ನೆರಳು–ಬೆಳಕಿನಲ್ಲೇ ಭಾವನೆಗಳನ್ನು ಅಭಿವ್ಯಕ್ತಗೊಳಿಸುತ್ತಾ ಕಪ್ಪು–ಬಿಳುಪು ಸಿನಿಮಾಗಳನ್ನು ಗೆಲ್ಲಿಸಿದವರು. ದ್ವಿಪಾತ್ರ ಅಭಿನಯದ ದೃಶ್ಯಗಳನ್ನು ಕ್ರಿಯಾಶೀಲವಾಗಿ ಸೆರೆ ಹಿಡಿದು ಪ್ರೇಕ್ಷಕರ ಮನ ಗೆದ್ದವರು. ‘ಟ್ರಿಕ್ಸ್ ಛಾಯಾಗ್ರಹಣ’ದಂತಹ ವಿಶೇಷ ಕೌಶಲಗಳಿಂದಲೇ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದವರು ಖ್ಯಾತ ಸಿನಿಮಾ ಛಾಯಾಗ್ರಾಹಕ ಎಸ್.ವಿ.ಶ್ರೀಕಾಂತ್!
ಛಾಯಾಗ್ರಾಹಕ ಶ್ರೀಕಾಂತ್ ಅವರ ಹೆಸರು ಹೇಳುತ್ತಿದ್ದಂತೆ, ಅವರೇ ಛಾಯಾಗ್ರಹಣ ಮಾಡಿದ ‘ಬಬ್ರುವಾಹನ’, ‘ಅದೇಕಣ್ಣು’ವಿನಂತಹ ಸಿನಿಮಾಗಳ ಹೆಸರು ಹೇಳುತ್ತಾರೆ ಚಿತ್ರರಂಗದ ಅವರ ಒಡನಾಡಿಗಳು. ನೆರಳು–ಬೆಳಕಿನಲ್ಲೇ ಭಾವಗಳನ್ನು ಅನಾವರಣಗೊಳಿಸುತ್ತಿದ್ದ ಅವರ ಕೌಶಲವನ್ನು ವರ್ಣಿಸುತ್ತಾರೆ.
‘ಬಬ್ರುವಾಹನ ಸಿನಿಮಾದ ಆರಾಧಿಸುವೆ ಮದನಾರಿ... ಹಾಡಿನ ದೃಶ್ಯದಲ್ಲಿ ವಿಭಿನ್ನ ಗೆಟಪ್‌ನಲ್ಲಿಐವರು ‘ರಾಜಕುಮಾರ’ರನ್ನು ತೋರಿಸಬೇಕಾಗಿತ್ತು. ಆಗ ಶ್ರೀಕಾಂತ್ ಅವರು ತೋರಿದ ಕ್ಯಾಮೆರಾ ಕೈಚಳಕ... ಆ ಇಡೀ ಸಿನಿಮಾದಲ್ಲಿ ಮಾಸ್ಕ್ ಬಳಸಿ ಟ್ರಿಕ್ಸ್ ಫೋಟೊಗ್ರಫಿ ಮಾಡಿದ್ದಂತೂ ಅಬ್ಬಬ್ಬಾ ಎನ್ನುವಂತಿತ್ತು’ ಎಂದು ನೆನಪಿಸಿಕೊಳ್ಳುತ್ತಾರೆಆ ಸಿನಿಮಾಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಭಾರ್ಗವ. ಇದೇ ಸಿನಿಮಾದಲ್ಲಿ ‘ಪಾತಾಳ ಲೋಕ’ದ ದೃಶ್ಯವನ್ನೂ ಅಷ್ಟೇ ಅದ್ಭುತವಾಗಿ ಚಿತ್ರೀಕರಿಸಿದರಂತೆ. ‘ಅವರು ತುಂಬಾ ಕೂಲ್ ವ್ಯಕ್ತಿತ್ವದವರು. ಅವರೊಟ್ಟಿಗೆ ಕೆಲಸ ಮಾಡಿದೆ ಎನ್ನುವುದಕ್ಕಿಂತ, ಅವರಿಂದ ತುಂಬಾ ಕೆಲಸ ಕಲಿತೆ’ ಎನ್ನುತ್ತಾರೆ ಭಾರ್ಗವ.
ಕಪ್ಪು–ಬಿಳುಪು ಸಿನಿಮಾಗಳಲ್ಲಿ ಶ್ರೀಕಾಂತ್ ಅವರು ಸೃಷ್ಟಿಸುತ್ತಿದ್ದ ‘ನೆರಳು–ಬೆಳಕಿನ’ ಸಂಯೋಜನೆ (ಮೂಡಿ ಲೈಟ್) ಬಗ್ಗೆ ತುಂಬಾ ಮೆಚ್ಚುಗೆ ವ್ಯಕ್ತಪಡಿಸುವ ಬಹುತೇಕ ಹಿರಿಯ ಛಾಯಾಗ್ರಾಹಕರು ‘ಗೆಜ್ಜೆಪೂಜೆ’, ‘ಸಾಕ್ಷಾತ್ಕಾರ’ದಂತಹ ಸಿನಿಮಾಗಳನ್ನು ಉದಾಹರಿಸುತ್ತಾರೆ.
