74) ಅವರು ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿಗೆ ಆಯ್ಕೆಯಾಗಿರುವುದಾಗಿ ಕೇಂದ್ರ ಸರ್ಕಾರ ಸೋಮವಾರ ಘೋಷಿಸಿದೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್, ‘ಸಿನಿಮಾ ಕ್ಷೇತ್ರಕ್ಕೆ ಮಿಥುನ್ ಅವರು ನೀಡಿರುವ ಕೊಡುಗೆ ಮುಂದಿನ ತಲೆಮಾರಿಗೆ ಸ್ಪೂರ್ತಿಯಾಗಿದೆ. ಭಾರತೀಯ ಚಿತ್ರರಂಗಕ್ಕೆ ಅವರು ನೀಡಿದ ಅಪ್ರತಿಮ ಕೊಡುಗೆಗಾಗಿ ದಾದಾಸಾಹೇಬ್ ಫಾಲ್ಕೆ ಆಯ್ಕೆ ತೀರ್ಪುಗಾರರು ಅವರ ಹೆಸರನ್ನು ಆಯ್ಕೆ ಮಾಡಿದ್ದು, ಸಂತಸದ ವಿಷಯ’ ಎಂದು ಬರೆದುಕೊಂಡಿದ್ದಾರೆ.
ಅ. 8 ರಂದು ನಡೆಯುವ 70 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಮಿಥುನ್ ಚಕ್ರವರ್ತಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವೈಷ್ಣವ್ ಹೇಳಿದ್ದಾರೆ.
1976ರಲ್ಲಿ ಮೃಣಾಲ್ ಸೇನ್ ಅವರ ‘ಮೃಗಯಾ’ ಚಿತ್ರದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಮಿಥುನ್ ಪದಾರ್ಪಣೆ ಮಾಡಿದ್ದರು. ಈ ಚಿತ್ರದಲ್ಲಿನ ಅತ್ಯುತ್ತಮ ನಟನೆಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೂ ಭಾಜನರಾಗಿದ್ದರು.
‘ಸುರಕ್ಷಾ’, ‘ಡಿಸ್ಕೊ ಡ್ಯಾನ್ಸರ್’, ‘ಕಮಾಂಡೋ’, ‘ಕಸಂ ಪೈಡಾ ಕರ್ನೆ ವಾಲೆ ಕಿ’ ಸೇರಿದಂತೆ 350ಕ್ಕೂ ಹೆಚ್ಚು ಚಿತ್ರಗಳಲ್ಲಿ ಮಿಥುನ್ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.