‘ಎಡಕಲ್ಲುಗುಡ್ಡದ ಮೇಲೆ ಸಿನಿಮಾದಲ್ಲಿ ವಿರಹ ನೂರು ನೂರು ತರಹ ಹಾಡಿನಲ್ಲಿ ಮೂಡಿಬರುವ ಕಾಮನಬಿಲ್ಲು ಸೃಷ್ಟಿಸಿದ್ದು ಕೂಡ ಶ್ರೀಕಾಂತ್ ಅವರ ಛಾಯಾಗ್ರಹಣದ ವೈಶಿಷ್ಟ್ಯ’ ಎಂದು ಗುರುತಿಸುತ್ತಾರೆ ಹಿರಿಯ ಛಾಯಾಗ್ರಾಹಕ ಪ್ರಗತಿ ಅಶ್ವತ್ಥನಾರಾಯಣ.‘ಅವರೊಬ್ಬ ಸ್ನೇಹ ಜೀವಿ. ಎಲ್ಲ ಸಹತಂತ್ರಜ್ಞರೊಂದಿಗೆ ಬೆರೆಯುತ್ತಿದ್ದರು. ಸಾಂಸಾರಿಕ ಚಿತ್ರಗಳನ್ನು ಚಿತ್ರೀಕರಿಸಲು ಹೆಚ್ಚು ಆಸಕ್ತಿ ತೋರುತ್ತಿದ್ದರು’ ಎಂದು ನೆನಪಿಸಿಕೊಳ್ಳುತ್ತಾರೆ ಅವರು.
ಹಿರಿಯ ನಟ ಶಿವರಾಂ, ಶ್ರೀಕಾಂತ್ ಅವರನ್ನು ‘ಆಡಂಬರವಿಲ್ಲದ, ಅದ್ಭುತ ಟೆಕ್ನೀಷಿಯನ್. ಮಾತು ಕಡಿಮೆ. ಆದರೆ, ಅನುಭವಿ ಕ್ಯಾಮೆರಮೆನ್’ ಎನ್ನುತ್ತಾರೆ. ಎಡಕಲ್ಲು ಗುಡ್ಡದ ಮೇಲೆ ಸಿನಿಮಾದ ಒಂದು ದೃಶ್ಯದಲ್ಲಿ ಮಳೆ–ಮಿಂಚು ತೋರಿಸಬೇಕಿತ್ತು. ಶ್ರೀಕಾಂತ್ ಅವರು ವೆಲ್ಡಿಂಗ್ ಮೆಷಿನ್ ತರಿಸಿ, ಅದರ ಸ್ಪಾರ್ಕ್‌ನಲ್ಲಿ ಮೂಡುವ ಬೆಳಕನ್ನೇ ಮಿಂಚಿನ ಬೆಳಕಾಗಿ ತೋರಿಸಿದರಂತೆ. ತಮಿಳುನಾಡಿನ ಎವಿಎಂ ಸ್ಟುಡಿಯೊದವರೆಲ್ಲ ಈ ದೃಶ್ಯವನ್ನು ಮೆಚ್ಚಿಕೊಂಡಿದ್ದಾಗಿ ಅವರು ನೆನಪಿಸಿಕೊಳ್ಳುತ್ತಾರೆ.
‘ಬಾಲಿವುಡ್ ಸಿನಿಮಾಗಳಲ್ಲಿ ಖ್ಯಾತ ಛಾಯಾಗ್ರಾಹಕ ವಿ.ಕೆ.ಮೂರ್ತಿಯವರು ಸೃಷ್ಟಿಸುತ್ತಿದ್ದ ‘ನೆರಳು– ಬೆಳಕಿನ’ ಸಂಯೋಜನೆಯನ್ನು ಶ್ರೀಕಾಂತ್ ಅವರ ಕನ್ನಡ ಸಿನಿಮಾಗಳಲ್ಲಿ ನೋಡಬಹುದಿತ್ತು’ ಎಂದು ನೆನಪಿಸಿಕೊಳ್ಳುತ್ತಾರೆ ಸಿನಿಮಾ ಛಾಯಾಗ್ರಹಕ ತಿಪಟೂರಿನ ಬಿ.ಎಸ್. ಬಸವರಾಜು.
ಪುಟ್ಟಣ್ಣ ಕಣಗಾಲ್, ಹುಣಸೂರು ಕೃಷ್ಣಮೂರ್ತಿ ಸೇರಿದಂತೆ ಖ್ಯಾತ ನಿರ್ದೇಶಕರೊಂದಿಗೆ ಕೆಲಸ ಮಾಡಿರುವ ಶ್ರೀಕಾಂತ್, ಸ್ವರ್ಣ ಗೌರಿ, ಪ್ರೇಮಮಯಿ, ಮನಸಿದ್ದರೆ ಮಾರ್ಗ, ಬಹಾದ್ದೂರ್ ಗಂಡು, ನಾ ನಿನ್ನ ಬಿಡಲಾರೆ, ಅದೇ ಕಣ್ಣು, ಶ್ರಾವಣ ಬಂತು, ರಾಣಿ ಮಹಾರಾಣಿ, ವಿಜಯ್ ವಿಕ್ರಮ್, ಎಡಕಲ್ಲು ಗುಡ್ಡದ ಮೇಲೆ ಸೇರಿದಂತೆ 60 ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ.
ಗೆಜ್ಜೆಪೂಜೆ ಮತ್ತು ಉಪಾಸನೆ ಸಿನಿಮಾಗಳ ಛಾಯಾಗ್ರಹಣಕ್ಕೆ ರಾಜ್ಯಪ್ರಶಸ್ತಿ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.